Advertisement

ಶಿರೂರು ಅಣೆಕಟ್ಟು ಎತ್ತರಿಸಿದರೂ ನೀರಿನ ಕೊರತೆ ಸಂಭವ

06:15 AM Apr 03, 2018 | |

ಉಡುಪಿ: ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಈಡೇರಿಸುವುದೇ ನಗರಸಭೆಗೆ ಸವಾಲಾಗಿ ಪರಿಣಮಿಸಿದೆ. 

Advertisement

ಈ ಮಧ್ಯೆ ಶಿರೂರು ಬಳಿ ಇರುವ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಏರಿಸಿದರೂ ಬಹಳ ಪ್ರಯೋಜನವಾಗದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಪ್ರಸ್ತುತ ಒಂದು ಮೀಟರ್‌ನಷ್ಟು ಎತ್ತರದ ಬಂಡ್‌ಗಳನ್ನು ಹಾಕಿ ನೀರು ನಿಲ್ಲಿಸಲಾಗುತ್ತಿದೆ. ಇದರಿಂದ ಸಿಗಬಹುದಾದ ಒಂದು ಮೀಟರ್‌ ಹೆಚ್ಚುವರಿ ನೀರು ಕನಿಷ್ಠ ಒಂದು ವಾರಕ್ಕೆ ಸಾಲಬಹುದು. ಆದರೆ ಇದಕ್ಕಾಗಿ ಸ್ಥಳೀಯ ಸುಮಾರು 70 ಎಕ್ರೆ ಕೃಷಿ ಭೂಮಿ ಮುಳುಗಡೆಯಾಗಲಿದೆ. ಜತೆಗೆ ಇಲ್ಲಿಯ ನದಿಪಾತ್ರ ಕಲ್ಲುಬಂಡೆಯಿಂದ ಕೂಡಿದ್ದು, ಬಹಳ ನೀರು ಸಂಗ್ರಹಿಸಲಾಗದು. ಇಲ್ಲಿನ ಗುಂಡಿಗಳಲ್ಲಿ ನೀರು ನಿಂತರೆ ಪುನಾ ಪಂಪ್‌ಗ್ಳಮೂಲಕ ಬಜೆಗೆ ಹಾಯಿಸಬೇಕು ಎನ್ನುತ್ತಾರೆ ತಾಂತ್ರಿಕ ಪರಿಣಿತರು.

ವಾರಾಹಿಯಿಂದ 21 ಎಂಎಲ್‌ಡಿ ನೀರು 
ನಗರದ ಜನರಿಗೆ ವಾರಾಹಿಯಿಂದ ಕುಡಿಯುವ ನೀರು ಪೂರೈಸಲು ಯೋಜಿಸಲಾಗಿದೆ. ಸುಮಾರು 38.ಕಿ.ಮೀ. ಪೈಪ್‌ಲೈನ್‌ ಮೂಲಕ 30 ಎಂಎಲ್‌ಡಿ ನೀರು ತರಲು 300 ಕೋ.ರೂ. ವ್ಯಯಿಸಲಾಗುತ್ತಿದೆ. ಈ ನೀರನ್ನು 12 ಗ್ರಾಮಗಳ ಮೂಲಕ ಹಾಯಿಸುವುದರಿಂದ ಆ ಗ್ರಾಮಗಳಿಗೂ ನೀರು ಪೂರೈಸಬೇಕು. ಅದಕ್ಕಾಗಿ ಕನಿಷ್ಠ 3 ಎಂಎಲ್‌ಡಿ ನೀರು ಬಳಕೆಯಾಗಲಿದೆ. ನೀರನ್ನು ತರುವಾಗ ಶೇ. 15 ರಿಂದ ಶೇ.20 ರಷ್ಟು ಸೋರಿಕೆಯಾಗಬಹುದು. ಅಂದರೆ ಸುಮಾರು 6 ಎಂಎಲ್‌ಡಿ. ಒಟ್ಟೂ 9 ಎಂಎಲ್‌ಡಿ ಬಳಕೆಯಾಗಿ 21 ಎಂಎಲ್‌ಡಿ ನೀರು ನಗರಕ್ಕೆ ಸಿಗಲಿದೆ.
 
ದೂರದೃಷ್ಟಿಯ ಕೊರತೆ
ವಾರಾಹಿಯಿಂದ ಉಡುಪಿಗೆ ನೀರು ತರುವ ಪೈಪ್‌ಗ್ಳ ವ್ಯಾಸ 85 ಮೀ. ರ ಬದಲು 1.3 ಮೀ. ವ್ಯಾಸವಿದ್ದರೆ ಸೂಕ್ತ. ನೀರೆತ್ತುವ ಪಂಪ್‌ಗ್ಳನ್ನು ಕಾಲ ಕ್ರಮೇಣ ಬದಲಿಸಬಹುದು. ಆದರೆ ಪೈಪ್‌ಗ್ಳನ್ನು ಬದಲಿಸಲಾಗದು. ಹಾಗಾಗಿ ಭವಿಷ್ಯದ ದೃಷ್ಟಿಯಿಂದ 1.3 ಮೀ. ವ್ಯಾಸದ ಪೈಪ್‌ ಅಳವಡಿಸಬೇಕು ಎನ್ನುತ್ತಾರೆ ತಜ್ಞರು.

ನೀರು ಪೂರೈಕೆಗೆ 117 ಕೋ.ರೂ.
ನಗರಕ್ಕೆ ವಾರಾಹಿ ನೀರು ಪೂರೈಸಲು 117 ಕೋ.ರೂ.ಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 
347 ಕಿ.ಮೀ. ಪರ್ಯಾಯ ಪೈಪ್‌ಲೈನ್‌ ಮತ್ತು 34 ಸಾವಿರ ಅಟೋಮ್ಯಾಟಿಕ್‌ ಮೀಟರ್‌ ರೀಡಿಂಗ್‌ ಉಪಕರಣಗಳ ಅಳವಡಿಕೆಯೂ ಸೇರಿದೆ. ಜತೆಗೆ ಎಂಟು ವರ್ಷಗಳ ಕಾಲ ವಾರ್ಷಿಕ 9 ಕೋ.ರೂ.ಗಳಂತೆ ನಿರ್ವಹಣಾ ವೆಚ್ಚವೂ ಸೇರಿದೆ.

Advertisement

5.5 ಕೋ.ರೂ. ವಿದ್ಯುತ್‌ ಬಿಲ್‌
ನಗರಸಭೆಯು ಸುಮಾರು 20 ಸಾವಿರ ನೀರಿನ ಸಂಪರ್ಕದಿಂದ ವಾರ್ಷಿಕ 9 ಕೋ.ರೂ. ಆದಾಯ ಪಡೆಯುತ್ತಿದೆ. ನೀರು ಶುದ್ಧೀಕರಣ ಘಟಕ, ಬಜೆ ನೀರೆತ್ತುವ ಪಂಪ್‌ಗ್ಳು, ಸ್ಥಳೀಯ ನೀರು ಪೂರೈಕೆ- ಹೀಗೆ ಇವುಗಳ ವಿದ್ಯುತ್‌ ಬಿಲ್‌ ಪ್ರತಿ ವರ್ಷಕ್ಕೆ 5.5 ಕೋ.ರೂ. ಬರುತ್ತಿದೆ. ಈ ಹಂತದಲ್ಲಿ  ವಾರ್ಷಿಕ ನಿರ್ವಹಣಾ ವೆಚ್ಚ 9 ಕೋ.ರೂ. ಬಂದರೆ ಸಾಕಾಗುವುದೇ ಎಂಬುದು ನಗರಸಭೆ ಅಧಿಕಾರಿಗಳ ಚಿಂತೆ.

ಶೀಘ್ರ ವಾರಾಹಿ ಟೆಂಡರ್‌ 
ವಾರಾಹಿ ಯೋಜನೆಯ ಸಾಧಕ ಬಾಧಕಗಳ ಅಧ್ಯಯನ ನಡೆಯಬೇಕೆಂಬ ಮಾತು ಕೇಳಿಬರುತ್ತಿರುವಾಗಲೇ ಟೆಂಡರ್‌ ಪ್ರಕ್ರಿಯೆ ಏಪ್ರಿಲ್‌ ಮೊದಲ ವಾರದಲ್ಲಿ ನಡೆಯುವ ಸಂಭವವಿದೆ. ಬೇಸಗೆಯ ಒಂದೆರಡು ತಿಂಗಳ ಬಳಕೆಗೆ 300 ಕೋಟಿ ರೂ. ವಿನಿಯೋಗವಾಗುವುದು ಸೂಕ್ತವೇ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೀಂಬ್ರ ಪ್ರಾಂತ ಉತ್ತಮ
ಸ್ವರ್ಣಾ ನದಿ ಹರಿದು ಅರಬ್ಬಿ ಸಮುದ್ರ ಸೇರುವ ಮುನ್ನ ಇರುವ ಪ್ರದೇಶ ಸುಮಾರು 8 ಕಿ.ಮೀ. ವಿಸ್ತಾರವಾಗಿದೆ. ಹೆರ್ಗ, ಶೆಟ್ಟಿ ಬೆಟ್ಟು ಪರಿಸರದಲ್ಲಿ ನದಿಯ ನೀರು ಆಳದಲ್ಲಿ ಸಂಗ್ರಹವಾಗುತ್ತಿದ್ದು, ಇಲ್ಲಿ ನೀರು ನಿಲ್ಲಿಸಿದರೆ ಹೆಚ್ಚು ಲಾಭವಾಗಬಹುದು ಎನ್ನುತ್ತಾರೆ ಪರಿಣಿತರು.

ಏನಿದು ಎಎಂಆರ್‌ ?
ಅಟೋಮ್ಯಾಟಿಕ್‌ ಮೀಟರ್‌ ರೀಡಿಂಗ್‌ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಸ್ತುತ ಇರುವ ನೀರಿನ ಮೀಟರ್‌ಗಳನ್ನು ತೆಗೆದು ಈ ಎಂಎಂಆರ್‌ ಗಳನ್ನು ಅಳವಡಿಸಲಾಗುತ್ತದೆ. ಈ ಮೀಟರ್‌ನಲ್ಲಿ ಸಿಮ್‌ ಅಳವಡಿಸಿದ್ದು, ಪ್ರತಿ ಗ್ರಾಹಕರಿಂದ ಸರ್ವರ್‌ ಮೂಲಕ ಮಾಹಿತಿ ರವಾನೆಯಾಗುತ್ತದೆ. ಹೀಗಾದಾಗ ಮಾಸಿಕ ಮೀಟರ್‌ ಮಾಪನ ಓದಬೇಕಾಗಿಲ್ಲ ಹಾಗೂ ನೀರು ಸೋರಿಕೆ-ಅಪವ್ಯಯವನ್ನೂ ಪತ್ತೆ ಹಚ್ಚಬಹುದು. 

– ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next