Advertisement

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

06:15 PM Oct 07, 2022 | Team Udayavani |

ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ ಸಹಿತ ಮೂಲ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ನಡೆಸಿ ಯಶಸ್ವಿಯಾದ ನಂತರ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಳಸಿಕೊಂಡು ಪರ್ಯಾಯ ಇಂಧನ ಅಭಿವೃದ್ಧಿ ಗೊಳಿಸುವ ದೂರದೃಷ್ಟಿಯಿಂದ ಪರಿಸರ ಸಂರಕ್ಷಣೆ ಮಾಡಲು ಜೈವಿಕ ಅನಿಲ ಸ್ಥಾವರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Advertisement

ಹೌದು, ನರೇಗಾ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಟದ ಮೈದಾನಗಳು ಮಳೆ ನೀರು ಸಂರಕ್ಷಣೆ ಮಾಡುವ ಚೆಕ್‌ ಡ್ಯಾಂಗಳು, ನೀರು ಸರಾಗವಾಗಿ ಹರಿಯಲು ಕಾಲುವೆಗಳು ಮತ್ತು ಕೃಷಿಗೆ ಪೂರಕವಾಗಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ದೇಶದಲ್ಲಿ ಪರಿಸರ ಬದಲಾವಣೆಯಿಂದ ಆಗುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಪರಿಸರ ಸ್ನೇಹಿಯಾಗಿರುವ ಪರ್ಯಾಯ ಇಂಧನ ಮೂಲಗಳನ್ನು ವೃದ್ಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನರೇಗಾ ಯೋಜನೆ ಮೂಲಕ ಜೈವಿಕ ಅನಿಲ ಸ್ಥಾವರ ನಿರ್ಮಿಸಲು ಚಿಂತನೆ ನಡೆಸಿದೆ.

ಮಾದರಿ ಜೈವಿಕ ಅನಿಲ ಸ್ಥಾವರ: ಕೇಂದ್ರ ಸರ್ಕಾರವು ನರೇಗಾ ಯೋಜನೆ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸಲು ಅಧಿಸೂಚನೆಯನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಕಡಿಮೆ ಮಾಡುವ ಜೈವಿಕ ಅನಿಲ ತಂತ್ರಜ್ಞಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಟುಂಬ ಗಳಿಗೆ ವೈಯಕ್ತಿಕ ಮಾದರಿ ಜೈವಿಕ ಅನಿಲ ಸ್ಥಾವರ ಗಳನ್ನು ನಿರ್ಮಿಸಲು ನರೇಗಾ ಯೋಜನೆಯನ್ನು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ಜೈವಿಕ ಅನಿಲ ಉತ್ಪಾದನೆ ಹೇಗೆ? ಕೌಟುಂಬಿಕ ಪ್ರಕಾರದ ಜೈವಿಕ ಅನಿಲ ಸ್ಥಾವರವು ಸಾವಯವ ಪದಾರ್ಥಗಳಾದ ಜಾನುವಾರು ಸಗಣಿ ಮತ್ತು ಇತರ ಜೈವಿಕ ವಿಘಟನೀಯ ವಸ್ತುಗಳಿಂದ (ಕೃಷಿ, ತೋಟ ಮತ್ತು ಅಡುಗೆ ಮನೆಗಳ ತ್ಯಾಜ್ಯ) ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ಜೈವಿಕ ಅನಿಲವು ಆಮ್ಲಜನಕದ ಅನುಪಸ್ಥಿತಿಯಲ್ಲಿ ಸಾವಯವ ಪದಾರ್ಥಗಳ ವಿಭಜನೆಯಿಂದ ಉತ್ಪತ್ತಿಯಾಗುವ ವಿವಿಧ ಅನಿಲಗಳ ಮಿಶ್ರಣವಾಗಿದೆ. ಕೃಷಿ ತ್ಯಾಜ್ಯ ಗೊಬ್ಬರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ಸಸ್ಯ ಸಾಮಗ್ರಿಗಳು, ಒಳ ಚರಂಡಿ , ಹಸಿರು ತ್ಯಾಜ್ಯ ಅಥವಾ ಆಹಾರ ತ್ಯಾಜ್ಯದಂತಹ ಕಚ್ಚಾ ವಸ್ತುಗಳಿಂದ ಇದನ್ನು ಉತ್ಪಾದಿಸಬಹುದಾಗಿದೆ.

ಜೈವಿಕ ಅನಿಲ ತಂತ್ರಜ್ಞಾನದ ಪ್ರಯೋಜನ: ಅಡುಗೆ ಮತ್ತು ಬೆಳಕಿಗೆ ಶುದ್ಧ ಅನಿಲ ಇಂಧನವನ್ನು ಒದಗಿಸುತ್ತದೆ. ಜೈವಿಕ ಅನಿಲ ಸ್ಥಾವರಗಳಿಂದ ಜೀರ್ಣವಾಗುವ ಶೇಷವನ್ನು ರಾಸಾಯನಿಕ ಗೊಬ್ಬರಗಳ ಬಳಕೆಗೆ ಪೂರಕವಾಗಿ ಸಮೃದ್ಧ ಜೈವಿಕ ಗೊಬ್ಬರವಾಗಿ ಬಳಸಲಾಗುತ್ತದೆ. ಶೌಚಾಲಯ ಗಳನ್ನು ಜೈವಿಕ ಅನಿಲ ಸ್ಥಾವರಗಳೊಂದಿಗೆ ಜೋಡಿಸುವ ಮೂಲಕ ಹಳ್ಳಿಗಳು ಮತ್ತು ಆರೆ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಸುಧಾರಿಸುತ್ತದೆ, ಗ್ರಾಮೀಣ ಜನರು ಆರ್ಥಿಕವಾಗಿ ಸಬಲರಾ ಗುತ್ತಾರೆ ಹಾಗೂ ಇಂಧನ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ. ಜತೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೊಗೆಯಿಂದ ಆಗುವ ಸಮಸ್ಯೆ ತಡೆಗೂ ಸಹಕಾರಿಯಾಗಲಿದೆ.

Advertisement

ಪ್ರಸ್ತುತ ಆರ್ಥಿಕ ವರ್ಷದಿಂದ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಯಾಗಿ ಜೈವಿಕ ಅನಿಲ ಸ್ಥಾವರ ಸ್ಥಾಪಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪರಿಸರ ಸಂರಕ್ಷಣೆ ಮಾಡಲು ಆದ್ಯತೆ ನೀಡುವ ಸಲುವಾಗಿ ಜೈವಿಕ ಅನಿಲ ಸ್ಥಾವರಗಳನ್ನು ನಿರ್ಮಿಸಲು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಜಾನುವಾರಗಳು ಅಥವಾ ಕುರಿ/ ಮೇಕೆಗಳು ಶೆಡ್‌ ಹೊಂದಿರುವ ಹಾಗೂ ಅಡುಗೆ/ ಆಹಾರ ತ್ಯಾಜ್ಯದಂತಹ ಕಚ್ಚಾ ವಸ್ತುಗಳು ಹೆಚ್ಚು ಉತ್ಪತ್ತಿಯಾಗುವ ಮನೆಗಳಿಗೆ ಮೊದಲ ಆದ್ಯತೆ ನೀಡಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಸರವನ್ನು ಸಂರಕ್ಷಣೆ ಮಾಡಲು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಗಣಿ ಇನ್ನಿತರೆ ತ್ಯಾಜ್ಯ ಬಳಕೆ ಮಾಡಿಕೊಂಡು ಜೈವಿಕ
ಅನಿಲ ಸ್ಥಾವರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿನಿಲಯ ಗಳಲ್ಲಿ ಅನಿಲವನ್ನು ಬಳಕೆ ಮಾಡಲು ಅನುಕೂಲವಾಗುತ್ತದೆ.
● ಬಿ.ಶಿವಕುಮಾರ್‌, ಉಪಕಾರ್ಯದರ್ಶಿ ಜಿಪಂ ಚಿಕ್ಕಬಳ್ಳಾಪುರ.

●ಎಂ.ಎ.ತಮೀಮ್‌ ಪಾಷಾ

Advertisement

Udayavani is now on Telegram. Click here to join our channel and stay updated with the latest news.

Next