Advertisement

ಕಡೆಕಾರು ಗ್ರಾ.ಪಂ. ವ್ಯಾಪ್ತಿಯ ಹೊಳೆತೀರದಲ್ಲಿ  ಕುಡಿಯುವ ನೀರಿಲ್ಲ

12:30 AM Mar 18, 2019 | |

ಮಲ್ಪೆ: ಕಡೆಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಡೆಕಾರು ಕುತ್ಪಾಡಿ ಗ್ರಾಮದ ಬಹುಭಾಗವು ಉಪ್ಪು ನೀರಿನ ಪ್ರದೇಶವಾದ್ದರಿಂದ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.  

Advertisement

ಎಲ್ಲೆಲ್ಲಿ ಸಮಸ್ಯೆಗಳಿವೆ
ಕಡೆಕಾರು ಗ್ರಾಮದ ಗರೋಡಿ ರಸ್ತೆಯ ಮಜಲು, ಲಯನ್ಸ್‌ ಕಾಲನಿ, ಕನ್ನರ್ಪಾಡಿ ಬಳಿಯ ಎಸ್ಸಿ ಕಾಲನಿ, ಕುತ್ಪಾಡಿ ಗ್ರಾಮದ ಪಡುಕರೆ, ಬಬ್ಬರ್ಯಗುಡ್ಡೆ, ಸಸಿತೋಟ, ಅನಂತಕೃಷ್ಟ ನಗರದಲ್ಲಿ ಪ್ರತೀ ವರ್ಷ ಮಾರ್ಚ್‌ ಅಂತ್ಯದ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಕಳೆದ ಬಾರಿಯೂ ಪುನರಾವರ್ತನೆಯಾಗಿದೆ.

ಸಸಿತೋಟ, ಮಜಲು ಭಾಗದಲ್ಲಿ ಸಮಸ್ಯೆ ತೀವ್ರ..!
ಕಡೆಕಾರು ಮಜಲು, ಕೊಳದಲ್ಲಿ ಈಗಾಗಲೇ ಕುಡಿಯುವ ಸಮಸ್ಯೆ ಎದುರಾಗಿದೆ. ಸುಮಾರು 250 ಮನೆಗಳಿಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ. ಕುತ್ಪಾಡಿಯ ಸಸಿತೋಟದಲ್ಲಿ ಫೆಬ್ರವರಿಯಿಂದಲೇ ನೀರಿನ ತಾತ್ವರ ಉಂಟಾಗಿ,  ಎರಡು ದಿನಕ್ಕೊಮ್ಮೆ ನೀರು ಸಿಗುತಿದ್ದರೂ 7-8 ಮಂದಿ ಇರುವ ಮನೆಗಳಿಗೆ ಈ ನೀರು ಸಾಕುತ್ತಿಲ್ಲ. ಈ ಮಂದಿ ಸ್ನಾನಕ್ಕೆ ಅನಿವಾರ್ಯವಾಗಿ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಬೇಕಾಗುವ ಪರಿಸ್ಥಿತಿ ಇದೆ. ಟ್ಯಾಂಕರ್‌ ನೀರಿನ ಪೂರೈಕೆ ಅತೀ ಅಗತ್ಯವಾಗಿ ಆಗಬೇಕೆಂದು ಈ ಭಾಗದ ಜನರು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಕೊಳ ಭಾಗದಲ್ಲಿಯೂ ಹೆಚ್ಚು ಸಮಸ್ಯೆ ಇತ್ತು. ನೀರಿನ ಪ್ರಶರ್‌ ಇಲ್ಲದ್ದರಿಂದ ಈಗ ಈ ಭಾಗದ ಸುಮಾರು 20 ಮನೆಗಳ ನಳ್ಳಿಗೆ ನೇರ ಪಂಪ್‌ ಮೂಲಕ ಪೂರೈಕೆ ಮಾಡಲಾಗುತ್ತಿರುವುದರಿಂದ ಸಮಸ್ಯೆ ಸ್ವಲ್ಪ ಕಡಿಮೆಯಾಗಿದೆ.

ಕಡೆಕಾರು ದೇವರಕರೆ ಬಳಿ ಕೊಳವೆ ಬಾವಿಯನ್ನು ತೆರೆಯಲಾಗಿದ್ದು ಉಪ್ಪು ನೀರು ಬಂದಿದ್ದರಿಂದ ಉಪಯೋಗವಾಗುತ್ತಿಲ್ಲ . ಕಳೆದ ವರ್ಷ ಮಾರ್ಚ್‌ ತಿಂಗಳ ಆರಂಭದಲ್ಲೆ ಟ್ಯಾಂಕರ್‌ ನೀರನ್ನು ನೀಡಲಾಗುತ್ತಿತ್ತು. ಮಳೆ ಬೇಗ ಆರಂಭವಾಗಿದ್ದರಿಂದ 3 ಲಕ್ಷ ರೂಪಾಯಿ ಮಾತ್ರ ನೀರಿಗೆ ಖರ್ಚಾಗಿತ್ತು. ಆದರೆ ಅದರ ಹಿಂದಿನ ವರ್ಷ 10ಲಕ್ಷ ರೂಪಾಯಿ ವ್ಯಯಿಸಲಾಗಿತ್ತು.

ಪರಿಹಾರಕ್ಕೆ ವ್ಯವಸ್ಥೆ
ಕುತ್ಪಾಡಿ ಆಯುರ್ವೇದ ಕಾಲೇಜಿನ ಹಿಂಬದಿ ಮೂಡೊಟ್ಟು ಬಳಿ ಇರುವ ಸರಕಾರಿ ಜಾಗದಲ್ಲಿ ಎರಡು ಹೊಸ ಬಾವಿಯನ್ನು ತೆಗೆಯಲಾಗುತ್ತಿದೆ. ಇದರ ನೀರನ್ನು ಕುತ್ಪಾಡಿ ಮಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ ಹಿಂಬಂದಿ ಓವರ್‌ ಹೆಡ್‌ ಟ್ಯಾಂಕ್‌ನ್ನು ನಿರ್ಮಿಸಿ ಸಂಗ್ರಹ ಮಾಡಿ ಕುತ್ಪಾಡಿ ಸಸಿತೋಟದ ಭಾಗಕ್ಕೆ ಪೂರೈಕೆ ಮಾಡಲಾಗುವುದು. ಕಟ್ಟೆಗುಡ್ಡೆ ಬಳಿ 2ಸೆಂಟ್ಸ್‌ ಜಾಗದಲ್ಲಿ ಈಗಾಗಲೇ ಒಂದು ಬಾವಿಯನ್ನು ನಿರ್ಮಿಸಲಾಗುತ್ತಿದ್ದು,  ಕಾಮಗಾರಿ ಪ್ರಗತಿಯಲ್ಲಿದೆ.

Advertisement

ನೀರಿನ ದುರ್ಬಳಕೆ
ಗ್ರಾಮದ ಹೆಚ್ಚಿನ ಕಡೆಗಳಲ್ಲಿ ಕೆಲವರು ಕುಡಿಯುವ ನೀರಿನ ದುರ್ಬಳಕೆ ಮಾಡುತ್ತಿರುವುದರಿಂದ ನೀರಿನ ಅಭಾವ ಸೃಷ್ಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಳ್ಳಿ ಜೋಡಣೆ ಮಾಡಿದ ಕೆಲವು ಮನೆಗಳ ಮಂದಿ ತೋಟಗಳಿಗೂ ನೀರನ್ನು ಬಳಸಿಕೊಳ್ಳುವುದು ಕಂಡು ಬರುತ್ತಿದೆ. ಅಂತವರಿಗೆ ದಂಡದ ಜತೆಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಶುದ್ಧೀಕರಣ ಘಟಕ ಸ್ಥಾಪನೆ
ಕಡೆಕಾರು ಶಾಲೆಯ ಬಳಿ ತೆರೆದಿರುವ ಎರಡು ಸರಕಾರಿ ಬಾವಿಯ ನೀರು ಕುಡಿಯಲು ಯೋಗ್ಯವಾಗಿರದ ಕಾರಣ ಈ ಬಾವಿಯ ನೀರಿಗೆ 6-7 ತಿಂಗಳ ಹಿಂದೆ ಜಿ.ಪಂ. ಅನುದಾನದೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಒಂದು ಬಾವಿಯ ನೀರು ಪಾಚಿಯ ವಾಸನೆ ಬಂದಿದ್ದರಿಂದ ಇದೀಗ ಒಂದು ಬಾವಿಯ ನೀರನ್ನು ಮಾತ್ರ ಶುದ್ಧೀಕರಿಸಿ ಪೂರೈಸಲಾಗುತ್ತಿದೆ.

ಹೊಸ ತೆರೆದ ಬಾವಿ 
ಕಡೆಕಾರು ಹೊಳೆಗೆ ಹೊಂದಿಕೊಂಡೆ ಇರುವ ಗ್ರಾಮವಾಗಿರುವುದರಿಂದ ಹೆಚ್ಚಿನ ಮನೆಗಳು ವರ್ಷ ಪೂರ್ತಿ ಪಂಚಾಯತ್‌  ನೀರನ್ನು ಅವಲಂಬಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ನೀರಿನ ಸಮಸ್ಯೆ ಆಗದಂತೆ ಕಳೆದ ವರ್ಷ ಒಂದು ಹೊಸ ತೆರೆದ ಬಾವಿ ನಿರ್ಮಾಣ ಮಾಡಲಾಗಿದೆ. ಒಂದು ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಮುಂದೆ ಇನ್ನಷ್ಟು ಸಮರ್ಪಕವಾದ ಯೋಜನೆಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ.
ರಘುನಾಥ್‌ ಕೋಟ್ಯಾನ್‌, ಅಧ್ಯಕ್ಷರು, ಕಡೆಕಾರು ಗ್ರಾ.ಪಂ.

ಟ್ಯಾಂಕರ್‌ ನೀರು ಪೂರೈಕೆಗೆ ಸಿದ್ಧ
ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗುವುದು. ಅಗತ್ಯ ಕಂಡು ಬಂದಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಸಿದ್ಧವಾಗಿದ್ದೇವೆ. ಈಗಾಗಲೇ ಎರಡು ಹೊಸ ಬಾವಿ ಮತ್ತು ಒಂದು ಓವರ್‌ ಹೆಡ್‌ ಟ್ಯಾಂಕಿನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಎದುರಾಗದು.
 ಪ್ರವೀಣ್‌, ಪಿಡಿಒ, ಕಡೆಕಾರು ಗ್ರಾ.ಪಂ.

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next