Advertisement
ನಿತ್ಯ ಧೂಳು ತಿನ್ನುವ ಜನಮಳೆಯಿಂದಾಗಿ ಹಾನಿಗೊಂಡಿದ್ದ ಉಳಿಯಾರಗೋಳಿ-ಪಡುಕರೆ-ಮಲ್ಪೆ ಸಂಪರ್ಕದ ರಸ್ತೆ ದುರಸ್ತಿ ಕಾಮಗಾರಿಗೆ ಡಿ.16ರಂದು ಮಳೆಹಾನಿ ದುರಸ್ತಿ ಯೋಜನೆಯಡಿ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಮಟ್ಟು ಬೀಚ್ ಬಳಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು 1.50 ಕಿ.ಮೀ. ವ್ಯಾಪ್ತಿಯ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ್ದರು. ಬೆರಳೆಣಿಕೆಯ ದಿನಗಳಲ್ಲಿಯೇ ಕಾಮಗಾರಿ ಆರಂಭಗೊಂಡಿತ್ತು. ಇನ್ನೇನು ಶೀಘ್ರದಲ್ಲಿಯೇ ಕಾಮಗಾರಿ ನಡೆದು ಸುವ್ಯವಸ್ಥಿತ ಸಂಚಾರಕ್ಕೆ ಅವಕಾಶ ಆಗ ಬಲ್ಲುದು ಎಂದು ನಿಟ್ಟುಸಿರುಬಿಟ್ಟ ಈ ಭಾಗದ ಜನತೆಗೆ ಇದೀಗ ನಿತ್ಯ ನಿರಾಶೆ ಎದುರಿಸುವಂತಾಗಿದೆ.
ರಸ್ತೆ ದುರಸ್ತಿ ಕಾಮಗಾರಿಗೆ ಅಳವಡಿಸಲಾದ ಜಲ್ಲಿ, ಕ್ರಶರ್ ಹುಡಿಯು ವಾಹನಗಳ ಸಂಚಾರದ ಸಂದರ್ಭ ಎದ್ದೇಳುವ ಧೂಳಿನಿಂದ ಮನೆಯೊಳಗೆ ಊಟ, ಆಹಾರ ಸೇವಿಸುವಂತಿಲ್ಲ. ಏಕೆಂದರೆ ಈ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಏಳುವ ಕ್ರಶರ್‌ಹುಡಿಯ ಧೂಳಿನ ರಾಶಿ ಮನೆಗಳ ಒಳಗೂ ಆವರಿಸಿದೆ. ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದ್ದು, ವಯೋವೃದ್ಧರು ಹೆಚ್ಚು ಕಷ್ಟ ಪಡುವಂತಾಗಿದೆ. ಬೇಗ ಕಾಮಗಾರಿ ಮುಗಿಸಲು ಒತ್ತಾಯ
ಕಡಲ ಕಿನಾರೆಯಾದುದರಿಂದ ಇಲ್ಲಿ ವಾಹನ ಸಂಚಾರದ ಸಂದರ್ಭ ಏಳುವ ಈ ಕ್ರಶರ್ ಧೂಳು ಸುಮಾರು ಒಂದೂವರೆ ಫರ್ಲಾಂಗ್ ದೂರದವರೆಗೂ ಬೀಸುವ ಗಾಳಿಯಲ್ಲಿ ಹಾರುತ್ತದೆ. ಬಟ್ಟೆ ಒಣಗಿಸಲೂ ಸಾಧ್ಯವಿಲ್ಲ. ಬೈಕ್ ಸವಾರರಿಗಂತೂ ದೊಡ್ಡ ವಾಹನಗಳು ಓಡಾಡುವ ವೇಳೆ ತೀರಾ ಸಮಸ್ಯೆಯಾಗುತ್ತಿದೆ. ಸ್ಥಳೀಯರು ಕಾಮಗಾರಿ ವಿರೋಧಿಸುತ್ತಿಲ್ಲ. ಆದರೆ ಸಮಸ್ಯೆಗೆ ಮುಕ್ತಿ ನೀಡುವಂತೆ ಜರೂರು ಕಾಮಗಾರಿ ಮುಗಿಸುವಂತೆ ಆಗ್ರಹಿಸುತ್ತಿದ್ದಾರೆ.
Related Articles
ಈ ಭಾಗದಲ್ಲಿ ಸಂಚರಿಸುವ ಅಧಿಕ ಭಾರದ ವಾಹನಗಳ ಭರಾಟೆಯಿಂದಾಗಿ ಹೆಚ್ಚು ಧೂಳು ಏಳುತ್ತಿದೆ. ಈ ಭಾಗದಲ್ಲಿ ಧೂಳು ಏಳದಂತೆ ದಿನಕ್ಕೆ ಮೂರು, ನಾಲ್ಕು ಬಾರಿಯಾದರೂ ನೀರು ಸಿಂಪಡಿಸಿ ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಜನತೆ ಒತ್ತಾಯಿಸುತ್ತಿದ್ದಾರೆ.
Advertisement
ಸಮಸ್ಯೆ ಸರಿಪಡಿಸಲು ಸೂಚನೆ ಒವರ್ ಲೋಡ್ ಲಾರಿ ಸಂಚಾರ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ. 2-3 ದಿನಗಳೊಳಗೆ ಡಾಮರು ಹಾಕುವ ಪ್ರಕ್ರಿಯೆ ಆರಂಭಿಸಲು ಮತ್ತು ತಾತ್ಕಾಲಿಕವಾಗಿ ನೀರು ಸಿಂಪಡಣೆಯ ಮೂಲಕ ಧೂಳು ಏಳದಂತೆ ಜಾಗ್ರತೆ ವಹಿಸಿ ಸಮಸ್ಯೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
-ಜಗದೀಶ್ ಭಟ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.