Advertisement

ಪ್ರೀತಿಯ ಬಗ್ಗೆ ಚರ್ಚಾ ಸ್ಪರ್ಧೆ

10:00 PM Jan 20, 2018 | |

ಲವ್‌ಗೆ ಯಾರನ್ನ ಬೇಕಾದರೂ ಸೆಳೆಯುವ ತಾಖತ್ತಿದೆ ಎಂದು ದೊಡ್ಡ ಧ್ವನಿಯಲ್ಲಿ ಹೇಳುತ್ತಾನೆ ಅವನು.ಹಾಗಾದರೆ, ನನ್ನಲ್ಲಿ ಪ್ರೀತಿ ಹುಟ್ಸು ನೋಡೋಣ ಅಂತ ತಣ್ಣಗೆ ಹೇಳುತ್ತಾಳೆ ಅವಳು. ಅಲ್ಲಿಂದ ಅವರಿಬ್ಬರ ಮಧ್ಯೆ ಒಂದು ಚಾಲೆಂಜ್‌ ಶುರುವಾಗುತ್ತದೆ. 30 ದಿನಗಳಲ್ಲಿ ಅವಳಿಗೆ ಪ್ರೀತಿಯ ಬಗ್ಗೆ ತಿಳವಳಿಕೆ ಮೂಡಿಸುವುದರ ಜೊತೆಗೆ, ತನ್ನನ್ನು ಲವ್‌ ಮಾಡುವಂತೆ ಮಾಡಬೇಕು. ಒಂದು ಪಕ್ಷ ಸಾಧ್ಯವಾಗದಿದ್ದರೆ, ಅವಳ ಲಾಯದಲ್ಲಿ ಅವನು ಕೆಲಸ ಮಾಡಬೇಕು.

Advertisement

ಗೆದ್ದರೆ, ಅವಳು ಅವನ ಹೆಂಡತಿ ಆಗಬೇಕು. ಸರಿ, 30 ದಿನಗಳಲ್ಲಿ ಅವಳನ್ನು ಪಟಾಯಿಸುವುದಕ್ಕೆ ಅವನಿಂದ ಸಾಧ್ಯವಾಗುತ್ತದಾ ಎಂದು ಗೊತ್ತಾಗಬೇಕಿದ್ದರೆ, ಚಿತ್ರ ನೋಡಬೇಕು. 30 ದಿನಗಳ ಜೊತೆಗೆ ಈ ಮೂರು ಗಂಟೆ ಮತ್ತು 30 ಸೆಕೆಂಡ್‌ ಎಂದರೇನು ಎಂದು ಗೊತ್ತಾಗಬೇಕಿದ್ದರೂ ಚಿತ್ರ ನೋಡಲೇಬೇಕು.
“3 ಗಂಟೆ 30 ದಿನ 30 ಸೆಕೆಂಡು’ ಚಿತ್ರದ ಒಂದು ಥ್ರಿಲ್ಲರ್‌ ಚಿತ್ರವಿರಬಹುದು ಎಂದು ನೀವೇನಾದರೂ ಊಹಿಸಿದ್ದರೆ ಅದು ತಪ್ಪು.

ಅದೊಂದು ಪ್ರೇಮಕಥೆ ಇರುವ ಚಿತ್ರ. ಹಠಮಾರಿ ಹೆಣ್ಣು ಮತ್ತು ಕಿಲಾಡಿ ಗಂಡು ನಡುವಿನ ಒಂದು ಪ್ರೇಮಕಥೆ. ಪ್ರೀತಿ ಎಂದರೇನು ಎಂದು ಗೊತ್ತಿರದ ಪಕ್ಕಾ ಪ್ರಾಕ್ಟಿಕಲ್‌ ಹುಡುಗಿ ಒಂದು ಕಡೆ. ಒಲವೇ ಜೀವನ ಸಾಕ್ಷಾತ್ಕಾರ ಎಂಬ ನಂಬಿರುವ ಹುಡುಗ ಇನ್ನೊಂದು ಕಡೆ. ಇವರಿಬ್ಬರಲ್ಲಿ ಒಂದು ಚಾಲೆಂಜ್‌ ಹುಟ್ಟುತ್ತದೆ ಮತ್ತು ಅವಳಿಗೆ ಪ್ರೀತಿ ಎಂದರೇನು ಎಂದು ಅರ್ಥ ಮಾಡಿಸುವುದಕ್ಕೆ, ಅವಳನ್ನು ಪ್ರಯಾಣ ಕರೆದುಕೊಂಡು ಹೋಗುತ್ತಾನೆ.

ಈ ಪ್ರಯಾಣದಲ್ಲಿ ಹಲವಾರು ಜನರನ್ನು ಭೇಟಿಯಾಗುತ್ತಾರೆ. ಅವರೆಲ್ಲರೂ ಪ್ರೀತಿಯಿಂದ ಹೇಗೆ ಬದುಕುತ್ತಿದ್ದಾರೆ ಮತ್ತು ಪ್ರೀತಿ ಎನ್ನುವುದು ಎಷ್ಟು ಮುಖ್ಯ ಎಂಬುದನ್ನು ಅವನು ಸಾಬೀತುಪಡಿಸುತ್ತಾ ಹೋಗುತ್ತಾನೆ. ಈ ಪ್ರಯಾಣದಲ್ಲಿ ಮಾತು-ಮಂಥನ ನಡೆಯುತ್ತದೆ. ಸರಿ, ತಪ್ಪುಗಳ ದೊಡ್ಡ ಚರ್ಚೆಯಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯೆಂದರೆ ನಂಬಿಕೆಯಾ? ಆಕರ್ಷಣೆಯಾ? ಕೆಮಿಕಲ್‌ ರಿಯಾಕ್ಷನ್ನಾ? ಸ್ವಾರ್ಥವಾ? ಮುಂತಾದ ಹಲವು ವಿಷಯಗಳ ಚರ್ಚೆಯಾಗುತ್ತಾ ಹೋಗುತ್ತದೆ.

ಇಲ್ಲಿ ನಿರ್ದೇಶಕ ಮಧುಸೂಧನ್‌, ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವುದರಿಂದ ಅವರಿಗೆ ಪ್ರತಿ ಸೆಕೆಂಡ್‌ನ‌ ಮಹತ್ವ ಗೊತ್ತಿದೆ. ಹಾಗಾಗಿ ಅವರು ಹೆಚ್ಚು ಸಮಯ ವ್ಯರ್ಥ ಮಾಡುವುದಿಲ್ಲ ಅಥವಾ ಚಿತ್ರಕ್ಕೆ ಸಂಬಂಧಿಸದ್ದನ್ನು ಹೇಳುವ ಪ್ರಯತ್ನ ಮಾಡುವುದಿಲ್ಲ. ನೇರವಾಗಿ ಮತ್ತು ಅಷ್ಟೇ ಚುರುಕಾಗಿ ಹೇಳುವುದು ಒಂದು ಕಡೆಯಾದರೆ, ಹಲವು ಟ್ವಿಸ್ಟ್‌ಗಳ ಮೂಲಕ ತಮ್ಮ ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾರೆ.

Advertisement

ಬಹುಶಃ ಚಿತ್ರದಲ್ಲಿ ಕಿರಿಕಿರಿ ಆಗುವ ಅಂಶವೆಂದರೆ ಈ ಅತಿಯಾದ ಮಾತು ಎಂದರೆ ತಪ್ಪಿಲ್ಲ. ಮೊದಲ ಕೆಲ ನಿಮಿಷಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಕೊನೆಯವರೆಗೂ ಲವ್‌ ಎಂದರೇನು ಎಂಬ ಚರ್ಚೆ ಚಿತ್ರದುದ್ದಕ್ಕೂ ನಡೆಯುತ್ತದೆ. ಅವಳು ಒಪ್ಪುವುದಿಲ್ಲ, ಇವನು ಬಿಡುವುದಿಲ್ಲ. ಹೀಗೆ ಚರ್ಚೆ ನಡೆದು ನಡೆದು, ಪ್ರೇಕ್ಷಕರ ನಂಬಿಕೆಯೇ ಬುಡಮೇಲು ಆಗುವ ಸ್ಥಿತಿ ತಲುಪುತ್ತದೆ. ಹೀಗಿರುವಾಗಲೇ ನಾಟಕೀಯವೆನ್ನುವಂತಹ ಬೆಳವಣಿಗೆಗಳು ನಡೆದು ಚಿತ್ರ ಸುಖಾಂತ್ಯ ಕಾಣುತ್ತದೆ.

ಈ ಚರ್ಚೆಯಲ್ಲಿ  ನಾಯಕ ಗೆದ್ದರೂ, ಪ್ರೇಕ್ಷಕರ ವಿಷಯದಲ್ಲಿ ಹೇಳುವುದಾದರೆ ನಾಯಕಿ ಕಾವ್ಯ ಶೆಟ್ಟಿ ಗೆಲ್ಲುತ್ತಾರೆ. ಇಷ್ಟು ಚಿತ್ರಗಳಿಗೆ ಹೋಲಿಸಿದರೆ, ಕಾವ್ಯಾ ಇಲ್ಲಿ ತಮ್ಮ ಅಭಿನಯದಿಂದ ಗೆಲ್ಲುತ್ತಾರೆ. ನಾಯಕ ಅರು ಇನ್ನಷ್ಟು ದೂರ ಸಾಗಬೇಕಿದೆ. ಮಿಕ್ಕಂತೆ ದೇವರಾಜ್‌, ಸುಧಾರಾಣಿ, ಸುಂದರ್‌, “ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ್‌ ಎಲ್ಲರೂ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಛಾಯಾಗ್ರಹಣದ ವಿಷಯದಲ್ಲಿ ಹೆಚ್ಚೇನು ಹೇಳುವಂತಿಲ್ಲ. ಶ್ರೀಧರ್‌ ಸಂಭ್ರಮ್‌ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಖುಷಿಕೊಡುತ್ತವೆ.

ಚಿತ್ರ: 3 ಗಂಟೆ 30 ದಿನ 30 ಸೆಕೆಂಡು
ನಿರ್ದೇಶನ: ಮಧುಸೂಧನ್‌
ನಿರ್ಮಾಣ: ಚಂದ್ರಶೇಖರ್‌ ಪದ್ಮಶಾಲಿ
ತಾರಾಗಣ: ಅರು, ಕಾವ್ಯಾ ಶೆಟ್ಟಿ, ದೇವರಾಜ್‌, ಸುಧಾರಾಣಿ, ಸುಂದರ್‌, “ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next