Advertisement
2017ರಲ್ಲಿ ಸ್ಥಾಪನೆಗೊಂಡ ಎಸ್.ಎಲ್.ಆರ್.ಎಂ. ಘಟಕದಲ್ಲಿ ಒಣ ಕಸ ಮತ್ತು ಹಸಿ ಕಸವನ್ನು 10 ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದ್ದು, ಇದು ಶೂನ್ಯ ತಾಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಜತೆಗೆ ಲಾಭವನ್ನೂ ಗಳಿಸುತ್ತಿದೆ.
ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಂಚಿಕೊಂಡ ವಂಡ್ಸೆಯ ಎಸ್‌ಎಲ್‌ಆರ್‌ಎಂ ಘಟಕದ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಿರಣ್ ಮಜುಮ್ದಾರ್ ಶಾ ಅವರು, ಇದನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಅಳವಡಿಸಿಕೊಳ್ಳುವಲ್ಲಿ ಸರಕಾರ ಹೆಜ್ಜೆ ಇಡಬೇಕು ಎಂದಿದ್ದಾರೆ. ಇಚ್ಛಾ ಶಕ್ತಿ ಇದ್ದರೆ ಗ್ರಾ.ಪಂ. ವ್ಯಾಪ್ತಿಯ ಪರಿಸರವನ್ನು ಶುಚಿಯಾಗಿಟ್ಟು, ಹಸಿ ಹಾಗೂ ಒಣ ಕಸಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿಗೊಳಿಸಲು ಸಾಧ್ಯ ಎನ್ನುವುದಕ್ಕೆ ವಂಡ್ಸೆ ಗ್ರಾ.ಪಂ. ಕಾರ್ಯವೈಖರಿ ಉದಾಹರಣೆಯಾಗಿದೆ. ರಾಜ್ಯದಲ್ಲೇ ಅತ್ಯುತ್ತಮ ಎಸ್.ಎಲ್. ಆರ್. ಎಂ. ಘಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದಿದ್ದಾರೆ ಅವರು.
Related Articles
ವಂಡ್ಸೆ ಮೂಕಾಂಬಿಕಾ ಕಾಲೋನಿ ಸನಿಹ 2 ಎಕರೆ ಪ್ರದೇಶದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಸ್ಥಾಪಿಸಲಾಗಿದೆ. ಇದಕ್ಕೆ ವಿಶ್ವ ಬ್ಯಾಂಕ್‌ನಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 20 ಲಕ್ಷ ರೂ. ಯಂತ್ರೋಪಕರಣಗಳನ್ನು ಹೊಂದಿದೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ನಿರ್ಮಿಸಲಾಗುತ್ತಿದೆ. ಹಸಿ ಕಸ ಹಾಗೂ ಒಣ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದ್ದು, ಅವುಗಳ ವಿಲೇವಾರಿ ಕ್ರಮವೂ ರಾಜ್ಯಕ್ಕೆ ಮಾದರಿಯಾಗಿದೆ.
Advertisement
ಲಾಭದಿಂದ ನಡೆಯುತ್ತಿರುವ ವಂಡ್ಸೆ ಘಟಕವಂಡ್ಸೆ, ಚಿತ್ತೂರು, ಇಡೂರು, ಹಕ್ಲಾಡಿ, ಆಲೂರು, ಹೆಮ್ಮಾಡಿ, ಹಾಗೂ ಕೆರಾಡಿ ಗ್ರಾ.ಪಂ.ಗಳ ತ್ಯಾಜ್ಯ ಸಂಗ್ರಹಿಸಿ, ವಂಡ್ಸೆ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಣಕಸ ಹಾಗೂ ಹಸಿಕಸಕ್ಕೆ ಪ್ರತ್ಯೇಕ ಕಟ್ಟಡ ಸೇರಿದಂತೆ ಕಾಂಪೋಸ್ಟ್ ಘಟಕ, ಗೋಶಾಲೆ, ಗೋಬರ್ಧನ ಘಟಕ, ತರಬೇತಿ ಕೇಂದ್ರ, ಸಮುದಾಯ ಶೌಚಾಲಯ, ದಾಸ್ತಾನು ಕೊಠಡಿಗಳಿವೆ. ಕಸ ನೀಡುವ ಮನೆ, ಅಂಗಡಿ-ಹೋಟೆಲ್‌ಗಳಿಂದ ಸಂಗ್ರಹಿಸಲಾಗುವ ಬಳಕೆ ಶುಲ್ಕ ಮತ್ತು ತ್ಯಾಜ್ಯ ಬಳಸಿ ಉತ್ಪಾದಿಸಿದ ಸಂವರ್ಧಿತ ವಸ್ತುಗಳ ಮಾರಾಟದಿಂದಲೇ ಘಟಕ ಲಾಭದಾಯಕವಾಗಿ ನಡೆಯುತ್ತಿದೆ. ಮಹಿಳೆಯರೇ ಈ ಘಟಕ ಮತ್ತು ತ್ಯಾಜ್ಯ ಸಂಗ್ರಹಣೆಯನ್ನು ನಿಭಾಯಿಸುತ್ತಿದ್ದು, 18 ಮಂದಿಗೆ ಉದ್ಯೋಗವೂ ದೊರಕಿದೆ. ಕಳೆದ ಆರುವರೆ ವರ್ಷಗಳಲ್ಲಿ ಘಟಕವು 12.5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ವಿವಿಧ ಗ್ರಾ.ಪಂ.ಗಳ ಪ್ರತಿನಿಧಿಗಳ ಭೇಟಿ
ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಗ್ರಾ.ಪಂ. ಪ್ರತಿನಿ ಗಳು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿರುತ್ತಾರೆ. ವಿವಿಧ ಜಿಲ್ಲೆಗಳ ಗ್ರಾ.ಪಂ.ಗಳ ಎಸ್.ಎಲ್. ಆರ್. ಎಂ. ಕಾರ್ಯಕರ್ತರಿಗೆ ಇಲ್ಲಿ 10 ದಿನಗಳ ಉಚಿತ ತರಬೇತಿ ನೀಡಲಾಗುತ್ತಿದೆ. ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅವರು ಈ ಯೋಜನೆಗೆ ಬೆಂಬಲವಾಗಿದ್ದಾರೆ.