ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ಎಲ್ಲೇ ಇರಲಿ, ಹೇಗೆ ಇರಲಿ ಕನ್ನಡಿಗರಿಗೆ ಕನ್ನಡವೆಂದರೆ ನಿತ್ಯ ಪುಳಕ. ಪ್ರಪಂಚದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ, ಎಷ್ಟೇ ಭಾಷೆ ಅರಿತಿದ್ದರೂ ನಮಗೆ ಜೀವ ಭಾಷೆ ಕನ್ನಡವೇ.
ಜೀವನದ ಅಗತ್ಯಗಳಿಗಾಗಿ ದೂರದ ಊರಿನಲ್ಲಿ ನೆಲೆಸಿರುವ ನಮ್ಮ ಕನ್ನಡಾಂಬೆಯ ಮಕ್ಕಳಿಗಾಗಿ ಇಲ್ಲಿದೆ ಹೊಸ ಅವಕಾಶ. ದೂರ ತೀರದಲ್ಲಿದ್ದೂ ಕನ್ನಡದ ಪರಿಮಳ ಪಸರಿಸುತ್ತಿರುವ ಕನ್ನಡ ಕರ ಸೇವಕರಿಗೆ ಇದು ಉದಯವಾಣಿಯ ರಾಜ್ಯೋತ್ಸವದ ಕೊಡುಗೆ.
ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ ಪ್ರಪಂಚದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಪತ್ರಿಕೆಗಳಲ್ಲೇ ಮೊದಲೆಂಬಂತೆ ಅಂತರ್ಜಾಲ ತಾಣವನ್ನು ರೂಪಿಸಿತ್ತು. ಅದು ಈಗ ಹೆಮ್ಮರವಾಗಿ ಬೆಳೆದಿರುವ ಸಂತೋಷದೊಂದಿಗೆ ಮತ್ತೊಂದು ಹೊಸ ಪ್ರಯತ್ನ ಇಂದಿನಿಂದ ಆರಂಭವಾಗಿದೆ.
ಕೊಲ್ಲಿ ರಾಷ್ಟ್ರಗಳ ಕನ್ನಡಿಗರಿಗಾಗಿ ವಿಶೇವ ಪುಟವನ್ನು ರೂಪಿಸಿದ್ದ ಉದಯವಾಣಿ ಇದೀಗ ಮುಂದುವರಿದ ಭಾಗವಾಗಿ ‘ವಿಶ್ವ ವಿದ್ಯುನ್ಮಾನ ಆವೃತ್ತಿ’ಯನ್ನು ಪರಿಚಯಿಸುತ್ತಿದ್ದೇವೆ. ದೂರದೂರಿನಲ್ಲಿರುವ ಕನ್ನಡಿಗರಿಗಾಗಿ ‘ದೇಸಿ ಸ್ವರ’ ಇ ಪೇಪರ್ ಸಂಚಿಕೆಯನ್ನು ಹೊರತರುತ್ತಿದ್ದು, ಕನ್ನಡ ಪತ್ರಿಕೋದ್ಯಮದಲ್ಲಿ ಇದು ಮೊದಲ ಪ್ರಯತ್ನ ಎನ್ನುವುದು ನಮಗೆ ಹೆಮ್ಮೆ.
ನಿಮ್ಮ ಲೇಖನ, ಬರಹಗಳು, ನೀವು ತೆಗೆಯುವ ಛಾಯಾಚಿತ್ರಗಳು, ನಿಮ್ಮ ಪೇಂಟಿಂಗ್‌ಗಳು, ನಿಮ್ಮ ಊರಿನಲ್ಲಿ ನಡೆಸುವ ಕಾರ್ಯಕ್ರಮ ವರದಿಗಳಿಂದ ಹಿಡಿದು, ನಿಮ್ಮ ಮಕ್ಕಳ ಪ್ರತಿಭಾ ಪರಿಚಯ-ಎಲ್ಲದಕ್ಕೂ ಈ ದೇಸಿ ಸ್ವರ ವೇದಿಕೆಯಾಗಲಿದೆ.
ಇವೆಲ್ಲವನ್ನು ಕಳುಹಿಸಬಹುದು
∙ ನೀವಿರುವ ಊರಿನ ವಿಶೇಷತೆ, ವಿಶೇಷ ವ್ಯಕ್ತಿಗಳು
∙ ನಿಮ್ಮ ಸುತ್ತಮುತ್ತಲಿನ ಸಾಧಕರು, ಬಾಲಪ್ರತಿಭೆ
∙ ನಿಮಗೆ ಸಿಕ್ಕಿರುವ ಅಪರೂಪದ ಮಿತ್ರರು
∙ ಕನ್ನಡಪರ ಸಂಘಟನೆಗಳು, ವಿಶೇಷ ಕಾರ್ಯಕ್ರಮಗಳು
∙ ನಿಮ್ಮ ಮಕ್ಕಳ ಶೈಕ್ಷಣಿಕ ಸಾಧನೆ, ಅವರ ಇತರ ಹವ್ಯಾಸ (ಛಾಯಾಗ್ರಹಣ, ಪೇಂಟಿಂಗ್, ಕಾರ್ಟೂನ್ ಇತ್ಯಾದಿ)
∙ ನೀವು ನೆಲೆಸಿರುವಲ್ಲಿ ಕಂಡು ಬಂದ ಉತ್ತಮ ಅಂಶಗಳು
∙ ಹುಟ್ಟೂರಿನವರಿಗೆ ನೀವು ತಿಳಿಸಬೇಕಾದ ವಿಶೇಷ ಸಂಗತಿಗಳು
∙ ನೀವು ಆಚರಿಸುವ ಹಬ್ಬಗಳು.
ಇಲ್ಲಿಗೆ ಕಳುಹಿಸಿ
desiswara@udayavani.com
nrk@udayavani.com
ವಾಟ್ಸಪ್ ಸಂಖ್ಯೆ: 7618774529