ನವದೆಹಲಿ: ಸೈಬರ್ ವಂಚನೆ, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲು ತೆರಳಿದ ಜಾರಿ ನಿರ್ದೇಶನಾಲಯದ (ಇಡಿ) ತಂಡದ ಸದಸ್ಯರ ಮೇಲೆ ಗುಂಪೊಂದು ದಾಳಿ ನಡೆಸಿರುವ ಘಟನೆ ನೈರುತ್ಯ ದೆಹಲಿಯ ಬಿಜ್ವಾಸನ್‌ನಲ್ಲಿ ಗುರುವಾರ(ನ.28) ನಡೆದಿದೆ.
ದುಷ್ಕರ್ಮಿಗಳ ದಾಳಿಯಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಯುಎಇ ಮೂಲದ ಪಿವೈಪಿಎಲ್ ಆಪ್‌ಗೆ ಸಂಬಂಧಿಸಿದ ಸೈಬರ್ ಅಪರಾಧಗಳ ತನಿಖೆಯ ಭಾಗವಾಗಿ ಬಿಜ್ವಾಸನ್ ಪ್ರದೇಶದ ಫಾರ್ಮ್‌ಹೌಸ್‌ಗೆ ಗುರುವಾರ ಮುಂಜಾನೆ ಇಡಿ ಅಧಿಕಾರಿಗಳು ಆಗಮಿಸಿದಾಗ ಈ ಘಟನೆ ಸಂಭವಿಸಿದೆ. ಇಡಿ ತಂಡದ ಮೇಲೆ ಅಶೋಕ್ ಶರ್ಮಾ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರ ಸೇವಕರು ಸೇರಿದಂತೆ ಐವರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಮುಖ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಡಿ ಮಾಹಿತಿ ಪ್ರಕಾರ, ಫಿಶಿಂಗ್ ಹಗರಣಗಳು, ಕ್ಯೂಆರ್ ಕೋಡ್ ವಂಚನೆ ಮತ್ತು ಪಾರ್ಟ್ ಟೈಮ್ ಉದ್ಯೋಗ ಹಗರಣಗಳಂತಹ ಸಾವಿರಾರು ಸೈಬರ್ ಅಪರಾಧಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ