ಈ ವಾರ ಬಿಡುಗಡೆಯಾದ “ಮಿಸ್ಟರ್ ಪರ್ಫೆಕ್ಟ್’ ಯಾವ ಜಾನರ್ ಸಿನಿಮಾ ಅಂತ ಹೇಳುವುದು ತುಸು ಕಷ್ಟ. ಇದನ್ನು ಲವ್‌ಸ್ಟೋರಿ ಅನ್ನಬೇಕಾ, ಹಾರರ್ ಸಿನಿಮಾ ಅಂದುಕೊಳ್ಳಬೇಕಾ ಎಂಬ ಪ್ರಶ್ನೆ, ಅದು ಪ್ರಶ್ನೆಯಾಗಿಯೇ ಉಳಿಯುತ್ತೆ. ಆ ಪ್ರಶ್ನೆ ಪಕ್ಕಕ್ಕಿಟ್ಟು ನೋಡುವುದಾದರೆ, ಇಲ್ಲಿ ಕಾಣ ಸಿಗುವ ಲವ್‌ಸ್ಟೋರಿಗಿಂತ, ಹಾರರ್ ಎಪಿಸೋಡೇ ಒಂದಷ್ಟು ಕಿರಿಕಿರಿಯೆನಿಸಿದರೂ, ಹಾಗೊಮ್ಮೆ ನೋಡಿಸಿಕೊಂಡು ಹೋಗುತ್ತೆ. ಹಾಗಾಗಿ ಇದನ್ನು ಒಂದರ್ಥದಲ್ಲಿ “ಸೆಮಿ ಹಾರರ್’ ಚಿತ್ರ ಎನ್ನಬಹುದೇನೋ?
ಸಾಮಾನ್ಯವಾಗಿ ಹಾರರ್ ಚಿತ್ರಗಳಲ್ಲಿ ಆರಂಭದಲ್ಲೇ ಭಯ ಶುರುವಾಗುತ್ತಾ ಹೋಗುತ್ತೆ. ಆದರೆ, ಈ ಚಿತ್ರದಲ್ಲಿ ಮಧ್ಯಂತರಕ್ಕೆ ಮುನ್ನ ಒಂಚೂರು ಭಯ ಪಡಿಸುತ್ತಾ ಹೋಗುತ್ತಾರೆ ನಿರ್ದೇಶಕರು. ಹಾಗಂತ, ಇಡೀ ಚಿತ್ರ ಅಂಥದ್ದೇ ಫೀಲ್ ಕಟ್ಟಿಕೊಡುತ್ತೆ ಅನ್ನುವುದು ಸುಳ್ಳು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ತೆರೆಯ ಮೇಲೆ ಕಾಣುವ ದೆವ್ವದ ಕಣ್ಣಾಮುಚ್ಚಾಲೆ ಆಟ ಆ ಕ್ಷಣಕ್ಕಷ್ಟೇ ಭಯ ಹುಟ್ಟಿಸುತ್ತದೆ ಹೊರತು, ಆಮೇಲೆ ಅದೊಂದು ಕಾಮಿಡಿ ದೆವ್ವವಾಗಿ ನಗಿಸುತ್ತಾ ಹೋಗುತ್ತೆ. ಇಲ್ಲಿ ದೆವ್ವ ನಗಿಸುವುದಷ್ಟೇ ಅಲ್ಲ, ಒಂಚೂರು ಹೆದರಿಸುತ್ತೆ, ಒಂದಷ್ಟು ಹೆದರುತ್ತೆ ಅಷ್ಟೇ ಅಲ್ಲ,
ರಾತ್ರಿ ಪಾಳಿಯ ವಾಚ್‌ಮೆನ್ ಕೆಲಸ ಮಾಡುತ್ತೆ, ಮೊಬೈಲ್‌ನಲ್ಲಿ ಮಾತಾಡುತ್ತೆ, ನವ ಜೋಡಿಗೆ ಫೋನ್ ಮಾಡಿ ಶುಭಾಶಯವನ್ನೂ ಹೇಳುತ್ತೆ … ಅದೆಲ್ಲವನ್ನೂ ತೋರಿಸಿರುವ “ಪರಿ’ ಒಂದಷ್ಟು ಕಿರಿಕಿರಿ ಅನ್ನೋದು ಬಿಟ್ಟರೆ ಉಳಿದದ್ದೆಲ್ಲವೂ “ಪರ್ಫೆಕ್ಟ್’ ಎನ್ನಬಹುದು. ಕಥೆ ಸಿಂಪಲ್ ಆಗಿದೆ. ನಿರೂಪಣೆಯಲ್ಲಿ ವೇಗದ ಕೊರತೆ ಇದೆ. ಕೆಲವು ಕಡೆ ಅಲ್ಲಲ್ಲಿ ಲೋಪ-ದೋಷಗಳಿವೆ. ಅದನ್ನು ಸರಿಪಡಿಸಿಕೊಂಡಿದ್ದರೆ ಪರ್ಫೆಕ್ಟ್ ಮಾತಿಗೆ ನಿಜವಾದ ಅರ್ಥ ಸಿಗುತ್ತಿತ್ತು. ಕಥೆಗೊಂದು ವೇಗ ಸಿಕ್ಕೇ ಬಿಟ್ಟಿತು ಅಂದುಕೊಳ್ಳುತ್ತಿದ್ದಂತೆಯೇ, ಇದ್ದಕ್ಕಿದ್ದಂತೆ ಹಾಡುಗಳು ಕಾಣಿಸಿಕೊಂಡು ನೋಡುಗನ ತಾಳ್ಮೆ ಪರೀಕ್ಷಿಸುತ್ತವೆ.
ಆರಂಭದಿಂದ ಸುಮ್ಮನೆ ನೋಡಿಸಿಕೊಂಡು ಹೋಗುವ ಕಥೆ, ಇನ್ನೆಲ್ಲೋ ಹರಿದಂತೆ ಭಾಸವಾದರೂ, ಅದು ಪುನಃ ಟ್ರ್ಯಾಕ್‌ಗೆ ಬಂದಾಗಲಷ್ಟೇ, ಕಥೆಯೊಳಗಿನ ಸಾರ ಗೊತ್ತಾಗೋದು. ಅಲ್ಲೊಂದಷ್ಟು ಏರಿಳಿತಗಳು, ತಿರುವುಗಳು ಕಾಣಿಸಿಕೊಂಡು ತಕ್ಕಮಟ್ಟಿಗೆ ಕುತೂಹಲ ಕೆರಳಿಸುತ್ತವೆ. ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ, ಚಿತ್ರ ನೋಡಲು ಅಡ್ಡಿಯಿಲ್ಲ. ನಾಯಕ ಅನೂಪ್‌ಗೆ ನಿದ್ದೆಯಲ್ಲಿ ನಡೆಯೋ ಖಾಯಿಲೆ. ಒಂದು ರಾತ್ರಿ ಟಿಪ್‌ಟಾಪ್ ಡ್ರೆಸ್ ಮಾಡಿಕೊಂಡು ನಿದ್ದೆಯಲ್ಲೇ ನಡೆಯುವಾಗ, ಅದೇ ಹೊತ್ತಲ್ಲಿ ನಾಯಕಿ ಶಿರೀಷಾ ಕಿಡಿಗೇಡಿಗಳ ಕೈಗೆ ಸಿಕ್ಕು ಅಪಾಯದಲ್ಲಿರುತ್ತಾಳೆ.
ಅದೇ ಹಾದಿಯಲ್ಲಿ ನಡೆದು ಬರುವ ಅನೂಪ್ ಅವಳನ್ನು ಕಾಪಾಡುತ್ತಾನೆ. ಅಲ್ಲಿಂದ ಇಬ್ಬರ ಲವ್ ಟ್ರಾಕ್ ಶುರುವಾಗುತ್ತೆ. ಆಕೆಯ ಅಪ್ಪ ಆಯುರ್ವೇದ ಪಂಡಿತ. ತನ್ನ ಮಗಳ ಮದುವೆ ಆಗುವ ಹುಡುಗನ ಆರೋಗ್ಯ ಚೆನ್ನಾಗಿರಬೇಕು, ಯಾವುದರಲ್ಲೂ ಮಿಸ್ಟೇಕ್ ಇರಬಾರದು ಎಂಬ ಪಾಲಿಸಿ ಅವನದು. ತನ್ನ ಹುಡುಗಿಯ ಅಪ್ಪನನ್ನೇ ಮರಳು ಮಾಡುವ ನಾಯಕ, ಪ್ರೀತಿಸಿದವಳನ್ನು ಇನ್ನೇನು ಕೈ ಹಿಡಿಯುತ್ತಾನೆ ಅಂದುಕೊಳ್ಳುತ್ತಿದ್ದಂತೆ, ಅಲ್ಲೊಂದು ದೆವ್ವದ ಟ್ರಾಕ್ ಶುರುವಾಗುತ್ತೆ. ಆಮೇಲೆ ಏನೆಲ್ಲಾ ಆಗಿ ಹೋಗುತ್ತೆ ಎಂಬುದು ಸಸ್ಪೆನ್ಸ್.
ಅನೂಪ್ ನಿದ್ದೆಯಲ್ಲಿ ನಡೆಯುವುದನ್ನು ಬಹಳ ನೀಟ್ ಆಗಿ ಮಾಡಿದ್ದಾರೆ. ಫೈಟ್, ಡ್ಯಾನ್ಸ್‌ನಲ್ಲಿ ಮಿಂಚುವ ಅವರಿಂದ, ನಿರ್ದೇಶಕರು ಇನ್ನಷ್ಟು ನಟನೆ ತೆಗಿಸಬಹುದಿತ್ತು. ಶಾಲಿನಿ ನಟನೆ ಬಗ್ಗೆ ಹೇಳುವುದೇನೂ ಇಲ್ಲ. ಆದರೆ, ದೆವ್ವವ್ವನ್ನೇ ಭಯಪಡಿಸುತ್ತಾಳೆ ಅನ್ನೋದೇ ಹೆಚ್ಚುಗಾರಿಕೆ. ಜತಗೆ ಡ್ರಾಮಾ ಮೂಲಕ ಮೋಹಿನಿಯಾಗಿ ಭಯಪಡಿಸಿದ್ದಷ್ಟೇ ಹೈಲೈಟ್ ಎನ್ನಬಹುದು.
ರಮೇಶ್‌ಭಟ್, ರಮೇಶ್ ಪಂಡಿತ್, ಪವನ್ ಇವರೆಲ್ಲ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಒಂದರ್ಥದಲ್ಲಿ ಬುಲೆಟ್ ಪ್ರಕಾಶ್ ಇಲ್ಲಿ ಇನ್ನೊಬ್ಬ ಹೀರೋ ಅನ್ನಬಹುದು. ಯಾಕೆ ಅನ್ನುವುದಕ್ಕೆ ಸಿನಿಮಾ ನೋಡಬೇಕಷ್ಟೆ. ಸತೀಶ್ ಬಾಬು ಸಂಗೀತದ ಒಂದು ಹಾಡು ಓಕೆ. ಆದರೆ, ಹಾರರ್ ಎಪಿಸೋಡ್‌ಗೆ ಕೇಳುವ ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಕಟ್ಟಬೇಕಿತ್ತು. ಪ್ರಭಾಕರ್ ರೆಡ್ಡಿ ಕ್ಯಾಮೆರಾ ಕೈ ಚಳಕದಲ್ಲಿ ಹಾರರ್ ಎಪಿಸೋಡ್‌ನ ಕರಾಳ ರಾತ್ರಿಯ ಲೈಟಂಗ್ಸ್ ಖುಷಿ ಕೊಡುತ್ತದೆ.
ಚಿತ್ರ: ಮಿ.ಪರ್ಫೆಕ್ಟ್
ನಿರ್ಮಾಣ: ಆವುಲ ಸುಬ್ಬರಾಯುಡು
ನಿರ್ದೇಶನ: ಎ.ರಮೇಶ್ ಬಾಬು
ತಾರಾಗಣ: ಅನೂಪ್ ಸಾರಾ ಗೋವಿಂದು, ಶಾಲಿನಿ, ರಮೇಶ್ ಭಟ್, ರಮೇಶ್ ಪಂಡಿತ್, ಬುಲೆಟ್ ಪ್ರಕಾಶ್, ಪವನ್ ಮುಂತಾದವರು
* ವಿಜಯ್ ಭರಮಸಾಗರ