ತೀರ್ಥಹಳ್ಳಿ: ಯಾವುದೇ ಪೂಜೆ ಆರಂಭಕ್ಕೂ ಮುನ್ನ ಗಣಪತಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ. ಆದರೆ ಕ್ರಿಯಾಶೀಲ ವ್ಯಕ್ತಿಯಾಗಿರುವ ಬಿ ಗಣಪತಿ ಅವರಿಗೆ ಮೊದಲಿಗೆ ಅಲ್ಲದಿದ್ದರೂ ಸ್ವಲ್ಪ ಸಮಯದ ನಂತರ ಸೂಕ್ತವಾದ ಸ್ಥಾನಮಾನ ಸಿಕ್ಕಿದೆ. ಇವರಿಂದ ಜನರಿಗೆ ಅನುಕೂಲವಾಗಲಿ, ಸರ್ಕಾರದ ಹಲವು ಯೋಜನೆಗಳು ಜನರಿಗೆ ತಲುಪಲಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ ಮಂಜುನಾಥ್ ಗೌಡ ಹೇಳಿದರು.
ಶುಕ್ರವಾರ ಪಟ್ಟಣ ಪಂಚಾಯತ್ ನಲ್ಲಿ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿ. ಗಣಪತಿ ಅವರ ನೂತನ ಕೊಠಡಿ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಾಗಲೇ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷಕ್ಕಾಗಿ ಹಲವು ರೀತಿಯಲ್ಲಿ ದುಡಿದಿದ್ದಾರೆ. ಅಷ್ಟೇ ಅಲ್ಲದೆ ಯಕ್ಷಗಾನ ಕಲಾವಿದರಾಗಿ, ಪತ್ರಕರ್ತರಾಗಿ ಅನುಭವ ಹೊಂದಿರುವ ಇವರ ಕೆಲಸದ ಮೇಲೆ ಸಾಕಷ್ಟು ಕುತೂಹಲವಿದ್ದು, ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ ಎಂದು ಆಶೀಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಇಲ್ಲಿಯವರೆಗೆ ಬಿ. ಗಣಪತಿ ಒಳ್ಳೊಳ್ಳೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಾದ ನಂತರ ಸಾರ್ವಜನಿಕ ಹಿತದೃಷ್ಟಿಯಿಂದ ಪಟ್ಟಣ ಪಂಚಾಯತ್ ಗೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆ ಹೆಸರನ್ನು ತಂದು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಿ ಇನ್ನು 20 ವರ್ಷಗಳ ಕಾಲ ಬಿಜೆಪಿ ಪಕ್ಷದವರಿಗೆ ಅಧಿಕಾರ ಕೊಡಬಾರದು ಎಂದರು.
ಈಗಾಗಲೇ ಯಕ್ಷಗಾನ ಕ್ಷೇತ್ರ, ಎಪಿಎಂಸಿ ಸದಸ್ಯರಾಗಿ, ಪತ್ರಕರ್ತರಾಗಿ ಯಶಸ್ಸನ್ನು ಕಂಡಿದ್ದೀರಾ, ಹಾಗೆ ಇನ್ನು ಈ ಸ್ಥಾನದಿಂದ ಜನರ ಅಹವಾಲು ಸ್ವೀಕರಿಸುತ್ತ, ಅವರ ಕಷ್ಟಕ್ಕೆ ಸ್ಪಂದಿಸುತ್ತ ನಿಮ್ಮ ಅಧಿಕಾರ ಅವಧಿಯಲ್ಲಿ ಪಟ್ಟಣದ ಜನರೆಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಬಿ. ಗಣಪತಿ ಮಾತನಾಡಿ, ಅವಕಾಶವನ್ನು ನಾವು ಹುಡುಕಿಕೊಂಡು ಹೋಗಬಾರದು. ರಾಜಕೀಯದಲ್ಲಿ ಅರ್ಹತೆ ಇದ್ದವರು ಮೂಲೆ ಗುಂಪಾಗುವ ಸಾಧ್ಯತೆ ಇರುತ್ತದೆ. ಅಧಿಕಾರ ಹಂಚುವಾಗ ಪಕ್ಷದ ಬದ್ಧತೆಗೆ ನಾವು ಹೊಂದಿಕೊಂಡು ಹೋಗಬೇಕಾಗಿರುತ್ತದೆ. 30 ವರ್ಷಗಳಿಂದ ರಾಜಕೀಯದಲ್ಲಿ ಇದ್ದರೂ ಕೂಡ ಈಗ ಒಳ್ಳೆಯ ಅವಕಾಶ ಸಿಕ್ಕಿದೆ. ಜನರ ಅನುಕೂಲಕ್ಕಾಗಿ ಏನೆಲ್ಲಾ ಮಾಡಬೇಕು ಆ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷ ಗೀತಾ ರಮೇಶ್, ಮುಖ್ಯಾಧಿಕಾರಿ, ಕುರಿಯಾಕೋಸ್, ನಾರಾಯಣ ರಾವ್, ಕೆಸ್ತೂರು ಮಂಜುನಾಥ್, ಮೂಡಬಾ ರಾಘವೇಂದ್ರ, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.