Advertisement

ಡೊಂಬಿವಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳಿಯಿಂದ ಗುರುವಂದನೆ  

04:09 PM Mar 24, 2017 | |

ಡೊಂಬಿವಲಿ: ಕಾದ ಕಬ್ಬಿಣದ ಮೇಲೆ ಬಿದ್ದ ಮಳೆ ನೀರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.  ಆದರೆ ಸ್ವಾತಿ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದಾಗ ಅದು ಮುತ್ತಾಗುತ್ತದೆ. ಅದರಂತೆ ನಾವು ಸಜ್ಜನರ ಸಹವಾಸದಿಂದ ಸ್ವಾತಿ ಮುತ್ತಾಗಿ ಜೀವನದಲ್ಲಿ ಉನ್ನತಿ ಸಾಧಿಸಿ ಸಾರ್ಥಕ್ಯದ ಜೀವನ  ಸಾಗಿಸಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಮಹಾ ಸ್ವಾಮಿಗಳು ನುಡಿದರು.
ಡೊಂಬಿವಲಿ  ಪಶ್ಚಿಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳಿ ಆಯೋಜಿಸಿದ್ದ ಗುರುವಂದನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸಾಧು-ಸಂತರು, ಮಹಾತ್ಮರ ಮಧ್ಯೆ ಮುತ್ತಿನಂತೆ ಕಾಣುತ್ತಾರೆಯೋ ಹೊರತು ಮುತ್ತಾಗಲು ಸಾಧ್ಯವಿಲ್ಲ. ಆದ್ದರಿಂದ ಅಂತವರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಒಂದು ಮುತ್ತಿಗೆ ಸಮಾನವಾಗಲು ಸಾಧ್ಯ. ಅಲ್ಲದೆ ಮುತ್ತಿನಂತಹ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ನಮ್ಮಲ್ಲಿಯೂ ಗುರುಗಳ ಉದ್ಧೇಶವಾಗಿರಬೇಕು. ಜಾತಿ, ಧರ್ಮಗಳ ಭೇದವನ್ನು ಎಣಿಸದೆ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶ್ರೀ ರಾಘವೇಂದ್ರ ಸ್ವಾಮಿಗಳು ಅಪರೂಪದ ಗುರುಗಳಾಗಿದ್ದಾರೆ. ಮುಂಬಯಿ ಕನ್ನಡಿಗರ ಕನ್ನಡಾಭಿಮಾನ, ವಿಶಾಲ ಹೃದಯದ ಭಕ್ತ ಸಮುದಾಯವನ್ನು ಕಂಡು ಹೃದಯ ತುಂಬಿ ಬಂದಿದೆ ಎಂದರು.

Advertisement

ಸಮಾರಂಭದಲ್ಲಿ ಶ್ರೀ ಚಿದಂಬರೇಶ್ವರ ಸೇವಾ ಮಂಡಳದ ಅಧ್ಯಕ್ಷ ವಿ. ಐ. ಮುಳಗುಂದ ಅವರು ವೇದಘೋಷಗಳ ಮಧ್ಯೆ ಸ್ವಾಮಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು. ವಿದ್ವಾಂಸರಾದ ಪವಮಾನಚಾರ್ಯ ಪಂಚಮುಖೀ, ರಾಘವೇಂದ್ರಾಚಾರ್ಯ ಅಕ್ಕಿ ಮೊದಲಾದವರು ಉಪನ್ಯಾಸ ನೀಡಿದರು. ಶ್ರೀ ಮೂಲ ರಾಮದೇವರ ಪೂಜೆಯನ್ನು ಶ್ರೀಗಳು ನೆರವೇರಿಸಿ ಪ್ರಸಾದ ವಿತರಿಸಿದರು.

ಸಂಸ್ಥೆಯ ಅಧ್ಯಕ್ಷ ವಿ. ಐ. ಮುಳಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌. ಡಿ. ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ ಡೊಂಬಿವಲಿ ನಗರಕ್ಕೆ ಆಗಮಿಸಿದ ಶ್ರೀ ಸುಬುದೇಂದ್ರ ತೀರ್ಥರನ್ನು ಕೋಪರ್‌ಕ್ರಾಸ್‌ ರಸ್ತೆಯಿಂದ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಸಭಾಗೃಹದಲ್ಲಿ ಬರಮಾಡಿ ಕೊಳ್ಳಲಾಯಿತು. 

ವೇದಘೋಷ, ನೃತ್ಯ, ಭಜನೆ, ವಿವಿಧ ವಾದ್ಯಮೇಳಗಳು, ಜಯಕಾರದೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು. 

ಶ್ರೀಗಳು ಡೊಂಬಿವಲಿ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದರು. 
ಚಿತ್ರ-ವರದಿ : ಗುರುರಾಜ ಪೋತನೀಸ.

Advertisement
Advertisement

Udayavani is now on Telegram. Click here to join our channel and stay updated with the latest news.

Next