Advertisement

ದ.ಕ. ಜಿಲ್ಲೆ : ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

01:30 AM May 19, 2020 | Sriram |

ಮಂಗಳೂರು: ರಾಜ್ಯ ಸರಕಾರ ಲಾಕ್‌ ಡೌನ್‌ ಸಡಿಲಿಸಿ ರಾಜ್ಯದಲ್ಲಿ ಬಸ್‌ ಸಂಚಾರಕ್ಕೆ ಅನುಮತಿ ನೀಡಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 19ರಿಂದ ಖಾಸಗಿ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ಇಲ್ಲ; ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಲಿವೆ. ಆದರೆ ಮೇ 19ರಿಂದ ಮಂಗಳೂರು- ಉಡುಪಿ- ಕುಂದಾಪುರ ಮಾರ್ಗದಲ್ಲಿ ಕೆಲವು ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚಾರ ಆರಂಭಿಸುವ ಸಾಧ್ಯತೆ ಇದೆ.

Advertisement

ಖಾಸಗಿ ಬಸ್‌ ಸಂಚಾರ ನಡೆಸಬಹುದೆಂದು ಸರಕಾರ ಪ್ರಕಟಿಸಿದ್ದರೂ ನಿರ್ದೇಶನಗಳು ಬಂದಿಲ್ಲ; ಹಾಗಾಗಿ ಮಂಗಳವಾರದಿಂದ ಬಸ್‌ ಸಂಚಾರ ಪುನರಾರಂಭಿಸುವ ಬಗ್ಗೆ ನಿರ್ಧಾರ ತಳೆದಿಲ್ಲ ಎಂದು ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದ್ದಾರೆ.

ಮೇ 20ರಿಂದ ಮಂಗಳೂರು- ಉಡುಪಿ- ಕುಂದಾಪುರ ಮಧ್ಯೆ ಕೆಲವು ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಓಡಾಟ ಆರಂಭಿಸುವ ಸಾಧ್ಯತೆ ಇದೆ ಎಂದು ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಸ್ಪಷ್ಟಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗಿಳಿಸುವ ಬಗ್ಗೆ  ನಗರದ ಬಿಜೈ ಬಸ್‌ ನಿಲ್ದಾಣದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದೀರ್ಘ‌ ದೂರ ಹಾಗೂ ಅಂತರ್‌ ಜಿಲ್ಲಾ ಮಾರ್ಗಗಳಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ಬಸ್‌ಗಳನ್ನು ಸಿದ್ಧಗೊಳಿಸಲಾಗಿದೆ. ಟಿಕೆಟ್‌ ಕೌಂಟರ್‌ನಲ್ಲಿ ಟಿಕೆಟ್‌ ವಿತರಿಸಲು ಹಾಗೂ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್-19 ಹರಡದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಶೇ. 50ರಷ್ಟು ಪ್ರಯಾಣಿಕರನ್ನು ಮಾತ್ರ ಬಸ್‌ನಲ್ಲಿ ಕೊಂಡೊಯ್ಯಲು ಅನುಮತಿ ಇದೆ.

Advertisement

ದೀರ್ಘ‌ ದೂರ ಮತ್ತು ಅಂತರ್‌ ಜಿಲ್ಲಾ ಮಾರ್ಗಗಳಲ್ಲಿ ಬಸ್‌ ಓಡಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಬಸ್‌ ಸಂಚಾರ ಆರಂಭವಾಗಲಿದೆ. ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು.
-ಅರುಣ್‌, ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಕರು, ಮಂಗಳೂರು

ಆರಂಭದಲ್ಲಿ ಸ್ಥಳೀಯ ಸಂಚಾರ ಆರಂಭಿಸಿ ಬಳಿಕ ಆವಶ್ಯಕತೆ ನೋಡಿಕೊಂಡು ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಮಾ. 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ರಾಜಹಂಸ ಬಸ್‌ ಹೊರಡಲಿದೆ
– ನಾಗೇಂದ್ರ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ

ತೆರಿಗೆ ಪಾವತಿ ಅಸಾಧ್ಯವಾದ್ದರಿಂದ ಹಾಗೂ ಲಾಕ್‌ಡೌನ್‌ ಅವಧಿಯ ತೆರಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ಖಾಸಗಿ ಸಿಟಿ ಮತ್ತು ಸರ್ವೀಸ್‌ ಬಸ್‌ಗಳ ಪರವಾನಿಗೆಯನ್ನು ಆರ್‌ಟಿಗೆ ಸರಂಡರ್‌ ಮಾಡಲಾಗಿದೆ. ಈಗ ಮೇ 19ರಿಂದ ಬಸ್‌ಗಳನ್ನು ಆರಂಭಿಸುವುದಾದರೆ ಇಡೀ ತಿಂಗಳ ತೆರಿಗೆ ಪಾವತಿಸಬೇಕಾಗುತ್ತದೆ. ಬೇಡಿಕೆಗೆ ಒಪ್ಪಿದರೆ ಜೂನ್‌ 1ರಿಂದ ಬಸ್‌ ಓಡಿಸಲು ಸಿದ್ಧರಿದ್ದೇವೆ.
-ದಿಲ್‌ರಾಜ್‌ ಆಳ್ವ, ಅಧ್ಯಕ್ಷರು, ದ.ಕ. ಬಸ್‌ ಮಾಲಕರ ಸಂಘ

ಉಡುಪಿ: ಪ್ರಯಾಣಿಕರ ಸಂಖ್ಯೆ ಆಧರಿಸಿ ಸಂಚಾರ
ಉಡುಪಿ: ಕೆಎಸ್ಸಾರ್ಟಿಸಿಯ ಬಸ್‌ಗಳು ಮಂಗಳವಾರದಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೊದಲಾದ ಜಿಲ್ಲೆಗಳಿಗೆ ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಬಸ್‌ಗಳನ್ನು ಬಿಡಲಾಗುವುದು ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮ್ಯಾನೇಜರ್‌ ಉದಯ ಕುಮಾರ ಶೆಟ್ಟಿ ತಿಳಿಸಿದ್ದಾರೆ.

ಸೋಮವಾರ ಉಡುಪಿ ಮತ್ತು ಕುಂದಾಪುರ ದಿಂದ ಉಡುಪಿ-ಕುಂದಾಪುರ, ಕುಂದಾಪುರ- ಬೈಂದೂರು, ಉಡುಪಿ-ಕಾರ್ಕಳ, ಉಡುಪಿ-ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ನಡುವೆ ಸಂಚರಿ ಸಿವೆ. ಖಾಸಗಿಯ ಭಾರತೀ ಮೋಟಾರ್ ಬಸ್‌ಗಳು ಸಂಚರಿಸಿದವು. ಖಾಸಗಿ ಬಸ್‌ಗಳು ಮಾಸಾಂತ್ಯದ ವರೆಗೂ ಸಂಚರಿಸುವ ಲಕ್ಷಣಗಳಿಲ್ಲ. ಬೇಡಿಕೆ ಈಡೇ ರದೆ ಬಸ್‌ಗಳನ್ನು ಹೊರ ತೆಗೆದರೆ ನಷ್ಟವಾಗುತ್ತದೆ ಎಂಬ ಭೀತಿ ಬಸ್‌ ಮಾಲಕರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next