Advertisement

ಸಸಿ ಬೆಳೆಸುವ ಪ್ರವೃತ್ತಿ ನಿಮ್ಮಲ್ಲಿರಲಿ: ಡಾ.ಪುಷ್ಪಾ

09:26 PM Jun 15, 2019 | Lakshmi GovindaRaj |

ಹುಣಸೂರು: ತಾಲೂಕಿನ ಮರದೂರು ಲಾಸಲೆಟ್‌ ವಿದ್ಯಾನಿಕೇತನ್‌ ಸಂಸ್ಥೆಯಲ್ಲಿ ನಡೆದ ಪರಿಸರ ಯುಕ್ತ ಸಮಾರಂಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಹಾಗೂ ಜಿಪಂ ಸದಸ್ಯೆ ಡಾ.ಪುಷ್ಪಾಅಮರ್‌ನಾಥರಿಗೆ ಸಂಸ್ಥೆ ಕೊಡಮಾಡುವ “ಪರಿಸರ ಮಿತ್ರ’-2019 ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಸಮ್ಮಖದಲ್ಲಿ ನಡೆದ ಪರಿಸರ ಕಲರವಗಳ ನಡುವೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ಸಂಸ್ಥೆ ನಿರ್ದೇಶಕ ಫಾ.ಜೋಬಿಟ್‌ ಹಸಿರು ಮಿಶ್ರಿತ ಆಕರ್ಷಕ ಕಿರೀಟ ತೊಡಿಸಿ ಗೌರವಿಸಿ, ಪ್ರಶಸ್ತಿ ಪ್ರದಾನ ನೆರವೇರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್‌, ಇಂದು ವಿಶ್ವವೇ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಬಾರಿ ವಾಯುಮಾಲಿನ್ಯ ತಡೆಗಟ್ಟುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕೈಗಾರಿಕೆಗಳು ಹೆಚ್ಚು ವಾಯುಮಾಲಿನ್ಯವನ್ನು ಉಂಟುಮಾಡುತ್ತಿವೆ, ಪ್ರಕೃತಿ ನಾಶದಿಂದಾಗಿ ವಿಶ್ವವೇ ತಲ್ಲಣಿಸುವಂತಾಗಿದೆ. ಹೀಗಾಗಿ ಪರಿಸರ ದಿನಾಚರಣೆಯನ್ನು ಜೂನ್‌ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆ ಸುತ್ತಮುತ್ತ ಸಸಿನೆಡಬೇಕು. ಹಾಗೆಯೇ ಸ್ಥಳಾವಕಾಶದ ಕೊರತೆ ಇದ್ದರೆ ಕನಿಷ್ಠ ಹೂ ಕುಂಡಗಳಲ್ಲಾದರೂ ಸಸಿಗಳನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ದಿನನಿತ್ಯ ಉಪಯೋಗಿಸುವ ಮಾವಿನಹಣ್ಣು, ನೇರಳೆಹಣ್ಣು, ಹಲಸಿನಹಣ್ಣು ಸೇರಿದಂತೆ ಎಲ್ಲಾ ಹಣ್ಣುಗಳನ್ನು ತಿಂದ ನಂತರ ಬೀಜವನ್ನು ಎಲ್ಲೆಂದರಲ್ಲಿ ಬಿಸಾಡದೆ ಸಂಗ್ರಹಿಸಿ ಮತ್ತೆ ಸಸಿ ಬೆಳೆಸುವ ಪ್ರವೃತ್ತಿ ನಿಮ್ಮಲ್ಲಿರಲಿ, ಹಸಿರೆಂಬುದು ನಿಮ್ಮ ಉಸಿರಾಗಲಿ, ಪ್ರಕೃತಿ ಆರಾಧನೆ ನಿಮ್ಮದಾಗಲಿ, ಸ್ಕೂಟರ್‌ ಬಳಕೆಗಿಂತ ಆಗಾಗ್ಗೆ ಸೈಕಲ್‌ ಬಳಸಿ. ರೈತರ ಜೀವನವನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

Advertisement

ಮುಂದಿನ ವಾರ ಶಾಲೆಯ ಮಕ್ಕಳೊಂದಿಗೆ ಸೀಡ್‌ ಬಾಲ್‌ ತಯಾರಿಸುವ ಉದ್ದೇಶ ಹೊಂದಿದ್ದು, ಸಹಕರಿಸಬೇಕೆಂದು ಮನವಿ ಮಾಡಿದರು. ಎಸಿಫ್‌ ಸೋಮಪ್ಪ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ಇರುವ ಅರ್ಹ ವ್ಯಕ್ತಿ ಡಾ.ಪುಷ್ಪಾ ಅಮರನಾಥ್‌ರಿಗೆ ಪರಿಸರ ಮಿತ್ರ ಪ್ರಶಸ್ತಿ ನೀಡುತ್ತಿರುವುದು ಸ್ವಾಗತಾರ್ಹ. ಇವರು ಲಕ್ಷ ಬೀಜದುಂಡೆ(ಸೀಡ್‌ಬಾಲ್‌) ತಯಾರಿಸಲು ವಿಶೇಷ ಶ್ರಮ ಹಾಕಿದ್ದಾರೆಂದು ಸ್ಮರಿಸಿದರು.

ಪರಿಸರ ದಿನಾಚರಣೆ ಎಂಬುದು ವಿದ್ಯಾರ್ಥಿಗಳ ನಿತ್ಯದ ದಿನಚರಿಯಾಗಬೇಕೆಂದು ಆಶಿಸಿದರು. ದಿನಾಚರಣೆ ಅಂಗವಾಗಿ ಪರಿಸರಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ವಿದ್ಯಾರ್ಥಿಗಳೊಂದಿಗೆ ಡಾ.ಪುಷ್ಪಾಅಮರನಾಥ್‌ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನ ಟಾಪರ್‌ ಆದ ಶಾಲೆಯ ಎಡ್ನಾ ಅನ್ನಾ ವೈಲೆಟ್‌ ಅವರನ್ನು ಗೌರವಿಸಲಾಯಿತು. ಸಂಸ್ಥೆ ವ್ಯವಸ್ಥಾಪಕ ಫಾ.ಜೋಜೋ, ಫಾ.ತೂಯನಾಧನ್‌, ಪ್ರಾಚಾರ್ಯ ರವಿ ದೀಪಕ್‌, ಮುಖ್ಯ ಶಿಕ್ಷಕಿ ಸಿಸ್ಟರ್‌ ಕರುಣಾ, ಉಪ ಪ್ರಾಂಶುಪಾಲ ಫಾ.ಅನಿತ್‌, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next