ರೋಮ್: ಭಾರೀ ಕೃಷಿ ಯಂತ್ರದಿಂದ ಕೈ ತುಂಡಾದ ಬಳಿಕ 31 ವರ್ಷದ ಭಾರತೀಯ ಕಾರ್ಮಿಕನನ್ನು ಕರುಣೆಯ ಲವಲೇಶವೂ ಇಲ್ಲದೆ ವೈದ್ಯಕೀಯ ಚಿಕಿತ್ಸೆಗೆ ಸಹಕಾರ ನೀಡದೆ ರಸ್ತೆಗೆ ಎಸೆದ ಕೃಷಿ ಕಂಪನಿಯ ಮಾಲಕನನ್ನು ಇಟಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು ರೋಮ್ ಬಳಿಯ ಲಾಜಿಯೊದಲ್ಲಿ ಸ್ಟ್ರಾಬೆರಿ ಸುತ್ತುವ ಯಂತ್ರಕ್ಕೆ ಸಿಲುಕಿ ಕೈ ತುಂಡಾದ ನಂತರ ಸತ್ನಮ್ ಸಿಂಗ್ ಅವರನ್ನು ಅವರ ಉದ್ಯೋಗದಾತ ಚಿಕಿತ್ಸೆ ನೀಡದೆ ರಸ್ತೆಗೆ ಬಿಟ್ಟ ಕಾರಣ ತೀವ್ರವಾದ ರಕ್ತಸ್ರಾವದಿಂದ ಬಳಲಿದ್ದರು.ಸಿಖ್ ಕೃಷಿ ಕಾರ್ಮಿಕ ಎರಡು ದಿನಗಳ ನಂತರ ರೋಮ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ANSA ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ಸತ್ನಮ್ ಸಿಂಗ್ ಅವರ ನರಹತ್ಯೆ ಸಾವಿಗೆ ಕಾರಣವಾದ ಶಂಕೆಯ ಮೇಲೆ ಮಂಗಳವಾರ ಪೊಲೀಸರು ಆರೋಪಿತ ಗ್ಯಾಂಗ್‌ಮಾಸ್ಟರ್ ಆಂಟೊನೆಲ್ಲೊ ಲೊವಾಟೊನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
”ರೋಮ್ ಆಸ್ಪತ್ರೆಯಲ್ಲಿ ಭಾರೀ ರಕ್ತಸ್ರಾವದಿಂದ ಸಾವನ್ನಪ್ಪಿದ ಸಿಖ್ ರೈತ ಕಾರ್ಮಿಕ ನಿಗೆ ಸಕಾಲಿಕ ಸಹಾಯ ಮಾಡಿದ್ದರೆ ಎಲ್ಲಾ ಸಾಧ್ಯತೆಗಳಲ್ಲಿ ಉಳಿಸಲಾಗುತ್ತಿತ್ತು” ಎಂದು ಪ್ರಾಸಿಕ್ಯೂಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ನಾವು ಮಾಲಕನ ಬಂಧನಕ್ಕಾಗಿ ಕಾಯುತ್ತಿದ್ದೆವು, ನಾವು ಆಕ್ರೋಶಗೊಂಡಿದ್ದೆವು. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಅವನ ಮನೆಯ ಹೊರಗೆ ಬಿಟ್ಟಿದ್ದು ಅತ್ಯಂತ ಕೆಟ್ಟ ಕೆಲಸ. ಅಪಘಾತ ಸಂಭವಿಸಬಹುದು, ಆದರೆ ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡದಿರುವುದು ಸ್ವೀಕಾರಾರ್ಹವಲ್ಲ” ಎಂದು ಲಾಜಿಯೊ ಭಾರತೀಯ ಸಮುದಾಯದ ಅಧ್ಯಕ್ಷ ಗುರುಮುಖ್ ಸಿಂಗ್ ಹೇಳಿದ್ದಾರೆ.
ಸಿಂಗ್ ಅವರ ಸಾವು ಇಟಲಿಯಲ್ಲಿ, ವಿಶೇಷವಾಗಿ ದೇಶದ ದಕ್ಷಿಣದಲ್ಲಿ ವ್ಯಾಪಕವಾಗಿ ಹರಡಿರುವ ಗ್ಯಾಂಗ್‌ಮಾಸ್ಟರಿಂಗ್ ಮತ್ತು ಆಧುನಿಕ ಗುಲಾಮಗಿರಿಯ ಬಗ್ಗೆ ಆಕ್ರೋಶವನ್ನು ಹುಟ್ಟುಹಾಕಿತ್ತು.