Advertisement
ಇಲ್ಲಿನ ಅನಂತನಗರದ ಪರ್ಪಲ್ ಸ್ಪೇಸ್ ಗ್ರಂಥಾಲಯ 2018ರಲ್ಲಿ ತೆರೆದುಕೊಂಡಿದೆ. ಇಲ್ಲಿ 7 ಸಾವಿರ ಪುಸ್ತಕ ಸಂಗ್ರಹವಿದೆ. ಕೇವಲ ಪುಸ್ತಕಗಳ ಓದುವಿಕೆಗಾಗಿ ಗ್ರಂಥಾಲಯದೆಡೆಗೆ ಮಕ್ಕಳು ಬರುವುದು ಇಂದಿನ ದಿನಗಳಲ್ಲಿ ಕಷ್ಟ ಎಂದರಿತು, ಪುಸ್ತಕ ಓದಿನ ಜತೆಗೆ ಜೀವನ ಪಾಠ ಕಲಿಸುವ ಇತರೆಲ್ಲ ಚಟುವಟಿಕೆಗಳನ್ನು ಒದಗಿಸುತ್ತಿರುವುದು ಇಲ್ಲಿನ ವಿಶೇಷ. ಮಕ್ಕಳ ಅಭಿರುಚಿಗೆ ತಕ್ಕಂತೆ ಓದಿಗೆ ಪೂರಕವಾಗಿ ಹಲವು ಚಟುವಟಿಕೆಗಳು ಇಲ್ಲಿವೆ. ಅಕ್ಷರ ಜ್ಞಾನದ ಜತೆಗೆ ಬದುಕುವ ಕಲೆ, ಉದ್ಯೋಗಕ್ಕೆ ಪೂರಕವಾದ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ಗ್ರಂಥಾಲಯದಲ್ಲಿ ಫೋನಿಕ್ಸ್ ಬೋರ್ಡ್ ಆಟಗಳು, ಕಾಗುಣಿತ ಮತ್ತು ಓದುವಿಕೆ ಸಿದ್ಧತೆ, ಡೇ ಕೇರ್ ಬುಕ್ ಕ್ಲಬ್, ಲೆಗೋ ಪದಬಂಧ, ತಾರ್ಕಿಕ ಆಟಗಳು, ಏಕಾಗ್ರತೆ ಆಟಗಳು, ರಜಾ ಶಿಬಿರಗಳು ಕಲೆ ಮತ್ತು ಕರಕುಶಲ ವಸ್ತು ತಯಾರಿಕೆ, ಸಂಗೀತ, ನೃತ್ಯ ಹಾಗೂ ವಿವಿಧ ರೀತಿಯ ಚಟುವಟಿಕೆಗಳು ಇಲ್ಲಿವೆ. ಬುಕ್ ರೈಟಿಂಗ್, ಎಲೆಕ್ಟ್ರಾನಿಕ್ಸ್ ತರಗತಿ, ಚಿಟ್ಟೆ, ಪಕ್ಷಿ ಪ್ರಬೇಧ ಗುರುತಿಸುವಿಕೆ, ಪ್ರಾಣಿ, ಪ್ರಕೃತಿ ವೀಕ್ಷಣೆ ಜತೆಗೆ ಸ್ವತ್ಛತೆಯ ಪಾಠ ಸಹಿತ ನೈಸರ್ಗಿಕ, ಪರಿಸರ ಪೂರಕ ಕಲಿಕೆಯನ್ನು ಓದಿನ ಜತೆಗೆ ನೀಡಲಾಗುತ್ತದೆ. ಮಕ್ಕಳ, ಪೋಷಕರ ಹುಟ್ಟು ಹಬ್ಬ ಆಚರಣೆ, ಹಿಂದಿ ದಿನಾಚರಣೆ ಹೀಗೆ ವಿವಿಧ ಚಟುವಟಿಕೆಗಳನ್ನು ಆಯಾ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಇಲ್ಲಿ ನಡೆಸಲಾಗುತ್ತದೆ. ಪುಸ್ತಕ ಓದುವುದರೊಂದಿಗೆ ಅವರಿಗಿಷ್ಟವಾದ ಅಭಿರುಚಿಯ ಜ್ಞಾನವೂ ಇಲ್ಲಿ ದೊರಕುತ್ತದೆ. ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಿದ್ದು, ಊಟ-ತಿಂಡಿ ಎಲ್ಲವನ್ನು ಮರೆತು ಮೊಬೈಲ್, ಟಿವಿ ವೀಕ್ಷಣೆಯಲ್ಲಿ ತಲ್ಲೀನರಾಗಿರುತ್ತಾರೆ. ರೀಲ್ಸ್ ಮಾಡುವುದು, ನೋಡುವುದರಲ್ಲೇ ದಿನ ಕಳೆಯುತ್ತಿರುತ್ತಾರೆ. ಇವುಗಳಿಂದ ಮಕ್ಕಳನ್ನು ಹೊರತರುವುದೇ ಕಷ್ಟ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ. ಅಲ್ಲದೆ ಇಂತಹ ಸ್ಥಿತಿ ಮಕ್ಕಳ ಮಾನಸಿಕತೆ ಮೇಲೆಯೂ ಪರಿಣಾಮ ಬೀರುತ್ತಿದೆ. ಇದೆಲ್ಲದರ ಪರಿಹಾರವಾಗಿ ಪ್ರಾಯೋಗಿಕ ಚಟುವಟಿಕೆ ಮೂಲಕ ಮಕ್ಕಳನ್ನು ಗ್ರಂಥಾಲಯದೆಡೆಗೆ ಆಕರ್ಷಿಸುವ ವಿನೂತನ ಪ್ರಯತ್ನ ಈ ಗ್ರಂಥಾಲಯದ್ದಾಗಿದೆ.
Related Articles
ಒಡಿಶಾ ಮೂಲದವರಾದ ಪಲ್ಲವಿ ಬೆಹರಾ ಅವರು ಈ ಗ್ರಂಥಾಲಯದ ಮುಖ್ಯಸ್ಥರು. ಇವರು ಗುರುಕುಲ ಮಾದರಿ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿದ್ದು ತಮ್ಮ ಇಬ್ಬರು ಮಕ್ಕಳಿಗೂ ಇದೇ ಮಾದರಿಯಲ್ಲಿ ಜೀವನ ಪಾಠದ ಶಿಕ್ಷಣ ನೀಡಿದ್ದಾರೆ. ಇವರ ಪತಿ ಆ್ಯಂಟನಿ ಮಾಹೆ ವಿ.ವಿ.ಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪವಿತ್ರಾರವರು ಕನ್ನಡ ಭಾಷೆಯನ್ನು ಸುಲಲಿತವಾಗಿ ಕಲಿತುಕೊಂಡಿದ್ದಾರೆ. ಗ್ರಂಥಾಲಯದಲ್ಲಿ ವಿವಿಧ ಚಟುವಟಿಕೆ ನಡೆಸಲು 5 ಮಂದಿ ಸಿಬಂದಿಯನ್ನು ನೇಮಿಸಿಕೊಂಡಿದ್ದಾರೆ.
Advertisement
ಒತ್ತಡದಿಂದ ಹೊರತರಬೇಕುಪ್ರಸ್ತುತ ಓದುವ ಅಭಿರುಚಿಯೇ ಮಾಯವಾಗಿದೆ. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆತ್ಮಹತ್ಯೆಯಂತಹ ಅಲೋಚನೆಗಳಿಗೆ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಪೋಷಕರು ಬಾಲ್ಯದಿಂದಲೇ ಮಕ್ಕಳ ಅಭಿರುಚಿಯನ್ನು ಗುರುತಿಸಿ ಅದನ್ನು ಪೋಷಿಸಬೇಕು. ಓದಿನ ಜತೆಗೆ ಅವರ ಆಸಕ್ತಿಯನ್ನು ಬೆಂಬಲಿಸಿ, ಬೆಳೆಸಿದರೆ ಭವಿಷ್ಯ ಚೆನ್ನಾಗಿರಲಿದೆ. ಓದುತ್ತ ಕಲಿಯುವ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇಂದಿಗೆ ಅವಶ್ಯ.
-ಪಲ್ಲವಿ ಬೆಹರಾ, ಗ್ರಂಥಾಲಯ ಮುಖ್ಯಸ್ಥೆ ಕಸದಿಂದ ರಸ ಪಾಠ
ಗ್ರಂಥಾಲಯದೊಳಗೆ ಪುಸ್ತಕ ಸಂಗ್ರಹಿಸಿಡಲು ಯಾವುದೇ ವಿಶೇಷ ಬುಕ್ ರ್ಯಾಕ್ಗಳಿಲ್ಲ. ಬಳಸಿ ಬಿಸಾಡಬಹುದಾದ ವಸ್ತುಗಳಾದ ತರಕಾರಿ ಇರಿಸುವ ಪೆಟ್ಟಿಗೆ, ಪೇಪರ್ನಿಂದ ರಚಿಸಲ್ಪಟ್ಟ ಪರಿಕರ, ಬುಟ್ಟಿ, ಬಿಸಾಕಿದ ಪೈಂಟ್ನ ಖಾಲಿ ಬಕೆಟ್ಗಳು ಇತ್ಯಾದಿಗಳನ್ನು ವಿನ್ಯಾಸಗೊಳಿಸಿ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ಗ್ರಂಥಾಲಯದಲ್ಲಿ ಬಳಸಿದ ಪ್ರತಿಯೊಂದು ವಸ್ತುವು ತ್ಯಾಜ್ಯ, ಅನುಪಯುಕ್ತ ವಸ್ತುಗಳಿಂದ ತಯಾರಿಸಿದ್ದಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಇಲ್ಲಿ ಪುಸ್ತಕ ಜೋಡಿಸಿಡಲು ಬಳಸಿರುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. -ಬಾಲಕೃಷ್ಣ ಭೀಮಗುಳಿ