Advertisement

ಡಿವೈಎಸ್‌ಪಿ ಗಣಪತಿ ಪ್ರಕರಣ: ವಿಚಾರಣೆ ಆಯೋಗದಿಂದ ಮಾಹಿತಿ ಪಡೆದ ಸಿಬಿಐ

07:27 AM Nov 25, 2017 | Team Udayavani |

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಚೆನ್ನೈನ ವಿಶೇಷ ಅಪರಾಧ ತನಿಖಾ ದಳದ ಸಿಬಿಐ ಅಧಿಕಾರಿಗಳು ಶುಕ್ರವಾರ ನಿವೃತ್ತ ನ್ಯಾ.ಕೆ.ಎನ್‌.ಕೇಶವನಾರಾಯಣ ಆಯೋಗಕ್ಕೆ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದರು.

Advertisement

ಬೆಳಗ್ಗೆ 11.30ರ ಸುಮಾರಿಗೆ ಮೈಸೂರು ವೃತ್ತದ ಬಳಿ ಇರುವ ಕಾವೇರಿ ಭವನದಲ್ಲಿರುವ ನ್ಯಾ. ಕೇಶವನಾರಾಯಣ ಆಯೋಗಕ್ಕೆ ಆಗಮಿಸಿದ ಸಿಬಿಐ ಹೆಚ್ಚುವರಿ ವರಿಷ್ಠಾಧಿಕಾರಿ (ಎಎಸ್‌ಪಿ) ಕಲೈಮಣಿ ನೇತೃತ್ವದ ಮೂವರ ತಂಡ, ಸಂಜೆ 5 ಗಂಟೆವರೆಗೆ ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದರು. ಆಯೋಗ ರಚನೆಯಾದ ಬಳಿಕ ಇದುವರೆಗೂ ಪ್ರಕರಣ ಕುರಿತು ಯಾವ ಆಯಾಮದಲ್ಲಿ ತನಿಖೆ ನಡೆಸಿದೆ, ಎಷ್ಟು ಮಂದಿಯನ್ನು ಸಾಕ್ಷ  ಗಳನ್ನಾಗಿ ಮಾಡಿದ್ದಾರೆ, ಗಣಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಯಾರೊಟ್ಟಿಗೆ ಮಾತನಾಡಿದ್ದರು ಎಂಬೆಲ್ಲ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಆಯೋಗದ ಅಧಿಕಾರಿಗಳಿಂದ ಪಡೆದುಕೊಂಡಿ ದ್ದಾರೆ ಎಂದು ತಿಳಿದು ಬಂದಿದೆ.

ಆಯೋಗ ಇದುವರೆಗೂ ಇಬ್ಬರು ಪೊಲೀಸರು ಸೇರಿ 49 ಮಂದಿಯ ವಿಚಾರಣೆ ನಡೆಸಿದ್ದು, ಸಾಕ್ಷ್ಯಗಳ ಜತೆಗೆ ತಾವು ಪತ್ತೆ ಹಚ್ಚಿರುವ ಮಾಹಿತಿಯನ್ನು ಸಿಬಿಐ ಅಧಿಕಾರಿಗಳಿಗೆ ಮೌಖೀಕವಾಗಿ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಸಾಕ್ಷ ಗಳು ಮತ್ತು ದಾಖಲೆಗಳ ಪಟ್ಟಿ ಸಿದ್ಧಪಡಿಸಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿಲ್ಲ. ಮುಂದಿನ ವಾರ ಮತ್ತೆ ಅಧಿಕಾರಿಗಳು ಬರುವುದಾಗಿ ತಿಳಿಸಿದ್ದಾರೆಂದು
ಆಯೋಗದ ಮೂಲಗಳು ತಿಳಿಸಿವೆ.

ಸಿಬಿಐ ಅಧಿಕಾರಿಗಳು ಕೆಲವೊಂದು ದಾಖಲೆಗಳನ್ನು ಕೇಳಿದ್ದಾರೆ. ಯಾವ ದಾಖಲೆಗಳನ್ನು ಕೊಡಬೇಕು, ಕೊಡಬಾರದೆಂಬ ಕುರಿತು ಪಟ್ಟಿ ಮಾಡಬೇಕಿದೆ. ಜತೆಗೆ ಪ್ರಕರಣ ಅಂತಿಮ ವರದಿಯನ್ನು ಸಿದ್ಧಪಡಿಸಬೇಕಿದೆ. ನಂತರ ಕಾನೂನು ಪ್ರಕ್ರಿಯೆಗಳ ಮೂಲಕ ದಾಖಲೆಗಳನ್ನು ಹಸ್ತಾಂತರಿಸಲಾಗುವುದು. ಸದ್ಯಕ್ಕೆ ಮೌಖೀಕವಾಗಿ ಎಲ್ಲವನ್ನೂ ತಿಳಿಸಿದ್ದೇವೆ. ಆಯೋಗ ತನಿಖಾ ಹಾದಿಯನ್ನು ಕೇಳಿ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಆಯೋಗದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next