ತಿರುವನಂತಪುರಂ: ಬಹುನಿರೀಕ್ಷಿತ ಕೇರಳ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹೋದರ ರಾಹುಲ್ ಗಾಂಧಿ ಅವರಿಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಭಾರೀ ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.
ಶನಿವಾರ (ನ.23) ವಯನಾಡ್ ಲೋಕಸಭಾ ಕ್ಷೇತ್ರದ ಮತಎಣಿಕೆ ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದ್ದು, ಸದ್ಯದ ಟ್ರೆಂಡ್ ಪ್ರಕಾರ ಪ್ರಿಯಾಂಕಾ ಗಾಂಧಿ 3.68ಲಕ್ಷಕೂ ಅಧಿಕ ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಜಯ ಸಾಧಿಸಿದ್ದು, ನಂತರ ರಾಯ್ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ವಯನಾಡ್ ಕ್ಷೇತ್ರ ತೆರವಾಗಿದ್ದ ಕಾರಣ ಚುನಾವಣೆ ನಡೆದಿತ್ತು.
ಪ್ರಿಯಾಂಕಾ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಚುನಾವಣ ರಾಜಕಾರಣಕ್ಕೆ ಎಂಟ್ರಿ ಕೊಟ್ಟಂತಾಗಿದ್ದು, ಈವರೆಗಿನ ಮತ ಎಣಿಕೆ ಪ್ರಕಾರ ಪ್ರಿಯಾಂಕಾ 5.4 ಲಕ್ಷ ಮತ ಪಡೆದಿದ್ದಾರೆ. ಸಿಪಿಐ ಮುಖಂಡ ಸತ್ಯನ್ ಮೋಕೆರಿ 1.8 ಲಕ್ಷ ಮತ ಪಡೆದಿದ್ದರೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನವ್ಯಾ ಹರಿದಾಸ್ 1 ಲಕ್ಷ ಮತ ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2024ರಲ್ಲಿ ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಎರಡೂ ಕ್ಷೇತ್ರಗಳಲ್ಲೂ ಜಯಗಳಿಸಿದ್ದರು. ಕೊನೆಗೆ ವಯನಾಡ್ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ರಾಯ್ ಬರೇಲಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.