ಕಳೆದ ವಾರ ಬರೋಬ್ಬರಿ ಒಂಭತ್ತು ಚಿತ್ರಗಳು ತೆರೆಕಂಡಿದ್ದವು. ಅದರಲ್ಲಿ ಸಾಕಷ್ಟು ಚಿತ್ರಗಳು ಮೆಚ್ಚುಗೆ ಪಡೆದರೂ ಪ್ರೇಕ್ಷಕರ ಕೊರತೆ ಮಾತ್ರ ಕಾಡುತ್ತಿತ್ತು. ಅದಕ್ಕೆ ಕಾರಣ ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗೋದು ಎಂಬುದು ಸಿನಿಪಂಡಿತರ ಮಾತು. ಹಾಗಾದರೆ ಈ ವಾರ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಕೆಯಾಗಿದೆಯಾ ಎಂದರೆ ಖಂಡಿತಾ ಇಲ್ಲ. ಈ ವಾರವೂ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಇಲ್ಲಿವರೆಗೆ ಎಂಟು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಇದರ ಜೊತೆಗೆ ಪ್ರೇಮಿಗಳ ದಿನದ ಅಂಗವಾಗಿ ಲವ್‌ಸ್ಟೋರಿ ಹೊಂದಿರುವ ಒಂದೆರಡು ಚಿತ್ರಗಳು ಕೂಡಾ ಇದೇ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. “ಡೆಮೊ ಪೀಸ್’, “ಬೆಂಕಿಯಲ್ಲಿ ಅರಳಿದ ಹೂ’, “ಸಾಗುತ ದೂರ ದೂರ’, “ತುಂಡ್ ಹೈಕ್ಳ ಸಹವಾಸ’, “ನವರತ್ನ’, “ಲೈಟಾಗಿ ಲವ್ವಾಗಿದೆ’, “ಗಿಫ್ಟ್ ಬಾಕ್ಸ್’, “ಗಡ್ಡಪ್ಪ ಸರ್ಕಲ್’ ಚಿತ್ರಗಳು ತಮ್ಮ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ.
ಈ ವಾರ ತೆರೆ ಕಾಣುತ್ತಿರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ಅಮಿತ್ ಪೂಜಾರಿ ಅವರು ನಿರ್ಮಿಸಿರುವ “ಸಾಗುತ ದೂರದೂರ’ ಚಿತ್ರವನ್ನು ರವಿತೇಜ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತ, ಸತೀಶ್ ಬಾಬು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್, ಸಂತೋಷ್ ನಾಯಕ್ ಬರೆದಿದ್ದಾರೆ. ಅಭಿಲಾಶ್ ಕಲಾತಿ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಅಪೇಕ್ಷ ಪವನ್ ಒಡೆಯರ್, ಮಹೇಶ್ ಸಿದ್ದು, ಆಶಿಕ್ ಆರ್ಯ, ಕುಮಾರ್ ನವೀನ್, ಗಡಪ್ಪ, ಸೂರಜ್, ಉಷಾ ಭಂಡಾರಿ, ಮೋಹನ್ ಜುನೇಜ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನು, ಸ್ಪರ್ಶ ರೇಖಾ ಅವರು ನಿರ್ಮಿಸಿರುವ “ಡೆಮೊ ಪೀಸ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದಿರುವ ವಿವೇಕ್ ಮೊದಲ ಬಾರಿ ಬರೆದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಅರ್ಜುನ್ ರಾಂ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಸಾದ್ ಬಾಬು ಅವರ ಛಾಯಾಗ್ರಹಣವಿದೆ. ಯು.ಡಿ.ವೆಂಕಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ವಿಕ್ರಂ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಭರತ್ ಅವರು ನಾಯಕಾನಾಗಿ ನಟಿಸಿರುವ ಈ ಚಿತ್ರದಲ್ಲಿ ಸೋನಾಲ್ ಮಾಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ. ಸ್ಪರ್ಶ ರೇಖಾ, ಶ್ರೀಕಾಂತ್ ಹೆಬ್ಳೀಕರ್, ರೂಪೇಶ್, ಚಂದ್ರಚೂಡ್, ರೋಹಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದರ ಸಿ.ಪಿ.ಚಂದ್ರಶೇಖರ್ ಅವರು ನಿರ್ಮಿಸಿರುವ “ನವರತ್ನ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರತಾಪ್‌ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ವೆಂಗಿ ಸಂಗೀತ ನೀಡಿದ್ದಾರೆ. ಪ್ರವೀಣ್ ಪಾಲ್ ಹಿನ್ನೆಲೆ ಸಂಗೀತ, ರಿಜೊ ಪಿ ಜಾನ್, ಲಕ್ಷ್ಮೀ ರಾಜ್ ಛಾಯಾಗ್ರಹಣ, ವಿಷ್ಣು ಎಸ್ ಸಂಕಲನ ಹಾಗೂ ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು, ಬಿ.ಆರ್. ಕೇಶವ ನಿರ್ದೇಶನದ “ಗಡ್ಡಪ್ಪ ಸರ್ಕಲ್’ ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ ಸೇರಿದಂತೆ ಅನೇಕರು ನಟಿಸಿದ್ದಾರೆ.