ತುಮಕೂರು: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ ನೀಡಲಾಗಿದೆ ಎಂದು ವರದಿಯಾಗಿದೆ.
ಸಿದ್ದಗಂಗಾ ಮಠಕ್ಕೆ 70,31,438 ರೂ. ವಿದ್ಯುತ್ ಬಿಲ್ ಬಂದಿದ್ದು, ಕೆಐಎಡಿಬಿ ಅಭಿಯಂತರರಿಂದ ವಿದ್ಯುತ್ ಬಿಲ್ ಪಾವತಿಸುವಂತೆ ಪತ್ರ ಬಂದಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ವಿದ್ಯುತ್ ಬಿಲ್ ಅನ್ನು ನೀವು ಭರಿಸಲು ಕೋರಲಾಗಿದೆ ಎಂದು ಸಿದ್ದಗಂಗಾ ಮಠಕ್ಕೆ ಬಂದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಏಪ್ರಿಲ್ 6 ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಬಂದಿರುವ ಪತ್ರದಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದ್ದು, ಏಪ್ರಿಲ್ 4 ರಂದು ಕೆಐಎಡಿಬಿಯಿಂದ ಸಿದ್ದಗಂಗ ಮಠಕ್ಕೆ ಮರು ಪತ್ರ ರವಾನೆಯಾಗಿದೆ.
ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್ ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಡಿಬಿ ಅಭಿಯಂತರರಿಂದ ಪತ್ರ ನೀಡಲಾಗಿದೆ.
ತುಮಕೂರು ತಾಲೂಕು ಹೊನ್ನೇನಹಳ್ಳಿ ಕೆರೆಯಿಂದ ದೇವರಾಯನಪಟ್ಟಣಕ್ಕೆ ನೀರು ಹರಿಸಲಾಗಿತ್ತು. ಇದು ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣದ ಕೆರೆಯಾಗಿದೆ. ಕೆಐಎಡಿಬಿ ಪೈಪ್ ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ನೀರು ಹರಿಸಲಾಗಿದೆ. ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನೀರು ನೀಡಲಾಗಿತ್ತು.
ಈ ಕೆರೆಯಿಂದ ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಸಿದ್ದಗಂಗಾ ಮಠಕ್ಕೆ ಕೆರೆಯಿಂದ ನೀರು ಕೊಡಲಾಗಿತ್ತು. 2023-24ನೇ ಸಾಲಿನಲ್ಲಿ ನೀರು ಕೊಡಲಾಗಿತ್ತು. ಸಿದ್ದಗಂಗಾ ಮಠ ಈ ನೀರನ್ನು ದೈನಂದಿನ ಕಾರ್ಯಗಳಿಗೆ ಬಳಸಿಕೊಳ್ಳಲಾಗಿತ್ತು. ಈ ನೀರಿಗೆ ಹಣ ಪಾವತಿಸುವಂತೆ ಕೆಐಎಡಿಬಿ ನೋಟಿಸ್ ನೀಡಿದೆ.
8 ತಿಂಗಳ ಹಿಂದೆ ಸಿದ್ದಗಂಗಾ ಮಠಕ್ಕೆ ಬಂದಿರುವ ಪತ್ರದಲ್ಲಿ ಈ ಎಲ್ಲಾ ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಮಠ ಬಿಲ್ ಪಾವತಿಸದ ಪರಿಣಾಮ ಅಧಿಕಾರಿಗಳು ಮೌಖಿಕವಾಗಿ ಬಿಲ್ ಕಟ್ಟುವಂತೆ ಮಠದ ಆಡಳಿತ ಮಂಡಳಿಯವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಈ ಪ್ರಾಯೋಗಿಕವಾಗಿ ಹರಿಸಿರುವ ನೀರನ್ನು ಸಿದ್ದಗಂಗಾ ಮಠ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.