ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕು ಆತಂಕ ತೀವ್ರವಾಗುತ್ತಿರುವ ಬೆನ್ನಲ್ಲೇ ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರು ಹಾಗೂ ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಕೇಳಿಬರುತ್ತಿದೆ. ಈಗಾಗಲೇ ಮೂವರು ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದು ಉಳಿದ ಸದಸ್ಯರ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಸಾರ್ವಜನಿಕರಿಂದ ಹಾಗೂ ಖುದ್ದು ಅವರ ಬೆಂಬಲಿಗರಿಂದ ಅಂತರ ಕಾಯ್ದುಕೊಳ್ಳಿತ್ತಿದ್ದಾರೆ. ತಮ್ಮ ವಾರ್ಡ್‌ನ ನಿವಾಸಿಗಳಿಗೆ “ನಿವಾಸದ ಬಳಿ ಆಗಮಿಸಬೇಡಿ. ಸಮಸ್ಯೆಗಳಿದ್ದರೆ, ನಾವು ಕೂಡಲೇ ಸ್ಪಂದಿಸುತ್ತೇವೆ ನಮಗೆ ಜಸ್ಟ್ ಕರೆ ಮಾಡಿ. ಪರಿಹರಿಸುತ್ತೇವೆ.
ನೀವು ಮನೆಯ ಹತ್ತಿರ ಆಗಮಿಸುವುದರಿಂದ ನಿಮ್ಮ ಮತ್ತು ನಮ್ಮ ಆರೋಗ್ಯಕ್ಕೂ ತೊಂದರೆ ಉಂಟಾಗಬಹುದು. ಹೀಗಾಗಿ, ನೇರ ಭೇಟಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ’ ಎಂದು ಮನವಿ ಮಾಡುತ್ತಿರುವುದು ವರದಿಯಾಗುತ್ತಿದೆ. ಅಂದಹಾಗೆ, ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ, ಸಿದ್ಧಾಪುರ ವಾರ್ಡ್ ಸದಸ್ಯ ಎ. ಮುಜಾಹಿದ್ ಪಾಷಾ ಹಾಗೂ ಜಗಜೀವನ್‌ರಾಮ್‌ನಗರ ವಾರ್ಡ್ ಪಾಲಿಕೆ ಸದಸ್ಯೆ ಸೀಮಾ ಅಪ್ತಾಫ್ ಖಾನ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇಮ್ರಾನ್ ಪಾಷಾ ಗುಣಮುಖರಾಗಿದ್ದಾರೆ.
ಬೆಡ್ ಸಿಗದೇ ಇಬ್ಬರು ಮೃತ: ಸಕಾಲದಲ್ಲಿ ಹಾಸಿಗೆಗಳು ಸಿಗದೆ, ಆ್ಯಂಬುಲೆನ್ಸ್ ಬಾರದೆ ಇಬ್ಬರು ಸೋಂಕಿತರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಚೋಳರ ಪಾಳ್ಯದ 43 ವರ್ಷದ ವ್ಯಕ್ತಿ ಹಾಗೂ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯ 52 ವರ್ಷದ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿಯ 52 ವರ್ಷದ ವ್ಯಕ್ತಿ 5 ದಿನಗಳಿಂದ ಕೆಮ್ಮು ಶೀತಜ್ವರದಿಂದ ಬಳಲುತ್ತಿದ್ದು, ವಿಜಯ ನಗರದ ಮಾರುತಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು.
ನಂತರ ಗುರುವಾರ ರಾತ್ರಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಭಾನು ವಾರ ಸೋಂಕು ದೃಢಪಟ್ಟಿದ್ದು, ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯು ವುದಾಗಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ತಿಳಿಸಿ, ಮೂರು ದಿನಗಳಾದರೂ ಬಂದಿಲ್ಲ. ಸೋಮ ವಾರ ಬಿಬಿ ಎಂಪಿ ಸಿಬ್ಬಂದಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ.ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ವಾಹನದಲ್ಲಿ ತೆರಳಿದ್ದಾರೆ. ಮಂಗಳವಾರ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ 9 ಆಸ್ಪತ್ರೆಗಳನ್ನು ತಿರುಗಿದ್ದಾರೆ.
ಯಾರೂ ಚಿಕಿತ್ಸೆ ನೀಡಿಲ್ಲ. ಪರಿಣಾಮ ಸೋಂಕಿತರು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ವಿಕ್ಟೋ ರಿಯಾ ಆಸ್ಪತ್ರೆಯಲ್ಲಿ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬ ಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಚೋಳರಪಾಳ್ಯದ ವ್ಯಕ್ತಿಯೊಬ್ಬರಿಗೆ ಸೋಂಕು ಬಂದಿದ್ದು, ವಿಕ್ಟೋರಿಯಾ, ಕಿಮ್ಸ್, ಕೆ.ಸಿ. ಜನರಲ್ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಅಲೆದಾಡಿದರೂ, ಬೆಡ್ ಸಿಕ್ಕಿಲ್ಲ. ಕೊನೆಗೆ ಮನೆ ಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದರು.
ಬುಧವಾರ ಬೆಳಗ್ಗೆ ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ವಿಕ್ಟೋರಿಯಾಗೆ ಕೊಂಡೊಯ್ಯಲಾಗಿದೆ. ಬೆಡ್‌ಗಳ ಕೊರತೆಯಿಂದ ಮಂಗಳವಾರ ಸೋಂಕಿತರೊಬ್ಬರು ಆ್ಯಂಬುಲೆನ್ಸ್‌ನಲ್ಲಿಯೇ ಇಡೀ ರಾತ್ರಿ ಕಳೆದಿದ್ದಾರೆ. ಸೋಂಕಿತರಿಗೆ ವೆಂಟಿಲೇಟರ್ ಅಗತ್ಯವಿದ್ದು, ಮಂಗಳವಾರ ಸಂಜೆ 6ರಿಂದ 11ರವರೆಗೆ ಆ್ಯಂಬುಲೆನ್ಸ್‌ನಲ್ಲಿಯೇ ಉಳಿಯುವಂತಾಯಿತು. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ದರು.