Advertisement
ಹಲವು ವರ್ಷಗಳ ಹಿಂದಿನ ಕಥೆ. ನಾವಾಗ ಕೆನಡಾಕ್ಕೆ ಹೊಸಬರು. ನಮ್ಮದೋ ಮೂವರು ಚಿಕ್ಕ ಮಕ್ಕಳ ದೊಡ್ಡ ಸಂಸಾರ. ಕೆನಡಾದಲ್ಲಿ ಮನೆ ಬಾಡಿಗೆಗೆ ದೊರಕುವುದು ಅಷ್ಟು ಸುಲಭವಲ್ಲ. ಮನೆಯ ಮಾಲಕರಿಗೆ ಹಲವು ಕಾಗದ ಪತ್ರಗಳನ್ನು ನೀಡಬೇಕು. ಜತೆಗೆ ಕಾನೂನು ಕಟ್ಟಳೆಗಳು ಬೇರೆ. ಹೇಗೋ ಕಷ್ಟ ಪಟ್ಟು ಒಂದು ಮನೆಯನ್ನು ಬಾಡಿಗೆಗೆ ಪಡೆದೆವು. ಬೇಸಮೆಂಟ್ ಎಂದರೆ ನೆಲಮಹಡಿಯಲ್ಲಿನ ಪುಟ್ಟ ಮನೆಯದು. ಕೆನಡಾದಲ್ಲಿ ಪ್ರತಿಯೊಬ್ಬರ ಜೀವನವೂ ಬೇಸಮೆಂಟ್ ನಿಂದಲೇ ಪ್ರಾರಂಭವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
Related Articles
Advertisement
ಯಾರಾದರು ಮನೆ ಖಾಲಿ ಮಾಡಿದರೆ ಸರತಿ ಪ್ರಕಾರ ಬಾಡಿಗೆಗೆ ಲಭ್ಯ. ವರ್ಷವೊಂದು ಆಗಬಹುದು ನಮ್ಮ ಪಾಳಿ ಬರಲು ಎಂದಾಗ ಇಲ್ಲೂ ಸೋತ ಅನುಭವ. ಆದರೂ ಛಲ ಬಿಡದೇ ಪ್ರತೀ ಕಟ್ಟಡ ತಡಕಾಡಿದೆವು. ಕೆಲವರು, ” ನಿಮ್ಮ ನಾಯಿ ಲ್ಯಾಬ್ರರ್ಡಾ, ಅದು ದೊಡ್ಡ ಜಾತಿಯ ನಾಯಿ, ಅಂತಹ ನಾಯಿಗಳಿಗೆ ನಮ್ಮ ಅಪಾರ್ಟ್‌ಮೆಂಟಿನಲ್ಲಿ ಅವಕಾಶವಿಲ್ಲ. ಏನಿದ್ದರೂ ಚಿಕ್ಕ ತಳಿಗಳಿಗೆ ಮಾತ್ರ ಪ್ರವೇಶ’ ಎಂದರು. ಇನ್ನಿತರರು, “ದೊಡ್ಡ ಜಾತಿಯ ನಾಯಿಗಳು ಇಲ್ಲಿಯ ನಿವಾಸಿಗಳು ಬಳಸುವ ಲಿಫ್ಟ್ ಉಪಯೋಗಿಸುವ ಹಾಗಿಲ್ಲ. ಲಗೇಜ್ ಸಾಗಿಸುವ ಲಿಫ್ಟಲ್ಲಿ ಮಾತ್ರ ಸಂಚರಿಸಬೇಕು. ಬೆಳಗ್ಗೆ ಮತ್ತು ಸಾಯಂಕಾಲ ನಿಗದಿತ ಸಮಯದಲ್ಲಷ್ಟೇ ಲಿಫ್ಟ್ ಚಾಲನೆಯಲ್ಲಿರುತ್ತದೆ’ ಎಂಬ ಕಟ್ಟಳೆಗಳು ನಮಗೆ ವಿಚಿತ್ರವೆನಿಸಿದವು.
ದಾರಿ ತೋಚದೆ ಹತಾಶರಾದೆವು. ಹೊಸ ದೇಶ, ಹೊಸ ಜೀವನ – ಯಾವುದೂ ಖುಷಿ ಕೊಡಲಿಲ್ಲ. ಹೊಸ ಗೆಳೆಯರಲ್ಲಿ ಪಕ್ಕನೆ ನಮ್ಮ ಕಷ್ಟ ಹೇಳಿಕೊಳ್ಳದಿದ್ದರೂ, ಒಮ್ಮೆ ಕಾಫೀ ಕುಡಿಯುವಾಗ, ಸಹೋದ್ಯೋಗಿ ಶ್ವಾನ ಪ್ರಿಯರೊಬ್ಬರು, ರಿಯಲ್ ಎಸ್ಟೇಟ್ ಏಜೆಂಟರು ಕಮಿಷನ್ ಪಡೆದರೂ ತಕ್ಕ ಮನೆ ಹುಡುಕಿಕೊಡುತ್ತಾರೆ ಎಂಬ ಸಲಹೆ ನೀಡಿದರು. ಅದು ಸರಿ ಎನಿಸಿತು. ಭಾರತೀಯ ಮೂಲದ ಸಾವಿರಾರು ಏಜೆಂಟ್‌ರಲ್ಲಿ ಯಾರು ಹಿತವರು ನಮಗೆ ಎಂದು ಗೊಂದಲಕ್ಕೀಡಾದೆವು.
ಕೊನೆಗೊಬ್ಬ ಮಹಾನುಭಾವರಲ್ಲಿ ಹಲವು ತೆರನಾದ ಮನೆಗಳ ಪಟ್ಟಿ ನೋಡಿದೆವು. ನಮ್ಮ ನಾಯಿಗೆ ಪ್ರವೇಶವಿದೆಯೊ ಎಂದರೆ, “ಬಾಡಿಗೆ ಮನೆಯಲ್ಲಿ ಮೊದಲು ವಾಸಿಸಿ, ಅನಂತರ ನಾಯಿಯನ್ನು ಕರೆಸಿಕೊಳ್ಳಿ. ಮಾಲಕರಿಗೆ ಕೇಳುವ ಗೊಡವೆಗೆ ಹೋಗಬೇಡಿ, ನಿಮ್ಮನ್ನು ಥಟ್ಟನೆ ಮನೆ ಖಾಲಿ ಮಾಡಿ ಎಂದು ಹೇಳುವ ಅಧಿಕಾರ ಅವರಿಗಿಲ್ಲ’ ಎಂದರು. ನಾಯಿಯ ಉಲ್ಲೇಖ ಮಾಡದೇ ಎಗ್ರಿಮೆಂಟ್ ಮಾಡಿಕೊಂಡು ಮುಂದೆ ಪೇಚಿಗೆ ಸಿಲುಕಿದರೆ ಎಂಬ ಪ್ರಶ್ನೆಗೆ ಆತನಲ್ಲಿ ಉತ್ತರವಿರಲಿಲ್ಲ. ಏಜೆಂಟರ ಕೈಬಿಟ್ಟಾಯಿತು.
ಆಗಲೇ ತಿಂಗಳೆರಡಾಗಿತ್ತು. ಮುಂದೇನು?! ಭಾರತೀಯ ಕಿರಾಣಿ ಅಂಗಡಿ ನಡೆಸುವಾತನಿಗೆ ಕೇಳಿದೆವು. ಆತ,” ಅಂತರ್ಜಾಲದಲ್ಲಿ ನೀವು ಮನೆ ಹುಡುಕುತ್ತಿದ್ದೀರಿ ಎಂದು ಜಾಹೀರಾತು ನೀಡಿ, ಮನೆಯ ಮಾಲಕರೇ ನಿಮ್ಮನ್ನು ಸಂಪರ್ಕಿಸುತ್ತಾರೆ, ಗುಡ್ ಲಕ್’ ಎಂದು ಹಾರೈಸಿದ. ಇದನ್ನೂ ಒಮ್ಮೆ ಪ್ರಯತ್ನಿಸೋಣವೆಂದು ಮರುದಿನವೇ ಅಂತರ್ಜಾಲದಲ್ಲಿ ನಮ್ಮ ಜಾಹೀರಾತು ನೀಡಿದೆವು. ಶಾಲೆಗೆ ಹತ್ತಿರದ, ಸೂಪರ್ ಮಾರ್ಕೆಟ್ ಪರಿಧಿಯಲ್ಲಿರುವ 24 ಗಂಟೆ ಇಂಟರ್‌ನೆಟ್ ಸೌಲಭ್ಯವಿರುವ ಶ್ವಾನ ಪ್ರಿಯ ಮನೆಯನ್ನು ಬಾಡಿಗೆಗೆ ಹುಡುಕುತ್ತಿರುವ ಭಾರತೀಯ ಮೂಲದ ಸಸ್ಯಹಾರಿ ಐವರ ಕುಟುಂಬ, ಜತೆಗೆ ಬಾಡಿಗೆ ದರ ಸಾಧಾರಣ ಎಷ್ಟಿರಬೇಕು ಎಂಬೆಲ್ಲ ಮಾಹಿತಿ ಹೊತ್ತ ನಮ್ಮ ಜಾಹೀರಾತು ಪ್ರಕಟಗೊಂಡಿತು.
ಲೆಕ್ಕವಿಲ್ಲದಷ್ಟು ಏಜೆಂಟರೇ ಸಂಪರ್ಕಿಸಿದರು. ಕೈಗೆಟುಕುವ ಬಾಡಿಗೆ ಇದ್ದರೆ – ಮೂಲ ಸೌಕರ್ಯಗಳು ದೂರ, ಶಾಲೆಗೆ ಹತ್ತಿರವಿದ್ದರೆ-ಶ್ವಾನ ಪ್ರಿಯ ಮನೆಯಲ್ಲ, ಎಲ್ಲವೂ ಸಮ್ಮತಿ ಎಂದರೆ ಬಾಡಿಗೆ ದುಬಾರಿ. ಊಹೂ ಮತ್ತೆ ನಿರಾಶೆ. ಕೊನೆಗೊಬ್ಬ ಬಾಬ್ ಎಂಬ ವ್ಯಕ್ತಿ ಸಂಪರ್ಕಿಸಿದ. ತನ್ನ ಮನೆ ಇಂತಲ್ಲಿ ಇದೆ, ಬಾಡಿಗೆ ಇಷ್ಟು. ಬೇಕಿದ್ದರೆ ಮನೆಯ ಚಿತ್ರಗಳನ್ನು ಕಳಿಸುತ್ತೇನೆ ಎಂದ. ಈಗಿದ್ದ ಮನೆಯಿಂದ 4-5 ನಿಮಿಷಗಳ ನಡಿಗೆಯಲ್ಲಿತ್ತು ಆತನ ಮನೆ. ಮಾರುತ್ತರದಲ್ಲಿ ಮನೆಯ ಚಿತ್ರಗಳನ್ನು ಕಳಿಸಿದ. ನಮ್ಮ ಅಪೇಕ್ಷೆಗೆ ತಕ್ಕ ಮನೆ. ಮರುದಿನವೇ ಯಜಮಾನರು ಮನೆಗೊಂದು ಸುತ್ತು ಹಾಕಿ ಬರುವೆ ಎಂದು ಹೊರಟರು. ಮನೆ ಒಪ್ಪುವಂತಿದೆ, ಮನೆಗೆ ಬಣ್ಣ ಬಳಿಯುತ್ತಿದ್ದರು ಎಂಬ ಮಾಹಿತಿ ಹೊತ್ತು ತಂದರು. ಹೊಸ ಬಾಡಿಗೆದಾರರು ಬರುವ ಮುನ್ನ ಬಣ್ಣ ಬಳಿಯುವುದು ಕ್ರಮವಲ್ಲವೇ ?! ಎಂದು ನಾನು ದನಿಗೂಡಿಸಿದೆ.
ಅಬ್ಬಾ, ಕೊನೆಗೂ ಮನೆ ಸಿಕ್ಕಿತಲ್ಲ ಎಂದು ನಿಟ್ಟುಸಿರುಬಿಟ್ಟೆವು. ಅತನಿಗೆ ನಮ್ಮ ಸಮ್ಮತಿ ತಿಳಿಸಿದೆವು. ಮುಂದಿನ ಹೆಜ್ಜೆ ಕುರಿತು ನಮ್ಮ ಮತ್ತು ಅವನ ನಡುವೆ ಸಂಭಾಷಣೆ ಶುರುವಾಯಿತು. ತಾನು ತನ್ನ ಮಗಳ ಕ್ಯಾನ್ಸರ್ ಚಿಕಿತ್ಸೆಗೋಸ್ಕರ ಸದ್ಯ ಅಮೆರಿಕದಲ್ಲಿದ್ದೇನೆ. ಮನೆಯ ಬೀಗವನ್ನು ತನ್ನ ಗೆಳೆಯರು ನೀಡುತ್ತಾರೆ. ಬಹಳಷ್ಟು ಜನರು ಬಾಡಿಗೆಗೆ ಕೇಳುತ್ತಿದ್ದಾರೆ. ಇದು ತನ್ನ ಮಡದಿಯ ಬ್ಯಾಂಕ್ ಅಕೌಂಟ್ ನಂಬರ್. ಇಲ್ಲಿ ನೀವು ಮುಂಗಡ ಹಣ ನೀಡಿ ಬುಕ್ ಮಾಡಿ ಎಂದ. ಅದೇಕೋ ಮೋಸ ಹೋಗುತ್ತಿದ್ದೇವೊ ಎಂಬ ಸಂಶಯ ಶುರುವಾಯಿತು. ಆತನಿಗೆ ಉತ್ತರಿಸುವ ಮೊದಲು ಅಲ್ಲಿಯ ಬಣ್ಣ ಬಳಿಯುವ ಕೆಲಸಗಾರರನ್ನು ಮಾತನಾಡಿಸಿಯೇ ಬರೋಣವೆಂದು ನಿರ್ಧರಿಸಿದೆವು. ಪುನ: ಆ ಮನೆಯ ಬಾಗಿಲು ಬಡಿದೆವು. ” ಈ ಮನೆ ಬಾಬ್ ಎಂಬವರಿಗೆ ಸೇರಿದ್ದಾ? ಬಾಡಿಗೆಗೆ ಕೊಡುವ ತಯಾರಿ ನಡೆಯುತ್ತಿದೆಯೋ’ ಎಂದು ಕೇಳಿದೆವು. ಎದುರಿನ ವ್ಯಕ್ತಿ ಒಮ್ಮೆ ಅವಕ್ಕಾಗಿ, “ನೀವು ಯಾರು? ಬಾಬ್ ಯಾರು ? ನಿಮಗೆ ಇದು ಬಾಡಿಗೆಗೆ ನೀಡುವುದು ಎಂದು ಹೇಳಿದವರಾರು?’ ಎಂದೆಲ್ಲ ಕೇಳಿದ.
ಆತನಿಗೆ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದೆವು. ಆತ ಎಲ್ಲವನ್ನೂ ತಾಳ್ಮೆಯಿಂದ ಕೇಳಿ ಮುಗುಳ್ನಕ್ಕು, “ಕೆಲವು ದಿನಗಳ ಹಿಂದಷ್ಟೆ ಈ ಮನೆಯನ್ನು ನಾನು ಖರೀದಿಸಿದ್ದೇನೆ. ಮಾರಾಟದ ಸಮಯದಲ್ಲಿ ಮನೆಯ ಚಿತ್ರಗಳು ಅಂತರ್ಜಾಲದಲ್ಲಿ ಲಭ್ಯವಿತ್ತು. ಅದನ್ನು ಕದ್ದು ಬಾಬ್ ನಿಮಗೆ ಮೋಸ ಮಾಡುವವನಿದ್ದ. ನಿಮ್ಮ ಸಮಯೋಚಿತ ಪ್ರಜ್ಞೆ ಮೆಚ್ಚುವಂತದ್ದು. ಬಹಳಷ್ಟು ಮೋಸಗಾರರಿದ್ದಾರೆ. ಹುಷಾರಾಗಿರಿ’ ಎಂದು ಕೈಕುಲುಕಿದ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ. ಮನಮೆಚ್ಚಿದ ಮನೆ ಎಟುಕಲಿಲ್ಲ ಎಂಬ ದು:ಖಕ್ಕಿಂತ ಮೋಸಹೋಗಿವುದರಿಂದ ಬಚಾವಾದೆವಲ್ಲ ಎಂದು ಸಮಾಧಾನಪಟ್ಟೆವು. ಬಾಬ್‌ಗ ಇವನ್ನೆಲ್ಲ ವಿವರಿಸಲು ಹೋಗದೇ ಜನರಿಗೆ ಮೋಸಮಾಡದೆ ಕಷ್ಟ ಪಟ್ಟು ದುಡಿದು ಸಂಪಾದಿಸು, ನಿನಗೆ ಒಳ್ಳೆಯದಾಗಲಿ ಎಂದು ಈಮೇಲ್ ಮಾಡಿದೆವು. ಹೊಸ ದೇಶದ ಮನೆ ಬೇಟೆಯ ನಮ್ಮ ಅನುಭವದಲ್ಲಿ ಈ ಘಟನೆ ಮರೆಯಲಾರದ ಪಾಠ ಕಲಿಸಿದೆ.
ಟೊರಂಟೊ