ಬೀದರ್ :ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಗೆ ಸಂಬಂಧಿಸಿದಂತೆ ಮೊದಲ ದಿನ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳ ತಂಡ, ಶುಕ್ರವಾರ ಸತತ ಎರಡು ಗಂಟೆಗಳ ಕಾಲ ಸಚಿನ್ ಕುಟುಂಬದ ಸದಸ್ಯರ ವಿಚಾರಣೆ ನಡೆಸಿದೆ.
ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ನೇತೃತ್ವದ ತಂಡ ಸಾಯಂಕಾಲ 5.45 ಕ್ಕೆ ಸಚಿನ್ ಸ್ವಗ್ರಾಮ ಭಾಲ್ಕಿಯ ಕಟ್ಡಿತೂಗಾಂವ ಮನೆಗೆ ಆಗಮಿಸಿ, ರಾತ್ರಿ 7.55ರವರೆಗೆ ವಿಚಾರಣೆ ನಡೆಸಿ ಮನೆಯಿಂದ ಹೊರ ಬಂದಿದೆ.
ಸಚಿನ ಮನೆಯ ಬಾಗಿಲು ಬಂದ್ ಮಾಡಿ ಆತ್ಮಹತ್ಯೆ ಕುರಿತು ಮಾಹಿತಿ ಕಲೆಹಾಕಿರುವ ಅಧಿಕಾರಿಗಳು, ಶನಿವಾರವೂ ಕುಟಂಬಸ್ಥರ ವಿಚಾರಣೆ ಮುಂದುವರೆಸಲಿದೆ.
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಸಚಿನ್ ಸಹೋದರಿ ಸುರೇಖಾ, ಸಿಐಡಿ ಅಧಿಕಾರಿಗಳು ಆತ್ಮಹತ್ಯೆ ಸಂಬಂಧ ಎಲ್ಲಾ ಹೇಳಿಕೆ ಪಡೆದುಕೊಂಡಿದ್ದು, ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ನಿಮಗೆ ನ್ಯಾಯ ಕೊಡಿಸುತ್ತೇವೆ, ನಂಬಿ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಪ್ರಕರಣದಲ್ಲಿನ ಎಲ್ಲಾ ಆರೋಪಿಗಳು ಹೊರಗಡೆ ಇದ್ದು, ಸಿಐಡಿ ಅಧಿಕಾರಿಗಳು ತನಿಖೆಯ ಬಳಿಕ ಕ್ರಮದ ಭರವಸೆ ನೀಡಿದ್ದಾರೆ. ನೋಡಬೇಕು ಯಾವ ತರಹದ ನ್ಯಾಯ ಕೊಡಿಸುತ್ತಾರೆ. ಈ ಸರ್ಕಾರ ಹಾಗೂ ಕಾನೂನಿನ ಮೇಲೆ ನಮಗೆ ನಂಬಿಕೆಯೇ ಇಲ್ಲದಂತ್ತಾಗಿದೆ. ಸರ್ಕಾರ ಮತ್ತು ಪೊಲೀಸರ ನಡೆ ಯಿಂದ ಬೇಸರವಾಗಿದೆ. ನಮಗೆ ನ್ಯಾಯ ಸಿಗದಿದ್ದರೆ, ಸಿಬಿಐ ತನಿಖೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದ ಸುರೇಖಾ, ನಮಗಾಗಿ ಹೋರಾಟ ಮಾಡುವ ಬಿಜೆಪಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.