ಕಾಪು: ವಿಕಲ ಚೇತನರು ಸಮಾಜದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತಾಗಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಅಂಗವಿಕಲರಿಗೆ ಸರಕಾರದಿಂದ ನೀಡಲಾಗುವ 33 ತರದ ವಿವಿಧ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಯತ್ನಿಸಲಾಗುತ್ತಿದೆ. ಇಲಾಖೆಯೊಂದಿಗೆ ಕೈಜೋಡಿಸಿ, ಅರ್ಹ ಫಲಾನುಭವಿಗಳಿಗೆ ಇದರ ಸದುಪಯೋಗವಾಗುವ ನಿಟ್ಟಿನಲ್ಲಿ ಗ್ರಾಮಸ್ಥರ ನೆರವು ಅತೀ ಅಗತ್ಯವಾಗಿದೆ ಎಂದು ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರ (ಡಿ.ಡಿ.ಆರ್.ಸಿ.), ಬೆಳಪು ಗ್ರಾಮ ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಬೆಳಪು ಗ್ರಾ. ಪಂ. ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ವಿಕಲ ಚೇತನರ ಸೌಲಭ್ಯಗಳ ಬಗ್ಗೆ ಅರಿವಿನ ಸಿಂಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗವಿಕಲರ ಶ್ರೇಯಸ್ಸನ್ನು ಬಯಸಿ ಅರಿವಿನ ಸಿಂಚನ ನೀಡುವ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಆ ಮೂಲಕ ವಿಕಲ ಚೇತನರಿಗೆ ಸ್ವ ಸಾಮರ್ಥ್ಯದ ಅರಿವು ಮೂಡಿಸಿ, ಅವರನ್ನು ಸಮಾಜಮುಖೀಯಾಗಿ ಬೆಳೆಸುವ ಪ್ರಯತ್ನ ನಡೆಸಲಾಗುತ್ತಿದೆ. ಪಂಚಾಯತ್‌ರಾಜ್ ಇಲಾಖೆ, ಸರಕಾರದ ಸವಲತ್ತುಗಳ ಸದುಪಯೋಗವಾಗಬೇಕಿದೆ ಎಂದರು.
ಉಡುಪಿ ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಅಧಿಕಾರಿ ಸುಧೀಂದ್ರ ಮಾತನಾಡಿ, ಪೋಷಣಾ ಭತ್ಯೆ, ಮಾಸಾಶನ, ವಿದ್ಯಾಥಿವೇತನ, ಪ್ರತಿಭಾ ಪೊÅàತ್ಸಾಹ, ಶುಲ್ಕ ಮರುಪಾವತಿ, ಟಾಕಿಂಗ್ ಲ್ಯಾಪ್ ಟಾಪ್, ವಿಶೇಷ ಶಾಲೆಗಳು, ಸಾಧನೆ ಸಲಕರಣೆಗಳು ಸಹಿತ ಮತ್ತಿತರ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ಅಂಗವಿಕಲರ ಪುನರ್ವಸತಿ ಕೇಂದ್ರ ಉಡುಪಿ ತಾಲೂಕು ಸಂಯೋಜಕ ಮಧುಸೂದನ್ ರಾವ್, ಗ್ರಾ. ಪಂ. ಸದಸ್ಯ ಶರತ್ ಕುಮಾರ್, ಸಮಾಜ ಸೇವಕ ಲೀಲಾಧರ ಶೆಟ್ಟಿ ಕಾಪು ಉಪಸ್ಥಿತರಿದ್ದರು.ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಮೇಶ್ ಎಚ್. ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರವಿ ಕುಮಾರ್ ವಂದಿಸಿದರು.