Advertisement
ನಗರದ ಸುತ್ತಮುತ್ತ ಮಾತ್ರ ಬಸ್ ನಿಲ್ದಾಣ, ರಸ್ತೆ ಬದಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯದ ರಾಕ್ಷಸ ಇದೀಗ ಕಾಡಿಗೂ ಲಗ್ಗೆ ಇಟ್ಟಿದ್ದಾನೆ. ಇದು ಕಾಡು ಪ್ರಾಣಿಗಳಿಗೆ ಅಪಾಯ ತಂದಿಟ್ಟಿದೆ. ಕಾಡುಪ್ರಾಣಿಗಳು ರಸ್ತೆ ಬದಿ ಎಸೆಯುವ ತ್ಯಾಜ್ಯವನ್ನು ಆಹಾರವೆಂದು ಭ್ರಮಿಸಿ ತಿನ್ನುವುದು ಒಂದು ಕಡೆಯಾದರೆ, ಅದರ ಆಸೆಗೆ ರಸ್ತೆ ದಾಟುವಾಗಲೂ ಅಪಘಾತಕ್ಕೆ ಬಲಿಯಾಗುತ್ತಿವೆ.
ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವ್ಯಾಪ್ತಿಯಲ್ಲಿ 1 ಕಾಡುಕುರಿ, 1 ಪುನಗಿನ ಬೆಕ್ಕು, 8 ಮಂಗಗಳು, 1 ಸಿಂಗಳೀಕ, 1 ಮುಂಗುಸಿ, 5 ಕಡವೆ, 1 ಮುಜ್ಜು, 3 ಜಿಂಕೆ, 1 ಕಬ್ಬೆಕ್ಕು ರಸ್ತೆ ಅಪಘಾತದಲ್ಲಿ ಮೃತಪಟ್ಟಿವೆ. ಹೆಬ್ರಿ ವ್ಯಾಪ್ತಿಯಲ್ಲಿ 2 ಜಿಂಕೆ, 1 ಚಿರತೆ, ಶಂಕರನಾರಾಯಣ ವ್ಯಾಪ್ತಿಯಲ್ಲಿ 1 ಕಾಡುಕೋಣ, 1 ಚಿರತೆ ಮರಿ ಸಹಿತ ಒಟ್ಟು 26 ವನ್ಯಜೀವಿಗಳು ರಸ್ತೆ ಅಪಘಾತಕ್ಕೆ ಬಲಿಯಾಗಿವೆ. ತ್ಯಾಜ್ಯದಲ್ಲಿರುವ ಆಹಾರ ಮತ್ತು ಮನುಷ್ಯರು ಕೊಡುವ ಆಹಾರದಿಂದ ಆಕರ್ಷಿಕವಾಗಿ ರಸ್ತೆ ಬದಿಗೆ ಬರುವ ವನ್ಯಜೀವಿಗಳು ದುರಂತಕ್ಕೆ ಬಲಿಯಾಗುತ್ತಿವೆ.
Related Articles
ಪಶ್ಚಿಮ ಘಟ್ಟ ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಸಿಂಗಳೀಕ, ವಿವಿಧ ಪ್ರಭೇಧ ಕಪ್ಪೆಗಳು, ಕಾಳಿಂಗ ಸರ್ಪ, ನೀರು ನಾಯಿ, ಕಡವೆ, ವಿವಿಧ ಸರೀಸೃಪ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವನ್ಯಜೀವಿಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ವನ್ಯಜೀವಿಗಳು ಈ ತ್ಯಾಜ್ಯ ರಾಶಿಯನ್ನು ತಡಕಾಡುತ್ತ ಪ್ಲಾಸ್ಟಿಕ್ ಸಹಿತ ಕೊಳೆತ ಆಹಾರ ತ್ಯಾಜ್ಯ ಸೇವಿಸುವ ಮೂಲಕ ತನ್ನ ರುಚಿಯಲ್ಲಿ ಬದಲಾವಣೆ ಕಾಣುತ್ತವೆ. ಈಗಾಗಲೆ ಆಗುಂಬೆ-ಹೆಬ್ರಿ ಪರಿಸರದಲ್ಲಿ ಸಿಂಗಳೀಕವು ಕಾಡಿನ ಆಹಾರವನ್ನು ಬಿಟ್ಟು ಮನುಷ್ಯನು ಕೊಡುವ ತಿಂಡಿಗಳಿಗೆ ದಾಸನಾಗಿ ಬಿಟ್ಟಿವೆ. ಇದರಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಹಾನಿ, ಜೀವನ ಕ್ರಮ ಬದಲಾವಣೆಯಾಗಿ ಕಾಡುಬಿಟ್ಟು ರಸ್ತೆಯತ್ತಲೇ ಬರುತ್ತಿವೆ. ಇದು ಮನುಷ್ಯರಿಗೂ ಅಪಾಯಕಾರಿಯಾಗಿದೆ.
Advertisement
ಕಾಡಿನೊಳಗೆ ತ್ಯಾಜ್ಯ ಎಸೆಯಬೇಡಿಕಾಡಿನೊಳಗೆ ಆಹಾರ ಅಥವಾ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯಬೇಡಿ. ಕಾಡಿನ ವ್ಯವಸ್ಥೆ ಹದಗೆಟ್ಟು, ವನ್ಯಜೀವಿಗಳು ಇದನ್ನು ಸೇವಿಸಿದಲ್ಲಿ ಜೀವನ ಕ್ರಮ ಬದಲಾಗುತ್ತದೆ. ಪ್ರಾಣಿಗಳಿಗೆ ಆಹಾರ ಕೊಡುವುದು ಅಥವಾ ಕಾಡಿನೊಳಗೆ ತ್ಯಾಜ್ಯ ಎಸೆಯುವುದು ನಿರ್ಬಂಧವಿದೆ. ಕುದುರೆಮುಖ ವನ್ಯಜೀವಿ ವಿಭಾಗ ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಂಡಿದೆ.
– ಶಿವರಾಮ್ ಬಾಬು, ಡಿಎಫ್ಒ, ಕುದುರೆಮುಖ ವನ್ಯಜೀವಿ ವಿಭಾಗ ಕಾನೂನು ಕ್ರಮದ ಎಚ್ಚರಿಕೆ
ಕಾಡಿನೊಳಗೆ ತ್ಯಾಜ್ಯ ಎಸೆಯುವುರನ್ನು ಸ್ಥಳೀಯರು ಅಥವಾ ಸ್ಥಳೀಯಡಳಿತ ಸಂಸ್ಥೆಗಳು ಅರಣ್ಯ ಇಲಾಖೆ ಗಮನಕ್ಕೆ ತಂದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾಡಿನ ಮಹತ್ವ ಅರಿತು ಅರಣ್ಯದೊಳಗೆ ತ್ಯಾಜ್ಯ ಎಸೆಯುವ ಮನಸ್ಥಿತಿ ಬದಲಾಗಬೇಕು. ಕಾಡಂಚಿನಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
– ಶ್ರೀಧರ್, ಎಸಿಎಫ್, ಅರಣ್ಯ ಇಲಾಖೆ -ಅವಿನ್ ಶೆಟ್ಟಿ