ಹೊಸದಿಲ್ಲಿ: ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ (Blankets) ಗಳನ್ನು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ತೊಳೆಯಲಾಗುತ್ತದೆ ಮತ್ತು ಹಾಸಿಗೆ ಹೊದಿಕೆಯಾಗಿ ಬಳಸಲು ಹೆಚ್ಚುವರಿ ಬೆಡ್ಶೀಟ್ ಅನ್ನು ಬೆಡ್ರೋಲ್ ಕಿಟ್ನಲ್ಲಿ ನೀಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ (ನ.17) ಲೋಕಸಭೆಗೆ ತಿಳಿಸಿದರು.
ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸಲು ಹಾಸಿಗೆಗಾಗಿ ಪ್ರಯಾಣಿಕರು ಪಾವತಿಸುವಾಗ ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಅವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಹೊದಿಕೆಗಳು ಹಗುರವಾಗಿರುತ್ತವೆ, ತೊಳೆಯಲು ಸುಲಭ ಮತ್ತು ಒಟ್ಟಾರೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ಒದಗಿಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
ಉತ್ತಮ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಹೊಸ ಲಿನಿನ್ ಸೆಟ್ಗಳ ಖರೀದಿ, ನೈರ್ಮಲ್ಯದ ಲಿನಿನ್ ಸೆಟ್ಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಯಾಂತ್ರಿಕೃತ ಲಾಂಡ್ರಿಗಳು, ಗುಣಮಟ್ಟದ ಯಂತ್ರಗಳ ಬಳಕೆ ಮತ್ತು ತೊಳೆಯಲು ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿದಂತೆ ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಹಲವಾರು ಕ್ರಮಗಳನ್ನು ಅವರು ಪ್ರಸ್ತಾಪಿಸಿದರು. ಅಲ್ಲದೆ ತೊಳೆದ ಲಿನಿನ್ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಲು ವೈಟೊ-ಮೀಟರ್ಗಳನ್ನು ಬಳಸಲಾಗುತ್ತದೆ ಎಂದು ವೈಷ್ಣವ್ ಹೇಳಿದರು.
“ಲಿನಿನ್/ಬೆಡ್ರೋಲ್ಗೆ ಸಂಬಂಧಿಸಿದ ದೂರುಗಳು ಸೇರಿದಂತೆ ರೈಲ್ಮದಾದ್ ಪೋರ್ಟಲ್ ನಲ್ಲಿ ದಾಖಲಾಗಿರುವ ದೂರುಗಳ ಮೇಲೆ ನಿಗಾ/ತಕ್ಷಣ ಕ್ರಮ ಕೈಗೊಳ್ಳಲು ವಲಯ ಪ್ರಧಾನ ಕಛೇರಿ ಮತ್ತು ವಿಭಾಗೀಯ ಮಟ್ಟದಲ್ಲಿ ವಾರ್ ರೂಮ್ಗಳನ್ನು ಸ್ಥಾಪಿಸಲಾಗಿದೆ” ಎಂದು ಅವರು ಹೇಳಿದರು.