ಲಾಕ್‌ಡೌನ್‌ನಿಂದ ಯಾರಿಗೆ ಏನು ಲಾಭವಾಯಿತೋ, ನಷ್ಟವಾಯಿತೋ ಗೊತ್ತಿಲ್ಲ. ನಾನು ಮಾತ್ರ ಈ ಅವಧಿಯಲ್ಲಿ ಸಾವಿರಗಟ್ಟಲೆ ಹಪ್ಪಳ ತಟ್ಟಿದ್ದೇನೆ. ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ಹಪ್ಪಳ, ಚಿಪ್ಸ್, ಸಂಡಿಗೆ ಮಾಡುವುದು ನಮ್ಮ ಮನೆಯಲ್ಲಿ ಕಾಯಂ. ಆದರೆ, ಈ ಬಾರಿ ನನಗೆ ಸಿಕ್ಕಷ್ಟು ಸಹಕಾರ, ಪ್ರೋತ್ಸಾಹ ಇಷ್ಟು ವರ್ಷಗಳಲ್ಲಿ ಸಿಕ್ಕಿರಲಿಲ್ಲ.
ಸಾಫ್ಟ್‌ವೇರ್ ಹುದ್ದೆಯಲ್ಲಿದ್ದ ಮಗನನ್ನು ಹಲಸಿನ ಮರ ಹತ್ತಿಸಿ (ಒಮ್ಮೆ ಆಫೀಸ್‌ನ ಕಾಲ್ ಬರುವಾಗ ಅವನು ಮರದ ಮೇಲಿದ್ದ), ಎಂಬಿಎ ಓದಿರುವ ಸೊಸೆ ಯನ್ನು ಹಪ್ಪಳದ ಹಿಟ್ಟು ಹದ ಮಾಡಲು ತೊಡಗಿಸಿದೆ. ನಂತರ, ಹಪ್ಪಳವನ್ನು ಕಾಗೆ ಕಚ್ಚಿಕೊಂಡು ಹೋಗದಿರು ವಂತೆ ಇಬ್ಬರು ಚೋಟು ಮೋಟು ಮೊಮ್ಮಕ್ಕಳನ್ನು ಕಾವಲಿಗೆ ಬಿಟ್ಟು, ನಾನು ಹಪ್ಪಳ ಒತ್ತಿದ್ದೇ ಒತ್ತಿದ್ದು.
ತೋಟದ ಸುತ್ತಮುತ್ತಲ ಹಲಸಿನ ಮರಗಳ ಬಲಿತ ಕಾಯಿಗಳೆಲ್ಲ ಮುಗಿದ ನಂತರ, ಅಕ್ಕಿ, ಉದ್ದು ಸಂಡಿಗೆಯ ಸರದಿ. ಆಮೇಲೆ ಹಲಸು, ಗೆಣಸು, ಬಾಳೆ ಕಾಯಿ ಚಿಪ್ಸ್‌ನ ಸರದಿ. ಮಕ್ಕಳು- ಮೊಮ್ಮಕ್ಕಳು ಖುಷಿ ಖುಷಿಯಿಂದ ಕೆಲಸ ಮಾಡಿದ್ದು ನನ್ನ ಪುಣ್ಯ. ಪಾಪ, ಮೊಮ್ಮಕ್ಕಳಂತೂ ದೊಡ್ಡ ಅಂಗಳದ ಮೂಲೆಯಲ್ಲಿರುವ ಮರದ ನೆರಳಲ್ಲಿ ಕುಕ್ಕರಗಾಲಲ್ಲಿ ಕುಳಿತು,
ಕೈಯಲ್ಲೊಂದು ಕೋಲು ಹಿಡಿದು, ಬೆಕ್ಕು, ನಾಯಿ, ಕಾಗೆ ಇತ್ಯಾದಿ ಶತ್ರುಗಳು ಹಪ್ಪಳದ ಸುತ್ತ ಸುಳಿಯ ದಂತೆ ನೋಡಿಕೊಂಡರು. ಇಲ್ಲದಿದ್ದರೆ, ಹಪ್ಪಳ ಮಾಡು ವುದಕ್ಕಿಂತಲೂ ಅದನ್ನು ಕಾಗೆಗಳಿಂದ ಉಳಿಸಿ ಕೊಳ್ಳುವುದೇ ದೊಡ್ಡ ಗೋಳಾಗುತ್ತಿತ್ತು. ಒಟ್ಟಿನಲ್ಲಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನು ಸಾಕಾ ರಗೊಳಿಸಿದ ಬೇಸಿಗೆ ಇದು. ವರ್ಷಪೂರ್ತಿ ಹಪ್ಪಳ ಕರಿಯುವಾಗ ಈ ಲಾಕ್ ಡೌನ್ ನೆನಪಾಗುತ್ತದೆ.
* ಚಂದ್ರಕಲಾ ಶೇಖರ್