ಹರಾರೆ: ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲೀಗ ನೀರಿನ ತೀವ್ರ ಅಭಾವ ತಲೆದೋರಿದೆ. ಕೆಲವು ಕಡೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇಂಥ ಸಂದರ್ಭದಲ್ಲೇ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಗಾಗಿ ಹರಾರೆಯಲ್ಲಿ ಬೀಡುಬಿಟ್ಟಿದೆ. ಇಲ್ಲಿನ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಕ್ರಿಕೆಟಿಗರಿಗೆ ಸುದೀರ್ಘ ಸ್ನಾನ ಮಾಡದಂತೆ ಸೂಚಿಸಿದೆ.
“ಅನಿವಾರ್ಯ ಸಂದರ್ಭದಲ್ಲಷ್ಟೇ ಸ್ನಾನ ಮಾಡಿ. ನೀರನ್ನು ಪೋಲು ಮಾಡಬೇಡಿ. ಕಡಿಮೆ ನೀರನ್ನು ಬಳಸಿ’ ಎಂದು ಬಿಸಿಸಿಐ ಹೇಳಿದೆ.
ಕ್ರಿಕೆಟಿಗರು ನಾನಾ ಒತ್ತಡದ ಸಂದರ್ಭದಲ್ಲಿ, ಔಟಾಗಿ ಬಂದೊಡನೆ ಒತ್ತಡವನ್ನು ನಿವಾರಿಸುವ ಸಲುವಾಗಿ ಶವರ್ ಕೆಳಗೆ ಗಂಟೆಗಟ್ಟಲೆ ನಿಂತು ಸ್ನಾನ ಮಾಡುವುದಿದೆ.
ಈ ಬಾರಿ ಹರಾರೆಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಅಲ್ಲದೇ ಭಾರತದ ಕ್ರಿಕೆಟಿಗರಿಗೆ ಈಜುಕೊಳದ ಅಭ್ಯಾಸಕ್ಕೂ ಅವಕಾಶ ಕಲ್ಪಿಸಲಾಗಿಲ್ಲ.
2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಭಾರತೀಯ ಕ್ರಿಕೆಟಿಗರಿಗೆ ಇಂಥದೇ ಪರಿಸ್ಥಿತಿ ಎದುರಾಗಿತ್ತು. ಅಂದು ಕೇಪ್‌ಟೌನ್‌ನಲ್ಲಿ ನೀರಿನ ಅಭಾವ ತಲೆದೋರಿದಾಗ ಮಿತವಾಗಿ ನೀರನ್ನು ಬಳಸಲು ಬಿಸಿಸಿಐ ಸೂಚಿಸಿತ್ತು.