Advertisement

ಮೂರನೇ ಟೆಸ್ಟ್‌ ಪಂದ್ಯ: ದಕ್ಷಿಣ ಆಫ್ರಿಕಾ 118ಕ್ಕೆ ಸರ್ವಪತನ; ಇಂಗ್ಲೆಂಡ್‌ ಮೇಲುಗೈ 

10:21 PM Sep 10, 2022 | Team Udayavani |

ಓವಲ್‌: ಸರಣಿ ನಿರ್ಣಾಯಕ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಮೇಲುಗೈ ಸಾಧಿಸಿದೆ. ಪಂದ್ಯದ ಮೂರನೇ ದಿನ ಆಟ ಆರಂಭವಾಗಿದ್ದು ಆತಿಥೇಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಕೇವಲ 118 ರನ್ನಿಗೆ ಆಲೌಟಾಗಿದೆ.

Advertisement

ಇದಕ್ಕುತ್ತರವಾಗಿ ಇಂಗ್ಲೆಂಡ್‌ 4 ವಿಕೆಟಿಗೆ 107 ರನ್‌ ಗಳಿಸಿ ಆಡುತ್ತಿದೆ. ಈ ನಡುವೆ ಸ್ವಲ್ಪ ಹೊತ್ತು ಮಳೆಯಿಂದ ಆಟ ಸ್ಥಗಿತಗೊಂಡಿತ್ತು. ಒಲಿ ಪೋಪ್‌ 48 ರನ್‌ ಗಳಿಸಿ ಆಡುತ್ತಿದ್ದಾರೆ.

ಒಲಿ ರಾಬಿನ್ಸನ್‌ (49ಕ್ಕೆ 5) ಮತ್ತು ಸ್ಟುವರ್ಟ್‌ ಬ್ರಾಡ್‌ (41ಕ್ಕೆ 4) ಅವರ ಭರ್ಜರಿ ದಾಳಿಗೆ ದಕ್ಷಿಣ ಆಫ್ರಿಕಾ ನೆಲಕಚ್ಚಿದೆ. ಪ್ರವಾಸಿ ತಂಡದ ಯಾವುದೇ ಆಟಗಾರ ಉತ್ತಮ ಪ್ರದರ್ಶನ ನೀಡಲು ವಿಫ‌ಲರಾದರು. 30 ರನ್‌ ಗಳಿಸಿದ ಮಾರ್ಕೊ ಜಾನ್ಸೆನ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಎರಡನೇ ಓವರಿನಲ್ಲಿಯೇ ತಂಡದ ಮೊದಲ ವಿಕೆಟ್‌ ಪತನಗೊಂಡಿತ್ತು. 36 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಖಾಯ ಝಂಡೊ ಮತ್ತು ಮಾರ್ಕೊ ಜಾನ್ಸೆನ್‌ 7 ವಿಕೆಟಿಗೆ 36 ರನ್‌ ಪೇರಿಸಿದ್ದರಿಂದ ತಂಡ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಚಾನ್ಸೆನ್‌ ಎಂಟನೆಯವರಾಗಿ ಔಟ್‌ ಆದಾಗ ತಂಡದ ಮೊತ್ತ 99 ತಲಪಿತ್ತು.

ಶನಿವಾರದ ಆಟ ಆರಂಭವಾಗುವ ಮೊದಲು ಅಗಲಿದ ರಾಜಿ ಎಲಿಜಬೆತ್‌ ಗೌರವಾರ್ಥ ಉಭಯ ತಂಡಗಳ ಸದಸ್ಯರು ಮೈದಾನದಲ್ಲಿ ಸಾಲಾಗಿ ನಿಂತು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು. ಈ ಮೊದಲು ಗುರುವಾರದ ಮೊದಲ ದಿನದ ಆಟ ಟಾಸ್‌ಗಷ್ಟೇ ಸೀಮಿತವಾಗಿತ್ತು. ಬಳಿಕ ಸುರಿದ ಭಾರೀ ಮಳೆಯಿಂದ ಒಂದೂ ಎಸೆತ ಸಾಧ್ಯವಾಗಲಿಲ್ಲ. ಅಗಲಿದ ರಾಣಿ ಎಲಿಜಬೆತ್‌ ಗೌರವಾರ್ಥ ಶುಕ್ರವಾರದ ಆಟವನ್ನು ಮುಂದೂಡಲಾಗಿತ್ತು. ಈ ನಿರ್ಧಾರ ದಿಂದ ಪಂದ್ಯವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲು ಪ್ರಯತ್ನಿಸಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡ ಮಂಗಳವಾರವೇ ತವರಿಗೆ ಮರಳಬೇಕಿದ್ದರಿಂದ ಇದು ಸಾಧ್ಯವಾಗಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next