ಸುಳ್ಯ: ಬಸ್ ತಂಗುದಾಣಗಳು ಒಂದು ಊರಿನ ಅಸ್ಮಿತೆ. ಪ್ರಯಾಣಿ ಕರನ್ನು ಮಳೆ, ಬಿಸಿಲಿನಿಂದ ರಕ್ಷಿಸುವ ತಾಣಗಳು. ಬೀದಿ ಬದಿಯಲ್ಲಿ ಸುರಕ್ಷತೆಯ ಭಾವ ನೀಡುವ ಜಾಗಗಳು. ಆದರೆ ದುರಂತವೆಂದರೆ ಅವುಗಳ ನಿರ್ವಹಣೆ ಸರಿ ಇಲ್ಲದೆ ಅವೇ ಅನಾಥವಾಗಿವೆ. ಸಾರ್ವ ಜನಿಕರಿಗೆ ಅಶ್ರಯ ನೀಡಬೇಕಾದ ಇವು ಪೊದೆ, ಗಿಡಗಂಟಿಗಳಿಂದ ತುಂಬಿವೆ.
ಸುಳ್ಯ ತಾಲೂಕಿನಲ್ಲೂ ಅದೆಷ್ಟೋ ಬಸ್ ತಂಗುದಾಣಗಳು ನಿರ್ವಹಣೆ ಇಲ್ಲದೇ, ಅಭಿವೃದ್ಧಿ ಕಾಣದೆ ಸಾರ್ವಜನಿಕರ ಪ್ರಯೋಜ ನದಿಂದ ದೂರ ಉಳಿದಿದೆ. ಹಲವೆಡೆ ಬಸ್ ತಂಗುದಾಣಗಳ ಕಟ್ಟಡಗಳು ಶಿಥಿಲಗೊಂಡಿವೆ, ಸ್ವತ್ಛತೆಯೂ ಇಲ್ಲ.
ದೇರಂಪಾಲು ನಿಲ್ದಾಣ: ನಿಂತಿಕಲ್ಲು- ಬೆಳ್ಳಾರೆ ಸಂಪರ್ಕ ರಸ್ತೆಯ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಂಪಾಲು ಬಸ್ ತಂಗುದಾಣದ ಒಂದು ಬದಿಯ ಮೇಲ್ಛಾವಣಿ ಸಿಮೆಂಟ್ ಸೀಟ್ ಮುರಿದು ಶಿಥಿಲಾವಸ್ಥೆಯಲ್ಲಿದ್ದು, ಬೀಳುವಂತಿದೆ. ಇದೇ ಬಸ್ ತಂಗುದಾಣದಲ್ಲಿ ಮದ್ಯದ ಬಾಟಲಿಗಳು ಸಹಿತ ಕಸಗಳು ಬಿದ್ದುಕೊಂಡು ಬಸ್ ತಂಗುದಾಣದ ಅಂದಗೆಡಿಸಿದೆ.
ಮರ್ಕಂಜ ಕ್ರಾಸ್ ನಿಲ್ದಾಣ: ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಯ ಎಲಿಮಲೆ ಪೇಟೆಯ ಮರ್ಕಂಜ ಕ್ರಾಸ್ ಬಳಿಯ ಬಸ್ ತಂಗುದಾಣದ ಮೇಲ್ಛಾವಣಿಯ ಹಂಚು ಕೆಲವೆಡೆ ಹೊಡೆದಿದೆ. ತಂಗುದಾಣದಲ್ಲಿ ಕಸದ ರಾಶಿ ಬಿದ್ದಿಕೊಂಡಿದೆ. ಬಸ್ ತಂಗುದಾಣ ಪ್ರದೇಶದಲ್ಲೇ ಕಾಡು-ಹುಲ್ಲು ಬೆಳೆದು ನಿರ್ವಹಣೆ ಇಲ್ಲದಂತೆ ಕಾಣುತ್ತಿದೆ.
ಗುತ್ತಿಗಾರು ಸಮೀಪದ ಬಾಕಿಲ: ಸುಬ್ರಹ್ಮಣ್ಯ-ಜಾಲ್ಸೂರು ರಸ್ತೆಯ ಗುತ್ತಿಗಾರು ಪೇಟೆಯ ಸಮೀಪದ ಬಾಕಿಲ ಎಂಬಲ್ಲಿರುವ ತಂಗುದಾಣದಲ್ಲಿ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ, ತಂಗುದಾಣದಲ್ಲಿ ಹುಲ್ಲು ಬೆಳೆದು ಅದರೊಳಗೆ ಕಾಲಿಡದ ಸ್ಥಿತಿಯಲ್ಲಿದೆ.
ಮೆಟ್ಟಿನಡ್ಕ ಕ್ರಾಸ್: ಸುಬ್ರಹ್ಮಣ್ಯ- ಜಾಲ್ಸೂರು ರಸ್ತೆಯ ಮೆಟ್ಟಿನಡ್ಕ ಕ್ರಾಸ್ನಲ್ಲಿ ಎಲ್ಲೆಂದರಲ್ಲಿ ಹುಲ್ಲು ಬೆಳೆದು ತಂಗುದಾಣಕ್ಕೆ ತೆರಳದ ಸ್ಥಿತಿ ಇದೆ. ಮಳೆಗಾಲದಲ್ಲಿ ಕಟ್ಟಡದ ಹಿಂಬದಿಯ ದರೆ ಕುಸಿದು, ಇನ್ನಷ್ಟು ಕುಸಿಯುವ ಭೀತಿ ಇದೆ. ಇದೇ ರಸ್ತೆಯ ನಡುಗಲ್ಲಿನ ಉತ್ರಂಬೆ ಎಂಬಲ್ಲಿನ ಬಸ್ ತಂಗುದಾಣದ ಬಳಿಯೂ ಹುಲ್ಲು-ಕಾಡು ಬೆಳೆದಿದ್ದು ತೆರವಾಗಿಲ್ಲ.
ಮರಕತ ಕ್ರಾಸ್: ಸುಬ್ರಹ್ಮಣ್ಯ- ಜಾಲ್ಸೂರು ರಸ್ತೆಯ ಮರಕತ ಕ್ರಾಸ್ ಬಳಿಯ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳುವ ಒಂದು ಬದಿಯ ಸ್ಲ್ಯಾಬ್ ಮುರಿದು ಬಿದ್ದಿದ್ದು, ದುರಸ್ತಿ ಆಗಬೇಕಾಗಿದೆ.
-ದಯಾನಂದ ಕಲ್ನಾರ್