ಬೆಂಗಳೂರು: ಮನರಂಜನೆ ಮೂಲಕ ರಸ್ತೆ ಸುರಕ್ಷತೆ ಹಾಗೂ ರಸ್ತೆ ನಿಯಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ದಶಕದ ಹಿಂದೆ ಜವಾಹರ್ ಬಾಲ ಭವನದಲ್ಲಿ ಆರಂಭಿಸಿ, ಸ್ಥಗಿತಗೊಳಿಸಲಾಗಿದ್ದ “ಟ್ರಾಫಿಕ್ ಪಾರ್ಕ್’ಗೆ ಇದೀಗ ನೂತನ ಆಕರ್ಷಣೆಗಳೊಂದಿಗೆ ನವೀಕರಿಸಲಾಗುತ್ತಿದೆ. ಶೀಘ್ರದಲ್ಲೇ ಮಕ್ಕಳಿಗೆ ತೆರೆಯಲಿದೆ.
ಜವಾಹರ್ ಬಾಲ ಭವನವು ಹೊಸ-ಹೊಸ ಚಟುವಟಿಕೆಗಳಿಂದ ಮಕ್ಕಳನ್ನು ಸೆಳೆಯುವ ನೆಚ್ಚಿಣ ತಾಣವಾಗಿದೆ. ಮುಖ್ಯವಾಗಿ ಪುಟಾಣಿ ರೈಲು, ದೋಣಿ ವಿಹಾರ, ಜಾಯಿಂಟ್ ವ್ಹೀಲ್, ವಿಶೇಷ ಚೇತನರಿಗಾಗಿ ವಿಶೇಷ ಆಟಿಕೆಗಳು ಸೇರಿದಂತೆ ಹಲವು ರೀತಿಯ ವೈಜ್ಞಾನಿಕ ಆಟೋಟ ಉಪಕರಣಗಳನ್ನು ಕಾಣಬಹುದಾಗಿದೆ.
ಜೊತೆಗೆ ವಯಸ್ಕರಿಗೂ ಕೆಲ ಆಟಿಕೆಗಳು, ಚಟುವಟಿಕೆಗಳಿದ್ದು, ಮಕ್ಕಳೊಂದಿಗೆ ಸೇರಿ ಅವರು ಮಕ್ಕಳ ರೀತಿಯಲ್ಲಿ ಸಂಭ್ರಮಿಸಬಹುದು. ಪ್ರತಿದಿನ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮಕ್ಕಳಿಗೆ ರಸ್ತೆ ನಿಯಮಗಳ ಅರಿವು ಮೂಡಿಸಲು ಬಾಲ ಭವನವು ಪ್ರಾರಂಭಿಸಿದ್ದ ಟ್ರಾಫಿಕ್ ಪಾರ್ಕ್ ವಿವಿಧ ಕಾರಣಗಳಿಂದಾಗಿ ಸುಮಾರು 10 ವರ್ಷಗಳಿಂದ ಸ್ಥಗಿತವಾಗಿತ್ತು. ಇದೀಗ 1.5 ಎಕರೆ ಪ್ರದೇಶದಲ್ಲಿ ಈ ಟ್ರಾಫಿಕ್ ಪಾರ್ಕ್‌ಗೆ ಮರುಜೀವ ನೀಡಲಾಗುತ್ತಿದೆ. ಈಗಾಗಲೇ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅತೀ ಶೀಘ್ರದಲ್ಲಿ ಮಕ್ಕಳಿಗೆ ತೆರೆಯಲಿದೆ ಎಂದು ಬಾಲ ಭವನ ಸೊಸೈಟಿಯ ಸಿಬ್ಬಂದಿ ಮಾಹಿತಿ ನೀಡಿದರು.
ಟ್ರಾಫಿಕ್ ಪಾರ್ಕ್‌ನ ವೈಶಿಷ್ಟ್ಯಗಳು: ಈ ಸಂಚಾರ ಉದ್ಯಾನದಲ್ಲಿ ಎರಡು ಕಡೆ ಕೆಂಪು, ಹಳದಿ, ಹಸಿರು ಬಣ್ಣ ಹೊಂದಿರುವ ಸಿಗ್ನಲ್, ರಸ್ತೆ ತಿರುವಿನ ಚಿಹ್ನೆಗಳು, ಸಣ್ಣ ರಸ್ತೆಗಳು ಮತ್ತು ರಸ್ತೆ ದಾಟುವಿಕೆಯ ಚಿಹ್ನೆಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ, ಮಕ್ಕಳು ತಾವೇ ಕಾರು ಅಥವಾ ಬೈಕ್ ಚಲಾಯಿಸುವ ಮೂಲಕ ನಿಯಮಗಳನ್ನು ಅರಿತುಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು, ಮಕ್ಕಳಿಗಾಗಿ ಪುಟಾಣಿ ಎಲೆಕ್ಟ್ರಿಕ್ ಕಾರು, ಬೈಕ್‌ಗಳನ್ನು ಹೊಂದಲಾಗುತ್ತದೆ. ಮಕ್ಕಳೇ ಕಾರು ಅಥವಾ ಬೈಕ್ ಅನ್ನು ಚಲಿಸುವ ಮೂಲಕ ಯಾವ ಸಿಗ್ನಲ್ ಇದ್ದಾಗ, ವಾಹನವನ್ನು ನಿಲ್ಲಿಸಬೇಕು, ಯಾವ ಸಿಗ್ನಲ್ ಇದ್ದಾಗ ವಾಹನ ಚಲಿಸಬೇಕು, ಸ್ಪೀಡ್ ಬ್ರೇಕರ್, ರಸ್ತೆಯಲ್ಲಿ ತಿರುವುಗಳಿದ್ದರೆ ಯಾವ ರೀತಿಯ ಚಿಹ್ನೆಗಳನ್ನು ಕಾಣಬಹುದಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಎಂಬ ವಿವಿಧ ನಿಯಮಗಳ ಬಗ್ಗೆ ಇಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇಲ್ಲಿ ವಿಶೇಷವಾಗಿ ಆಡಿಯೊ ಪ್ರೊಜೆಕ್ಷನ್ ಸೌಲಭ್ಯವನ್ನೂ ಹೊಂದಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಚಲನಚಿತ್ರಗಳು/ಸ್ಲೈಡ್ ಶೋಗಳನ್ನು ಸಹ ಮಕ್ಕಳಿಗೆ ತೋರಿಸಲಾಗುತ್ತದೆ. ಜತೆಗೆ ಈ ಪಾರ್ಕ್‌ನ ಮಧ್ಯೆದಲ್ಲಿ ನೀರಿನ ಫೌಂಟೇನ್ ಕೂಡ ಮಕ್ಕಳನ್ನು ಆಕರ್ಷಿಸಲಿದೆ ಎಂದು ತಿಳಿಸಿದರು.
ರಾಕ್ ಕ್ಲೈಬಿಂಗ್ ನಿರ್ಮಾಣ: ಮತ್ತೂಂದು ಆಕರ್ಷಣೀಯವಾದ ರಾಕ್ ಕ್ಲೈಬಿಂಗ್ ಅನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಮನರಂಜನೆ ಹಾಗೂ ಸಂರಕ್ಷಣೆಗಾಗಿ ಈ ರಾಕ್ ಕ್ಲೈಬಿಂಗ್ ಅನ್ನು ನಿರ್ಮಿಸಲಾಗುತ್ತಿದೆ. ಇದೊಂದು ಗೋಡೆ ಮಾದರಿಯಿದ್ದು, ಅಲ್ಲಲ್ಲಿ ಮಕ್ಕಳಿಗೆ ಹತ್ತಲು ಪೂರಕವಾದ ಗುರುತುಗಳಿವೆ. ಒಂದು ವೇಳೆ ಹತ್ತುವಾಗ ಆಯ ತಪ್ಪಿ ಜಾರಿ ಬಿದ್ದರೆ ಪೆಟ್ಟಾಗದಂತೆ ತಡೆಯಲು ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಬಾಲ ಭವನದಲ್ಲಿ “ಡ್ಯಾಶಿಂಗ್ ಕಾರ್ ಪಾರ್ಕ್’ ನಿರ್ಮಿಸುವ ಚಿಂತನೆಯೂ ಕೂಡ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಕ್ಕಳಿಗೆ ರಸ್ತೆ ಸುರಕ್ಷತೆ ಹಾಗೂ ಟ್ರಾಫಿಕ್ ಸಿಗ್ನಲ್‌ಗಳನ್ನು ಆಡುತ್ತಾ-ನಲಿಯುತ್ತಾ ಕಲಿಯುವ ಉದ್ದೇಶದಿಂದ ಜವಾಹರ್ ಬಾಲಭವನದಲ್ಲಿ ಮಕ್ಕಳ ಟ್ರಾಫಿಕ್ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಕ್ಕಳಿಗೆ ಇದು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಖಂಡಿತ.
– ಬಿ.ಆರ್. ನಾಯ್ಡು, ಅಧ್ಯಕ್ಷರು, ಜವಾಹರ ಬಾಲಭವನ ಸೊಸೈಟಿ.
– ಭಾರತಿ ಸಜ್ಜನ್