Advertisement

Karkala – ಹಿರಿಯಡಕ: ಧೂಳಿನಲ್ಲಿ ಮಿಂದೆದ್ದು ಸಾಗುವ ಸಂಕಟ

01:18 PM Dec 02, 2024 | Team Udayavani |

ಕಾರ್ಕಳ: ಕಾರ್ಕಳ, ಉಡುಪಿ ಮುಖ್ಯ ಸಂಪರ್ಕ ರಸ್ತೆಯಾಗಿರುವ ಗುಡ್ಡೆಯಂಗಡಿಯಿಂದ ಹಿರಿಯಡಕದವರೆಗೆ ನಿತ್ಯ ಧೂಳಿನ ಅಭಿಷೇಕದಿಂದ ಸವಾರರು ಹೈರಾಣಾಗಿದ್ದಾರೆ. ಮಳೆಗಾಲದಲ್ಲಿ ಕೆಸರು ನೀರಿನ ಅಭಿಷೇಕವಾದರೆ, ಪ್ರಸ್ತುತ ಧೂಳಿನಲ್ಲಿ ಮಿಂದೇಳುವ ಸಂಕಟ ಸಾರ್ವಜನಿಕರದ್ದಾಗಿದೆ. ಹೊಂಡಗುಂಡಿಗಳ ನಡುವೆ ಸಾಗುವ ಸವಾರರಿಗೆ ಉರಿ ಬಿಸಿಲಿನೊಂದಿಗೆ ಧೂಳನ್ನು ಸಹಿಸಿಕೊಂಡು ಹೋಗುವ ತಾಳ್ಮೆ ಇಲ್ಲಿ ಅಗತ್ಯವಾಗಿದೆ.

Advertisement

ಕಾರ್ಕಳ ಭಾಗದಿಂದ ಉಡುಪಿ, ಮಣಿಪಾಲ, ಹಿರಿಯಡಕ ಭಾಗಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಮತ್ತು ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಸಾಕಷ್ಟು ಮಂದಿ ಉದ್ಯೋಗ, ಶಿಕ್ಷಣ ಸಂಬಂಧಿತ ಕಾರ್ಯಗಳಿಗೆ ಇಲ್ಲಿ ಓಡಾಡುತ್ತಾರೆ. ಆದರೆ ಈ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದು ಜನರಿಗೆ ಸಮಸ್ಯೆಯಾಗಿದ್ದು, ಹಲವು ವರ್ಷದ ವಿಳಂಬದ ಅನಂತರ ಪ್ರಸ್ತುತ ರಸ್ತೆ ಕಾಮಗಾರಿ ಚುರುಕು ಪಡೆದುಕೊಂಡಿದೆ. ಇನ್ನಾದರೂ ಕಾಮಗಾರಿ ವ್ಯವಸ್ಥಿತವಾಗಿ ನಡೆದು ಜನರಿಗೆ ಉತ್ತಮ ರಸ್ತೆ ನಿರ್ಮಾಣ ಗೊಳ್ಳಬೇಕು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆ ಕ್ರಮವಹಿಸಲು ಸ್ಥಳೀಯರು ಸೂಚಿಸಿದ್ದಾರೆ.

ಕಾಮಗಾರಿ ನಡೆಯುತ್ತಿರುವುದರಿಂದ ಮಣ್ಣು ತೆಗೆಯುವುದು, ತುಂಬಿಸುವ ಕೆಲಸ ನಡೆಯುತ್ತಿದೆ. ರಸ್ತೆಗಳು ಸಮತಟ್ಟುಗೊಳಿಸುವುದು, ಸಿಮೆಂಟ್‌ ಹುಡಿ ಹಾಕುವ ಕಾರ್ಯ ಸಾಗುತ್ತಿದೆ. ಈ ವೇಳೆ ವಾಹನಗಳ ಓಡಾಟದಿಂದ ಹೆಚ್ಚಿನ ಪ್ರಮಾಣದಲ್ಲಿ ಧೂಳು ಪರಿಸರವನ್ನು ಆವರಿಸುತ್ತಿದೆ. ಇಲ್ಲಿ ನೀರಿನ ಟ್ಯಾಂಕ್‌ ಮೂಲಕ ನೀರು ಚಿಮ್ಮಿಸುತ್ತಿದ್ದರೂ. ಆಗಾಗ ಧೂಳು ಹೆಚ್ಚಾಗದಂತೆ ನೀರು ಬಿಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ, ಗುತ್ತಿಗೆದಾರರು ಸೂಕ್ತ ಕ್ರಮವಹಿಸಬೇಕಿದೆ ಎಂದು ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.

10 ಕೋ. ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ
ಹಿರಿಯಡಕ ಕೋಟ್ನಕಟ್ಟೆಯಿಂದ ಮುಂದಕ್ಕೆ ಸಾಗಿದರೆ ಭಜನೆಕಟ್ಟೆ ಅನಂತರ ಕುದಿ ಕ್ರಾಸ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಸ್ತುತ ಅಲ್ಲಲ್ಲಿ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಹಲವು ವರ್ಷದ ಸಾರ್ವಜನಿಕರ ಬೇಡಿಕೆಯನ್ನು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ರಸ್ತೆ ಅಭಿವೃದ್ಧಿಗೆ ಸರಕಾರದಿಂದ 10 ಕೋ. ರೂ. ಅನುದಾನ ದಗಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಬದಿಯಲ್ಲಿ ಮಳೆ ನೀರು ಸಾಗಲು ಚರಂಡಿ ವ್ಯವಸ್ಥೆಗೆ ಪೈಪ್‌ಲೈನ್‌ ಕೆಲಸವು ನಡೆಯುತ್ತಿದೆ. ಜೆಸಿಬಿ ಮತ್ತು ಬೃಹತ್‌ ಯಂತ್ರೋಪಕರಣಗಳನ್ನು ಬಳಸಿ ಮಣ್ಣು ಅಗೆಯುವುದು ಸಹಿತ, ಇನ್ನಿತರ ಕಾಮಗಾರಿ ನಡೆಯುತ್ತಿದೆ.

ನಿರಂತರ ನೀರು ಸಿಂಪಡಿಸಲು ಸೂಚನೆ
ಕಾರ್ಕಳ-ಹಿರಿಯಡಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ವೇಗದಿಂದ ನಡೆಯುತ್ತಿದೆ. ಯಾವುದೇ ವಿಳಂಬ ಇಲ್ಲದಂತೆ ರಸ್ತೆ ಕಾಮಗಾರಿ ವ್ಯವಸ್ಥಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆ ನೀಡಲಾಗಿದೆ. ಪ್ರಸ್ತುತ ಧೂಳು ಸಮಸ್ಯೆಗೆ ಪರಿಹಾರವಾಗಿ ನಿರಂತರವಾಗಿ ಟ್ಯಾಂಕರ್‌ ಮೂಲಕ ನೀರು ಸಿಂಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು

Advertisement

ಧೂಳಿನಿಂದ ಆರೋಗ್ಯ ಸಮಸ್ಯೆ ಹೆಚ್ಚಳ
ಈ ರಸ್ತೆಯಲ್ಲಿ ಎರಡು-ಮೂರು ಸಂಖ್ಯೆಯಲ್ಲಿ ಘನ ವಾಹನಗಳು ಒಟ್ಟಿಗೆ ಸಾಗಿದಲ್ಲಿ ದ್ವೀಚಕ್ರ ವಾಹನ ಸವಾರರ ಪಾಡಂತು ಕೇಳ್ಳೋದೆ ಬೇಡ. ಧೂಳಿನ ಮದ್ಯೆ ಓಡಾಡಲು ಪರದಾಡುವ ಸ್ಥಿತಿ ಇದೆ. ಬಸ್‌ ಪ್ರಯಾಣಿಕರು, ಚಾಲಕರು, ನಿರ್ವಾಹಕರು, ದ್ವಿಚಕ್ರ ವಾಹನ ಸವಾರರು, ಇನ್ನಿತರೆ ತೆರೆದ ವಾಹನಗಳಲ್ಲಿ ಸಂಚರಿಸುವ ಜನರು ಎಚ್ಚರ ವಹಿಸಬೇಕು. ರಸ್ತೆ ಕಾಮಗಾರಿ ನಡೆಯುತ್ತಿದ್ದು, ಧೂಳಿನ ವಾತಾವರಣ ಇದ್ದರೆ ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಮುಚ್ಚಿಕೊಳ್ಳಬೇಕು. ನಿತ್ಯ ಧೂಳು ಸೇವನೆ ಶ್ವಾಸಕೋಶ ಮತ್ತು ಚರ್ಮಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚಳವಾಗುತ್ತವೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next