Advertisement

ಕೋವಿಡ್ 19 ಸೋಂಕಿಗೆ ಭಯ ಪಡದೆ ಚಿಕಿತ್ಸೆಗೆ ಬನ್ನಿ: ಜಿಲ್ಲಾಧಿಕಾರಿ ಸಿಂಧೂ

02:37 AM Jul 12, 2020 | Hari Prasad |

ಮಂಗಳೂರು: ಕೋವಿಡ್ 19 ಸೋಂಕಿನ ಲಕ್ಷಣ ಇರುವವರು ತಪಾಸಣೆಗೆ ಹಾಗೂ ಸೋಂಕು ದೃಢಪಟ್ಟರೆ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡಕೊಳ್ಳಲು ಯಾವುದೇ ರೀತಿಯಿಂದಲೂ ಆತಂಕ ಪಡಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಧೈರ್ಯ ತುಂಬಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ತಜ್ಞ ವೈದ್ಯರ ತಂಡದ ಜತೆ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋವಿಡ್‌ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ವಿಶೇಷ ನಿಗಾ ವಹಿಸಲಾಗುತ್ತದೆ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದರು.

ಸಾವಿಗೆ ಕೋವಿಡ್ 19 ಮಾತ್ರ ಕಾರಣವಲ್ಲ
ನಗರ ವ್ಯಾಪ್ತಿಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆ, ವೆನ್ಲಾಕ್‌ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಫೀವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಕೋವಿಡ್ 19ನಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಒಟ್ಟು ಸಾವಿನ ಪ್ರಕರಣಗಳ ಪೈಕಿ 35 ಪ್ರಕರಣಗಳ ಬಗ್ಗೆ ವೈದ್ಯರ ತಂಡ ಕೂಲಂಕಷ ಪರಿಶೀಲನೆ ನಡೆಸಿದೆ. ಅದರಲ್ಲಿ 26 ಮಂದಿ ದೀರ್ಘ‌ಕಾಲದ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು.

ನಾಲ್ವರು ಬೇರೆ ಕಾರಣಗಳಿಂದ ಮೃತಪಟ್ಟಿದ್ದು ಸ್ಪಷ್ಟವಾಗಿದ್ದು, ತಪಾಸಣೆ ಮಾಡುವಾಗ ಕೋವಿಡ್ 19 ಕೂಡ ಇತ್ತು. ನಾಲ್ವರು ನ್ಯುಮೋನಿಯಾದಿಂದ ಮೃತಪಟ್ಟವರು. ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ 9 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 11 ಮಂದಿ 60ರಿಂದ 70 ವರ್ಷದವರು, 5 ಮಂದಿ 70ಕ್ಕಿಂತ ಹೆಚ್ಚು ವರ್ಷ ವಯಸ್ಸಿನವರು. 13 ಮಂದಿ ತಜ್ಞರ ತಂಡವು ಕೋವಿಡ್ 19ನಿಂದಾಗಿರುವ ಸಾವಿನ ಪ್ರಕರಣಗಳ ಅಧ್ಯಯನ ನಡೆಸುತ್ತಿದೆ ಎಂದು ಸಿಂಧೂ ಬಿ. ರೂಪೇಶ್‌ ತಿಳಿಸಿದರು.

ಚಿಕಿತ್ಸೆ ನಿರಾಕರಿಸಿದರೆ ಕ್ರಮ
ಯಾವುದೇ ಕಾಯಿಲೆಗಳ ಚಿಕಿತ್ಸೆಗೆ ನಿರಾಕರಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ 19 ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಖಾಸಗಿ ಆ್ಯಂಬುಲೆನ್ಸ್‌ ನಿರ್ವಹಣೆಗೆ ತಂಡ
ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಆ್ಯಂಬುಲೆನ್ಸ್‌ಗಳು 28 ಇವೆ. 10ನ್ನು ಕೋವಿಡ್‌ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಮೃತದೇಹಗಳನ್ನು ಸಾಗಿಸಲು ಕೂಡ ಅಗತ್ಯವಿರುವಷ್ಟು ಆ್ಯಂಬುಲೆನ್ಸ್‌ಗಳನ್ನು ಮೀಸಲಿರಿಸಲಾಗಿದೆ. ಒಂದು ಮೃತದೇಹ ಸಾಗಿಸುವಾಗ 2 ಆ್ಯಂಬುಲೆನ್ಸ್‌ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಖಾಸಗಿ ಆ್ಯಂಬುಲೆನ್ಸ್‌ಗಳನ್ನು ಕೂಡ ಜಿಲ್ಲಾಡಳಿತದ ತಂಡದಿಂದಲೇ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರೂಪಾ ತಿಳಿಸಿದರು.

ಪ್ರಭಾರ ಡಿಎಚ್‌ಒ ಡಾ| ರತ್ನಾಕರ್‌, ತಜ್ಞರ ಸಮಿತಿಯ ಸದಸ್ಯರಾದ ವೆನ್ಲಾಕ್‌ ಅಧೀಕ್ಷಕ ಡಾ| ಸದಾಶಿವ, ಡಾ| ಶರತ್‌ಬಾಬು, ಡಾ| ಮುರಲೀಧರ, ಡಾ| ಹಂಸರಾಜ ಆಳ್ವ, ಡಾ| ಸುದೀಪ್‌ ರೈ, ಡಾ| ಚಕ್ರಪಾಣಿ, ಡಾ| ತಾಜುದ್ದೀನ್‌ ಉಪಸ್ಥಿತರಿದ್ದರು.

ಮಳೆಗಾಲ ಕೋವಿಡ್ 19ಗೆ ಪೂರಕವೆಂದು ದೃಢವಾಗಿಲ್ಲ
ಮಳೆಗಾಲದಲ್ಲಿ ಕೋವಿಡ್ 19 ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂಬುದು ದೃಢಪಟ್ಟಿಲ್ಲ. ಆದರೆ ಮಳೆಗಾಲದಲ್ಲಿ ಹೆಚ್ಚಿನವರು ಮನೆಯೊಳಗೆ ಇರುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಬಹುದು. ಮೃತದೇಹದಲ್ಲಿರುವ ವೈರಸ್‌ ಸಜೀವ ವ್ಯಕ್ತಿಯಲ್ಲಿರುವಷ್ಟು ಸಕ್ರಿಯವಾಗಿ ಇರುವುದಿಲ್ಲ. ಆದರೆ ಮೃತದೇಹದಿಂದ ಹೊರಗೆ ಬರುವ ದ್ರವದಿಂದ ಅಪಾಯವಿರುತ್ತದೆ ಎಂದು ತಜ್ಞರ ತಂಡದ ಡಾ| ಮುರಲೀಧರ ಅವರು ತಿಳಿಸಿದರು.

ವೆಂಟಿಲೇಟರ್‌ ಹಾಕಲು ಬಿಡಲಿಲ್ಲ
ಮೃತರಲ್ಲಿ ಓರ್ವರಿಗೆ ರೋಗ ಲಕ್ಷಣ ಕಂಡುಬಂದು 7 ದಿನಗಳಾಗಿದ್ದವು. ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್‌ಗೆ ತಡವಾಗಿ ಕರೆತರಲಾಗಿತ್ತು. ಅವರ ತೂಕ 150 ಕೆಜಿ ಇತ್ತು. ವೆಂಟಿಲೇಟರ್‌ ಅಳವಡಿಕೆ ಕೂಡ ಕಷ್ಟವಾಯಿತು. ಇನ್ನೊಂದು ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಗೆ ವೆಂಟಿಲೇಟರ್‌ ಹಾಕುವುದಕ್ಕೆ ಮನೆಯವರು ಬಿಡಲಿಲ್ಲ ಎಂದು ವೆನ್ಲಾಕ್‌ ವೈದ್ಯಕೀಯ ಅಧೀಕ್ಷಕ ಡಾ| ಸದಾಶಿವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next