Advertisement

ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ: ಸಚಿವ ಅಶ್ವತ್ಥನಾರಾಯಣ

04:01 PM May 23, 2022 | Team Udayavani |

ಲಂಡನ್/ಬೆಂಗಳೂರು: ಕರ್ನಾಟಕ ಸರಕಾರವು ಸದ್ಯದಲ್ಲೇ ‘ಡಿಸೈನ್ ನೀತಿ’ಯನ್ನು ಜಾರಿಗೆ ತರಲಿದ್ದು, ಈ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಬಿಟಿಎಸ್) ಜತೆಯಲ್ಲೇ ಬೃಹತ್ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ ಅನ್ನು ಕೂಡ ಆಯೋಜಿಸಲಿದೆ. ಅಲ್ಲದೆ, ಡಿಸೈನ್ ಕುರಿತ ಚಿಂತನೆ ಮತ್ತು ಜಾಗೃತಿಯನ್ನು ಶಾಲಾಕಾಲೇಜುಗಳ ಪಠ್ಯಕ್ರಮದಲ್ಲೇ ಅಳವಡಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ತಮ್ಮನ್ನು ಇಲ್ಲಿ ಭೇಟಿಯಾದ ವರ್ಲ್ಡ್ ಡಿಸೈನ್ ಕೌನ್ಸಿಲ್ (ಡಬ್ಲ್ಯುಡಿಸಿ), ವರ್ಲ್ಡ್ ಡಿಸೈನ್ ಆರ್ಗನೈಸೇಶನ್ (ಡಬ್ಲ್ಯುಡಿಓ) ಮತ್ತು ಯುನೈಟೆಡ್ ಕಿಂಗ್ಡಂ ಡಿಸೈನ್ ಕೌನ್ಸಿಲ್ ನ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಈ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಸಚಿವರು, ‘ಭಾರತದ ಕೇಂದ್ರ ಸರಕಾರವು ಈಗಾಗಲೇ ರಾಷ್ಟ್ರೀಯ ಡಿಸೈನ್ ನೀತಿಯನ್ನು ಹೊಂದಿದ್ದು, ರಾಜ್ಯವು ಅದರಲ್ಲಿನ ಉಪಯುಕ್ತ ಅಂಶಗಳನ್ನು ತನ್ನ ನೀತಿಯಲ್ಲೂ ಅಳವಡಿಸಿಕೊಳ್ಳಲಿದೆ. ಜತೆಗೆ, ಡಬ್ಲ್ಯುಡಿಸಿ ಯಿಂದಲೂ ಸಲಹೆಗಳನ್ನು ಪಡೆದುಕೊಂಡು, ಸಮಗ್ರ ನೀತಿಯನ್ನು ರೂಪಿಸಲಾಗುವುದು’ ಎಂದಿದ್ದಾರೆ.

ವಿಚಾರ ವಿನಿಮಯದ ವೇಳೆಯಲ್ಲಿ ನಿಯೋಗವು, ‘ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್’ ಅನ್ನು (ಬಿಡಿಡಿ) ಸ್ಥಾಪಿಸಲು ಅಗತ್ಯವಿರುವ ಔದ್ಯಮಿಕ ನೆರವನ್ನು ನೀಡುವ ಆಸಕ್ತಿ ವ್ಯಕ್ತಪಡಿಸಿತು. ಜತೆಗೆ, ಇದನ್ನೆಲ್ಲ ಶಾಲಾಕಾಲೇಜುಗಳ ಪಠ್ಯಕ್ರಮದ ಭಾಗವನ್ನಾಗಿ ಮಾಡುವ ಪ್ರಕ್ರಿಯೆಯಲ್ಲೂ ಸಹಾಯ ನೀಡುವ ಭರವಸೆ ನೀಡಿದೆ.

ಇದನ್ನೂ ಓದಿ:ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!

Advertisement

ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪಿಸುವ ನಿಟ್ಟಿನಲ್ಲಿ ತಾನು ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಐಎಸ್ಡಿಸಿ) ಜತೆ ಕೈಗೂಡಿಸುವುದಾಗಿ ಡಬ್ಲ್ಯು ಡಿಸಿ ಪ್ರತಿನಿಧಿಗಳು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಹೆಚ್ಚಿನ ಚರ್ಚೆಗಾಗಿ ಬೆಂಗಳೂರಿಗೆ ಬರುವಂತೆ ನಿಯೋಗದ ಸದಸ್ಯರನ್ನು ಆಹ್ವಾನಿಸಿದರು.

ಅಲ್ಲದೆ, ‘ಸಮಾಜದಲ್ಲಿ ಡಿಸೈನ್ ಬಗ್ಗೆ ಜಾಗೃತಿ ಮೂಡಿಸಿ, ಈ ಜ್ಞಾನಧಾರೆಗೆ ಬೇಡಿಕೆಯನ್ನು ಸೃಷ್ಟಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬಿಡಿಡಿ ಸ್ಥಾಪನೆಯು ನೆರವಾಗಲಿದೆ. ಮೊದಲಿಗೆ, ಪ್ರಾಯೋಗಿಕವಾಗಿ ಆಯ್ದ ಸರಕಾರಿ ಶಾಲೆಗಳಲ್ಲಿ ಡಿಸೈನ್ ಬೋಧನೆಗೆ ಚಾಲನೆ ನೀಡಬಹುದು. ಇದರ ಫಲಿತಾಂಶವನ್ನು ಆಧರಿಸಿ, ನಂತರ ಇದನ್ನು ರಾಜ್ಯಾದ್ಯಂತ ವಿಸ್ತರಿಸಬಹುದು. ರಾಜ್ಯ ಐಟಿ ಇಲಾಖೆಯೇ ನೂತನ ಡಿಸೈನ್ ನೀತಿಯನ್ನು ರೂಪಿಸಲಿದೆ’ ಎಂದು ಅಶ್ವತ್ಥನಾರಾಯಣ ವಿವರಿಸಿದ್ದಾರೆ.

ನಿಯೋಗದಲ್ಲಿದ್ದ ಡಬ್ಲ್ಯುಡಿಸಿ ಮುಖ್ಯಸ್ಥೆ ಪೌಲಾ ಗ್ರಹಾಂ ಗೆಜಾರ್ಡ್ ಮಾತನಾಡಿ, ‘ಕರ್ನಾಟಕದ ಉದ್ದೇಶಿತ ಡಿಸೈನ್ ನೀತಿ ಮತ್ತು ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆಯು ರಾಜ್ಯವನ್ನು ಜಾಗತಿಕ ಡಿಸೈನ್ ವಲಯದಲ್ಲಿ ಪ್ರತಿಷ್ಠಾಪಿಸಲಿದೆ. ಅಲ್ಲದೆ, ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವ ಮೂಲಕ ಸಾವಿರಾರು ಉದ್ಯೋಗಗಳನ್ನೂ ಸೃಷ್ಟಿಸಲಿದೆ’ ಎಂದು ಮನದಟ್ಟು ಮಾಡಿಕೊಟ್ಟರು.

ಈ ವಿಚಾರ ವಿನಿಮಯದಲ್ಲಿ ಡಬ್ಲ್ಯುಡಿಓ ನಿರ್ದೇಶಕರ ಮಂಡಲಿಯ ಸದಸ್ಯ ಪ್ರೊ.ಪ್ರದ್ಯುಮ್ನ ವ್ಯಾಸ್, ಯುಕೆ ಡಿಸೈನ್ ಕೌನ್ಸಿಲ್ ಟ್ರಸ್ಟಿ ಆನ್ ಬೋಡಿಂಗ್ಟನ್, ಐಎಸ್ಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ಡಿಜಿಟಲ್ ವಿಭಾಗದ ನಿರ್ದೇಶಕ ಅರುಣ್ ಬಾಲಚಂದ್ರನ್ ಮತ್ತು ನೂತನ ಉಪಕ್ರಮಗಳ ನಿರ್ದೇಶಕ ಜಾನ್ ಕ್ಸೇವಿಯರ್ ಕೂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next