Advertisement

Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ

10:45 PM Jan 05, 2025 | Team Udayavani |

ವಿಟ್ಲ: ಕೊಳ್ನಾಡು ನಾರ್ಶ ಸುಲೈಮಾನ್‌ ಹಾಜಿ ಅವರ ಮನೆಗೆ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು 30 ಲಕ್ಷ ರೂ. ದೋಚಿದ ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿಟ್ಲ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗರಾಜ್‌ ಎಚ್‌.ಇ., ವಿಟ್ಲ ಎಸ್‌ಐ ಕೌಶಿಕ್‌, ಪುಂಜಾಲಕಟ್ಟೆ ಎಸ್‌ಐ ನಂದ ಕುಮಾರ್‌ ಮತ್ತು ಬಂಟ್ವಾಳ ಗ್ರಾಮಾಂತರ ಎಸ್‌ಐ ಹರೀಶ್‌ ಎಂ.ಆರ್‌. ನೇತೃತ್ವದ ತಂಡಗಳಿಂದ ತನಿಖೆ ನಡೆಯುತ್ತಿದೆ. ಜಿಲ್ಲಾ ಅಪರಾಧ ಪತ್ತೆದಳದ ಕರ್ತವ್ಯ ಸಿಬಂದಿಯೂ ಈ ತಂಡದಲ್ಲಿದ್ದಾರೆ.

Advertisement

ಮಾತನಾಡಿದ ಭಾಷೆ ಯಾವುದು?
ಮನೆಗೆ ಪ್ರವೇಶಿಸುತ್ತಿದ್ದಂತೆ ಆರೋಪಿಗಳು ಇಂಗ್ಲಿಷ್‌ ಮತ್ತು ಬೇರೊಂದು ಭಾಷೆಯಲ್ಲಿ ಮಾತ ನಾಡಿಸಿದ್ದರು. ಆದರೆ ತನಗೆ ಅರ್ಥ ಆಗುತ್ತಿಲ್ಲ ಎಂದಾಗ ಎರ್ಟಿಗಾ ವಾಹನ ಚಾಲಕ ಕನ್ನಡದಲ್ಲಿ ಮಾತನಾಡಿ, ಅವರು ತಮಿಳ್ನಾಡಿನಿಂದ ಬಂದಿದ್ದಾರೆ. ವಿವರ ನಾನು ಕೊಡುತ್ತೇನೆ ಎಂದಿದ್ದನಂತೆ! ಆರೋಪಿಗಳು ಯಾವುದೇ ಸಂಶಯಕ್ಕೆ ಆಸ್ಪದ ಇಲ್ಲದಂತೆ ಕಾರ್ಯಾಚರಿಸಿ ಹಣ ದೋಚಿದ್ದರು ಎನ್ನಲಾಗಿದೆ.

ಯಾವ ಮಾರ್ಗದಲ್ಲಿ ತೆರಳಿರಬಹುದು ?
ಆರೋಪಿಗಳು ಯಾವ ಮಾರ್ಗದಲ್ಲಿ ತೆರಳಿರಬಹುದು ಎಂಬ ಬಗ್ಗೆ ತಿಳಿದು ಬಂದಿಲ್ಲ. ಸುಲೈಮಾನ್‌ ಮನೆಯಿಂದ ಹೊರಬಂದ ಬಳಿಕ ಅನೇಕ ಕವಲೊಡೆಯುವ ಮಾರ್ಗಗಳಿದ್ದು, ಗೊಂದಲ ಮೂಡಿಸುತ್ತಿವೆ. ಆದ್ದರಿಂದ ಈ ತಂಡದಲ್ಲಿ ಸ್ಥಳೀಯರು ಇರಬ ಹುದು ಎಂಬ ಶಂಕೆ ಬಲವಾಗಿದೆ.

ಆರೋಪಿಗಳು ಸುಲೈಮಾನ್‌ ಅವರ ಮೂರ್‍ನಾಲ್ಕು ದಿನಗಳ ಚಲನವಲನಗಳ ಮಾಹಿತಿ ಸಂಗ್ರಹ ನಡೆಸಿದೆ ಎಂದು ಹೇಳಲಾಗುತ್ತಿದೆ. ಬೀಡಿ ಕಂಪೆನಿಗೆ ಬಂದು ಹೋಗುವ ಸರಿಯಾದ ಮಾಹಿತಿ ಇದ್ದವರಿಂದಲೇ ಸಂಪೂರ್ಣ ಮಾಹಿತಿ ದರೋಡೆಕೋರರಿಗೆ ಲಭಿಸಿದೆ ಎನ್ನಲಾಗುತ್ತಿದೆ.

ಕಾರು ಮಂಗಳೂರಿನತ್ತ ಪ್ರಯಾಣ?
ಕೃತ್ಯಕ್ಕೆ ಬಳಸಿದ್ದ ಮಾರುತಿ ಎರ್ಟಿಗಾ ಕಾರು ಕುಡ್ತಮುಗೇರು, ಕೋಡಪದವು, ಬೋಳಂತೂರು, ಸುರಿಬೈಲು ಆಸುಪಾಸಿನಲ್ಲಿ ಇತ್ತು ಎನ್ನಲಾಗಿದೆ. ನಾರ್ಶದಿಂದ ಕಲ್ಲಡ್ಕ ಮೂಲಕ ಮಂಗಳೂರಿಗೆ ಕಾರು ಸಾಗಿದೆ ಎಂದು ಹೇಳಲಾಗುತ್ತಿದ್ದು, ತುಂಬೆಯ ಟೋಲ್‌ಗೇಟ್‌ನಲ್ಲಿ ಕಾರಿನ ಸುಳಿವು ಲಭಿಸಿದೆ ಎಂದು ಹೇಳಲಾಗುತ್ತಿದೆ.
ಎಸ್‌ಪಿ ಯತೀಶ್‌ ಎನ್‌. ನೇತೃತ್ವ ದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಕಳೆದ 24 ಗಂಟೆಗಳಲ್ಲಿ ಆದ ಪ್ರಗತಿ ಬಗ್ಗೆ ಚರ್ಚಿಸಲಾಗಿದೆ.

Advertisement

ದಾಖಲೆಗಿಂತ ತನಿಖೆ ಮುಖ್ಯ: ಎಸ್‌ಪಿ
30 ಲ.ರೂ.ಗಳನ್ನು ದೋಚಿರುವ ಬಗ್ಗೆ ಸುಲೈಮಾನ್‌ ಅವರ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ. ಬೇರೆ ಹಣ ದೋಚಿರುವುದನ್ನು ತಿಳಿಸಿಲ್ಲ. ದೋಚಿರುವ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಕೇಳಿಲ್ಲ. ನಾವು ಸದ್ಯ ಆರೋಪಿಗಳು, ಹಣದ ಪತ್ತೆಯ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಎಸ್‌ಪಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಇತರ ಉದ್ಯಮಿಗಳಲ್ಲೂ ಮೂಡಿದ ಆತಂಕ
ಬಂಟ್ವಾಳ: ನಾರ್ಶದ ಉದ್ಯಮಿಯ ಮನೆಯಿಂದ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಹಣ ದೋಚಿದ ಪ್ರಕರಣವು ಇತರ ಉದ್ಯಮಿಗಳಲ್ಲೂ ಆತಂಕ ಮೂಡಿಸಿದೆ. ನೈಜ ಅಧಿಕಾರಿಗಳು ಹಾಗೂ ವಂಚಕರನ್ನು ಪತ್ತೆ ಹಚ್ಚುವುದು ಹೇಗೆ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.

ಇನ್ನೊಂದೆಡೆ ಉದ್ಯಮಿಯ ಮನೆಯಲ್ಲಿ ಅಷ್ಟೊಂದು ಮೊತ್ತದ ಹಣವಿರುವ ಕುರಿತು ದರೋಡೆಕೋರರಿಗೆ ಮಾಹಿತಿ ನೀಡಿದವರು ಯಾರು? ಆರೋಪಿಗಳು ದೂರದೂರಿಗೆ ಪರಾರಿಯಾಗಿರಬಹುದೇ ಅಥವಾ ಸ್ಥಳೀಯವಾಗಿಯೇ ಇರುವ ಸಾಧ್ಯತೆ ಇದೆಯೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next