ಲಂಡನ್: ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತು ಚೊಚ್ಚಲ ಟೆಸ್ಟ್ ಆಡುತ್ತಿರುವ ಸೀಮರ್ ಮ್ಯಾಥ್ಯೂ ಪಾಟ್ಸ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್, ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ 132 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದಿದೆ. ಇಬ್ಬರೂ ತಲಾ 4 ವಿಕೆಟ್ ಉಡಾಯಿಸಿದರು. ಇಂಗ್ಲೆಂಡ್ ಕೇವಲ 40 ಓವರ್‌ಗಳಲ್ಲಿ ಕಿವೀಸ್‌ನ ಮೊದಲ ಇನ್ನಿಂಗ್ಸ್‌ಗೆ ತೆರೆ ಎಳೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲ್ಯಾಂಡಿಗೆ ಆ್ಯಂಡರ್ಸನ್ ಪ್ರಬಲ ಆಘಾತವಿಕ್ಕಿದರು. ಆರಂಭಿಕರಾದ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಂ ಅವರನ್ನು ಅಗ್ಗಕ್ಕೆ ಉರುಳಿಸಿದರು. ಇಬ್ಬರೂ ಒಂದು ರನ್ ಮಾಡಿ ಕೀಪರ್ ಬೇರ್‌ಸ್ಟೊಗೆ ಕ್ಯಾಚ್ ನೀಡಿದರು.
ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ನ್ಯೂಜಿಲ್ಯಾಂಡಿನ ಅಗ್ರ ಕ್ರಮಾಂಕದ ನಾಲ್ವರು 12 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ನಾಲ್ವರು ಒಟ್ಟು ಸೇರಿ ಗಳಿಸಿದ್ದು ಬರೀ 7 ರನ್.
45 ರನ್ನಿಗೆ 7 ವಿಕೆಟ್ ಉದುರಿಸಿಕೊಂಡ ನ್ಯೂಜಿಲ್ಯಾಂಡ್, ನೂರರ ಗಡಿ ತಲುಪುವುದೇ ಅನುಮಾನವಿತ್ತು. ಆದರೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಅಜೇಯ 42), ಟಿಮ್ ಸೌಥಿ (26), ಅಂತಿಮ ಆಟಗಾರ ಟ್ರೆಂಟ್ ಬೌಲ್ಟ್ (14) ಸೇರಿಕೊಂಡು ಮೊತ್ತವನ್ನು 130ರ ಆಚೆ ವಿಸ್ತರಿಸುವಲ್ಲಿ ಯಶಸ್ವಿಯಾದರು.
ವಾರ್ನ್ ನಮನ: ಪಂದ್ಯದ 23ನೇ ಓವರ್ ಬಳಿಕ ಎಲ್ಲ ಆಟಗಾರರು ಹಾಗೂ ವೀಕ್ಷಕರು ಸೇರಿಕೊಂಡು ಅಗಲಿದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಅವರಿಗೆ 23 ಸೆಕೆಂಡ್‌ಗಳ ಕಾಲ ನಮನ ಸಲ್ಲಿಸಿದರು. ಆಗ ಲಾರ್ಡ್ಸ್‌ನ ದೈತ್ಯ ಸ್ಕ್ರೀನ್‌ನಲ್ಲಿ ವಾರ್ನ್ ಚಿತ್ರ ಮೂಡಿಬಂದಿತ್ತು. ವಾರ್ನ್ ಜೆರ್ಸಿ ಸಂಖ್ಯೆ 23 ಆದ್ದರಿಂದ ಇಲ್ಲಿ “23’ಕ್ಕೆ ಮಹತ್ವ ನೀಡಲಾಗಿತ್ತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-132 (ಗ್ರ್ಯಾಂಡ್‌ಹೋಮ್ ಔಟಾಗದೆ 42, ಸೌಥಿ 26, ಪಾಟ್ಸ್ 13ಕ್ಕೆ 4, ಆ್ಯಂಡರ್ಸನ್ 66ಕ್ಕೆ 4).