ಐದು ದಶಕಗಳ ಹಿಂದಿನ ಮಾತು. ಆಗ ತಾನೇ ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುತ್ತಿದ್ದ ಸಾಯರಾಬಾನು ಅವರಿಗೆ ಮನಸ್ಸು ರೆಕ್ಕೆ ಮೂಡಿಬಂದ ಚಿಟ್ಟೆಯ ಹಾಗಿತ್ತು. ಅದ್ಯಾಕೋ ಏನೋ ಪ್ರೇಮಗೀತೆಗಳು, ಪ್ರೇಮ ಕಥೆಗಳು ಇಷ್ಟವಾಗ ತೊಡಗಿದ್ದವು. ಅದೊಂದು ಸಿನಿಮಾದಲ್ಲಿ ಮೂಡಿಬಂದ “ಜೀ ಚಾಹ್ತಾ ಹೇ… ತುಮ್ಹಾರೇ ಆಂಖೋ ಮೇರೆ ತಸ್ವೀರ್ ದೇಖ್ತೆ ದೇಖ್ತೆ… ಐಸೇ ಹೀ ಮರ್‌ಜಾವೂಂ…’ ಎಂಬ ಪ್ರೇಮಿಯೊಬ್ಬ ಆಡುವ ಮಾತುಗಳು ಮನಸ್ಸಿಗೆ ಹಿತವೆನಿಸುತ್ತಿದ್ದವು. “ತನಗೂ ಯಾರೋ ಒಬ್ಬ ರಾಜಕುಮಾರ ಬಂದು ಹೀಗೇ ಹೇಳಬಾರದೆ’ ಎಂದು ಆಕೆಯ ಮನ ಚಡಪಡಿಸುತ್ತಿತ್ತು.
1960ರ ದಶಕ. ಆ ವರ್ಷ ತೆರೆಕಂಡಿದ್ದ “ಮೊಘಲ್ ಎ ಆಝಂ’ ಸಿನಿಮಾ, ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದರ ವಿಶೇಷ ಪ್ರದರ್ಶನವನ್ನು ಮುಂಬಯಿಯ ಖ್ಯಾತ ಥಿಯೇಟರ್, ಮರಾಠಾ ಮಂದಿರ್‌ನಲ್ಲಿ ಏರ್ಪಡಿಸಲಾಗಿತ್ತು. ಅಂದು ಮುಖ್ಯ ಅತಿಥಿಯಾಗಿ ದಿಲೀಪ್ ಕುಮಾರ್ ಬರುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಅದು ಕಿವಿಗೆ ಬೀಳುತ್ತಲೇ ಸಾಯರಾ ಬಾನು, ಮನೆಯಲ್ಲಿ ಹಠ ಮಾಡಿ ಆ ವಿಶೇಷ ಪ್ರದರ್ಶನಕ್ಕೆ ಹೋಗಲೇ ಬೇಕು ಎಂದು ಸಂಬಂಧಿಕರೊಂದಿಗೆ ಮರಾಠಾ ಮಂದಿರ್‌ಗೆ ಹೋಗಿದ್ದರು. ಸಿನಿಮಾ ನೋಡಿದರು. ಚಿತ್ರ ಪ್ರದರ್ಶನ ಮುಗಿದ ಅನಂತರ ಅಲ್ಲೇ ಬೆಳ್ಳಿ ಪದರೆಯ ಮುಂದಿನ ಸ್ಟೇಜ್‌ನಲ್ಲೇ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ದುರ ದೃಷ್ಟವಶಾತ್ ಆ ಸಮಾರಂಭಕ್ಕೆ ಬರಬೇಕಿದ್ದ ದಿಲೀಪ್ ಸಾಬ್ ಬರಲೇ ಇಲ್ಲ. ಅವರನ್ನು ನೋಡಲು ಹಾತೊರೆ ಯುತ್ತಿದ್ದ ಸಾಯರಾ ಅವರ ಕಣ್ಣುಗಳು ನಿಸ್ತೇಜ ಗೊಂಡು ಮನೆ ಕಡೆ ಹೊರಳಿದ್ದವು.
ಸ್ನೇಹಿತೆಯರು, ಆಪ್ತ ಸಂಬಂಧಿಕರು, ಮರೆತುಬಿಡೇ ಆತನನ್ನು.. ಆತನೆಲ್ಲಿ.. ನೀನೆಲ್ಲಿ ಎಂದು ಹೇಳಲು ಶುರು ಮಾಡಿದ್ದರು. ನಿನಗೇನು ದಿಲೀಪನ ದೆವ್ವ ಮೆಟ್ಟಿಕೊಂಡಿದೆಯೇ ಎಂದು ಸಿಟ್ಟಾಗಿದ್ದರು! ಆದರೆ, ಆಕೆಯ ಮನಸ್ಸು ಮಾತ್ರ.. “ಪ್ಯಾರ್ ಕಿಯಾ ಕೋಯಿ ಚೋರಿ ನಹೀ ಕೀ…’ ಅಂತ ಗುನುಗುನಿಸುತ್ತಿತ್ತು!
ಹೀಗೆ, ದಿಲೀಪ್ ಕುಮಾರ್ ಹೊತ್ತ ಮನಸ್ಸು ಭಾವುಕತೆ ಹಾಗೂ ನಿರಾಸೆಗಳ ನಡುವೆ ತೂಗುಯ್ನಾಲೆ ಆಡುತ್ತಿರುವಾಗಲೇ ಸಾಯರಾ, ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಶಪಥ ಮಾಡಿದರು. ಅವರ ಪ್ರಯತ್ನಕ್ಕೆ ಆಕೆಗಿದ್ದ ಗ್ಲಾಮರ್, ಶಾಲೆಯಲ್ಲಿ ಪಾರ್ಟು ಮಾಡಿದ್ದ ಕೆಲವು ನಾಟಕಗಳು ಹಾಗೂ ಕಥಕ್-ಭರತನಾಟ್ಯದ ಅನುಭವ ಅವರನ್ನು 1960ರಲ್ಲಿ ತೆರೆಕಂಡ ಜಂಗ್ಲೀ ಚಿತ್ರದಲ್ಲಿ ಶಮ್ಮಿ ಕಪೂರ್ ಜೊತೆಗೆ ನಾಯಕಿಯಾಗಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಟ್ಟಿತು!
ಆಗಾಗ, ಸಿನೆಮಾ ಸಮಾರಂಭಗಳಲ್ಲಿ ಇವರಿಬ್ಬರೂ ಪರಸ್ಪರ ಮುಖಾಮುಖೀಯಾಗುತ್ತಿದ್ದಾಗ, ಅದೊಂದು ದಿನ ಇವರ ಕಡೆ ಮುಗುಳ್ನಕ್ಕ ದಿಲೀಪ್ ಕುಮಾರ್, ಒಂದೆರಡು ಸೆಕೆಂಡ್ ನಿಂತು, ನೀವು ತುಂಬಾ ಸುಂದರವಾಗಿದ್ದೀರಿ… ನಿಮ್ಮ ಅಭಿನಯ ಕೂಡ ನಿಮ್ಮಂತೆಯೇ ಸುಂದರವಾಗಿದೆ ಎಂದು ಹೊಗಳಿದ್ದರು. ಅಲ್ಲಿಂದ ಮುಂದಕ್ಕೆ ಹೋಗುವಾಗ, ಕೈ ಕುಲುಕಿ, ಒಳ್ಳೆಯದಾಗಲಿ ಶುಭ ಹಾರೈಸಿ ಮುನ್ನಡೆದಿದ್ದರು. ಆ ಘಟನೆ, ಸಾಯರಾ ಬಾನುವಿಗೆ ಮಾತ್ರವಲ್ಲ, ದಿಲೀಪ್‌ರಲ್ಲೂ ಹೊಸ ಭಾವನೆ ಹುಟ್ಟಿಹಾಕಿತು. ಅದನ್ನು ತಮ್ಮ ಸಂದರ್ಶನವೊಂದರಲ್ಲಿ ಜ್ಞಾಪಿಸಿಕೊಂಡಿದ್ದ ಸಾಯರಾ, ದಿಲೀಪ್‌ರವರಿಗೆ ಆಗಿನಿಂದಲೇ ನನ್ನ ಬಗ್ಗೆ ಪ್ರೀತಿ ಹುಟ್ಟಿತ್ತೆಂದು ಅನಿಸುತ್ತದೆ. ಈ ಭೇಟಿಯ ಅನಂತರ ಆಪ್ತವಾದ ನಾವು 1966ರಲ್ಲಿ ಮದುವೆಯಾದೆವು ಎಂದು ಹೇಳುತ್ತಾರೆ.
– ಚೇತನ್ ಒ. ಆರ್.