Advertisement

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

01:00 AM Dec 30, 2024 | Team Udayavani |

ಸಿಯೋಲ್‌: “ವಿಮಾನದ ರೆಕ್ಕೆಗಳಿಗೆ ಹಕ್ಕಿ ಢಿಕ್ಕಿಯಾಗಿದೆ!… ಬಹುಶಃ ಇದು ನನ್ನ ಕೊನೆಯ ಮಾತಿರಬಹುದು’.

Advertisement

ಇದು, ದಕ್ಷಿಣ ಕೊರಿಯಾದಲ್ಲಿ ರವಿವಾರ ಮುಂಜಾನೆ ಪತನಕ್ಕೀಡಾದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಕುಟುಂಬಕ್ಕೆ ಕಳುಹಿಸಿದ ಕೊನೇ ಸಂದೇಶ. ತಮ್ಮವರಿಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ನಿಂತಿದ್ದ ಕುಟುಂಬಸ್ಥರ ಪಾಲಿಗೆ ಈ ಸಂದೇಶ ನಿಂತ ನೆಲವನ್ನೇ ಕುಸಿದಂತಾಗಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ.
ಹೌದು, 3 ವರ್ಷದ ಹಸುಗೂಸಿನಿಂದ ಹಿಡಿದು 78ರ ವೃದ್ಧರ ವರೆಗೆ 181 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೀಡಾಗಿ ಛಿದ್ರಗೊಂಡಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಿಮಾನ ಸ್ಫೋಟಗೊಂಡ ತೀವ್ರತೆಗೆ ಒಳಗಿದ್ದವರ ಪೈಕಿ ಇಬ್ಬರನ್ನು ಹೊರತುಪಡಿಸಿ ಮಿಕ್ಕವರೆಲ್ಲ ಛಿದ್ರವಾಗಿ ಹೋಗಿದ್ದು, ಹಲವರ ಮೃತದೇಹವೂ ಸಿಗದಾಗಿದೆ.

ಮೃತರ ಕುಟುಂಬಸ್ಥರು ವಿಮಾನ ನಿಲ್ದಾಣದ ಹೊರಗೆ ಅತ್ತು ಸೋತು, ಅಸ್ವಸ್ಥರಾಗಿರುವ ಸ್ಥಿತಿಗೆ ತಲುಪಿದ್ದರೆ, ಇತ್ತ ವಿಮಾನ ನಿಲ್ದಾಣದ ಸಿಬಂದಿ ರಕ್ಷಣೆಗೆಂದು ದೌಡಾಯಿಸಿದ ಸ್ಥಳದಲ್ಲೇ ಪ್ರಯಾಣಿಕರ ಬಟ್ಟೆಗಳು, ಬ್ಯಾಗ್‌, ನೀರಿನ ಬಾಟಲಿಗಳು ರಕ್ತಸಿಕ್ತವಾಗಿ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಭಾವುಕರಾಗಿದ್ದಾರೆ.

ಘಟನೆ ನಡೆದ ಬರೋಬ್ಬರಿ 2 ಗಂಟೆಗಳ ಬಳಿಕವೂ ವಿಮಾನ ನಿಲ್ದಾಣದಲ್ಲಿ ಸ್ಫೋಟದಿಂದ ಉಂಟಾದ ಹೊಗೆ ಮಾತ್ರ ನಿಂತಿರಲಿಲ್ಲ. ಈ ಭೀಕರ ದೃಶ್ಯಕ್ಕೆ ಸಾಕ್ಷಿಯಾದ ಸ್ಥಳೀಯರು ಕೂಡ ಸಿಬಂದಿಯ ಜತೆಗೆ ಸೇರಿ ಸ್ಫೋಟದ ವೇಳೆ ಶವಗಳು ದೂರಕ್ಕೆ ಸಿಡಿದು ಬಿದ್ದಿರಬಹುದೇ ಎಂದು ಶೋಧ ನಡೆಸುತ್ತಿದ್ದಾರೆ. ಒಟ್ಟಾರೆ, ತಮ್ಮವರ ಆಗಮನಕ್ಕೆ ಕಾಯುತ್ತಿದ್ದ, ಗೆಳೆಯ, ಗೆಳತಿ, ಕುಟುಂಬಸ್ಥರು ಇನ್ನೇನು ಬಂದೇ ಬಿಡುತ್ತಾರೆ ಎಂಬ ಕಾತರದಲ್ಲಿದ್ದ ಹಲವರ ಭಾವನೆಗೆ ವಿಮಾನ ನಿಲ್ದಾಣ ಸಾಕ್ಷಿಯಾಗಿತ್ತು. ಆದರೆ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ನಡೆದ ಘೋರ ದುರಂತದಿಂದ ಇಡೀ ನಿಲ್ದಾಣದಲ್ಲಿ ಶ್ಮಶಾನ ಮೌನ ಆವರಿಸಿತು. ಭೀಕರ ದುರಂತಕ್ಕೆ ಇಡೀ ವಿಶ್ವವೇ ಕಂಬನಿ ಮಿಡಿದಿದೆ.

ಭಾರತ ತೀವ್ರ ಸಂತಾಪ
ದುರಂತಕ್ಕೆ ಭಾರತ ಸಂತಾಪ ಸೂಚಿಸಿದ್ದು, ಘಟನೆಯಿಂದ ತೀವ್ರ ದುಃಖವಾಗಿದೆ ಎಂದಿದೆ. ಕೊರಿಯಾದಲ್ಲಿನ ಭಾರತೀಯ ರಾಯಭಾರಿ ಅಮಿತ್‌ ಕುಮಾರ್‌ ಟ್ವೀಟ್‌ ಮಾಡಿ, “ಇಂತಹ ಸಮಯದಲ್ಲಿ ಕೊರಿಯಾದ ಜತೆಗೆ ನಾವಿರಲಿದ್ದು, ಅವರ ಸಹಾಯಕ್ಕೆ ಭಾರತ ಸದಾ ಸಿದ್ಧವಿದೆ’ ಎಂದಿದ್ದಾರೆ.

Advertisement

ವಿಮಾನ ದುರಂತದ ಬೆನ್ನಲ್ಲೇ ಹಲವು ಪ್ರಶ್ನೆಗಳು
ಜೆಜು ವಿಮಾನ ದುರಂತದ ಕುರಿತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಾಗೂ ಮಾಜಿ ಪೈಲಟ್‌ಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಘಟನೆ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಆ ಪ್ರಶ್ನೆಗಳೆಂದರೆ,

ರನ್‌ವೇ 3 ಕಿ.ಮೀ. ಉದ್ದವೂ ಇರಲಿಲ್ಲ. ಆದರೂ ರನ್‌ವೇಯಲ್ಲಿ ವಿಮಾನ ಅಷ್ಟೊಂದು ವೇಗವಾಗಿ ಮುನ್ನುಗ್ಗಿ ಬಂದಿದ್ದು ಹೇಗೆ?
ಬೆಲ್ಲಿ ಲ್ಯಾಂಡಿಂಗ್‌ಗೆ ನಿರ್ಧಾರವಾಗಿದ್ದರೂ ಸ್ಥಳದಲ್ಲಿ ಅಗ್ನಿಶಾಮಕ ಸೇರಿದಂತೆ ಇತರ ರಕ್ಷಣ ಸಿಬಂದಿ ಸನ್ನದ್ಧವಾಗಿರಲಿಲ್ಲವೇಕೆ?
ಯಾವುದೇ ವಿಮಾನ ಇಂಥ ಸ್ಥಿತಿ ಎದುರಿಸಿದಾಗ ಸ್ಫೋಟಗೊಳ್ಳುವ ಸಾಧ್ಯತೆ ಇರುವ ಕಾರಣ, ತತ್‌ಕ್ಷಣವೇ ರನ್‌ವೇಯಲ್ಲಿ ನೊರೆಯನ್ನು ತುಂಬುವ ಮೂಲಕ ವಿಮಾನದ ವೇಗ ತಗ್ಗಿಸುವ ಮತ್ತು ಕಿಡಿ ಆರಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಇಲ್ಲಿ ಅದೂ ನಡೆದಿಲ್ಲ ಏಕೆ? ಸಾಮಾನ್ಯವಾಗಿ ತಾಂತ್ರಿಕ ದೋಷ ಕಂಡು ಬಂದಾಗ ವಿಮಾನವು ಭೂಸ್ಪರ್ಶ ಮಾಡುವ ಮುನ್ನ ಆಗಸದಲ್ಲೇ ಒಂದೆರಡು ಸುತ್ತು ಸುತ್ತುತ್ತದೆ. ಆದರೆ ಇಲ್ಲಿ ಹಾಗೆ ಆಗಿಲ್ಲ ಏಕೆ?

ಕರಾಳ ಡಿಸೆಂಬರ್‌:
6 ವಿಮಾನ ದುರಂತಕ್ಕೆ ಈ ತಿಂಗಳು ಸಾಕ್ಷಿ ಪ್ರಸಕ್ತ ವರ್ಷದ ಡಿಸೆಂಬರ್‌ನಲ್ಲಿ ಜಗತ್ತಿನಾದ್ಯಂತ ಒಟ್ಟು 6 ವಿಮಾನ ದುರಂತಗಳು ಸಂಭವಿಸಿದ್ದು, ಒಟ್ಟು 236 ಮಂದಿ ಮೃತಪಟ್ಟಿದ್ದಾರೆ. ವೈಮಾನಿಕ ಕ್ಷೇತ್ರಕ್ಕೆ ಈ ಡಿಸೆಂಬರ್‌ ಕರಾಳ ತಿಂಗಳಾಗಿದೆ.
ಡಿ.17: ಹವಾಯಿ ದ್ವೀಪದಲ್ಲಿ ದುರಂತ. ಇಬ್ಬರು ಪೈಲಟ್‌ಗಳ ಸಾವು
ಡಿ.19: ಅರ್ಜೆಂಟೈನಾದಲ್ಲಿ ದುರಂತ. ಇಬ್ಬರು ಪೈಲಟ್‌ಗಳು ಸಾವು
ಡಿ.22: ಪಪುವಾ ನ್ಯೂಗಿನಿಯಾದಲ್ಲಿ ಅವಘಡ. 22 ಮಂದಿ ಸಾವು
ಡಿ.22: ಬ್ರೆಜಿಲ್‌ನಲ್ಲಿ ಖಾಸಗಿ ವಿಮಾನ ಪತನ. ಒಂದೇ ಕುಟುಂಬದ 10 ಮಂದಿ ಸಾವು
ಡಿ.25: ಅಜರ್‌ಬೈಜಾನ್‌ ವಿಮಾನವು ಕಜಕಿಸ್ಥಾನದ ವಿಮಾನ ಪತನ. 38 ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next