ನಾನು ಅಮ್ಮ.. ಅಮ್ಮ.. ಎಂದು ಕೂಗಿದಾಗ ಓಗೊಡುವುದಷ್ಟೇ ಅಲ್ಲದೇ ತನ್ನ ಸರ್ವಸ್ವದ ಜತೆಗೆ ಓಡಿ ಬರುವ, ನನ್ನ ಕಷ್ಟಕ್ಕೆ ತನ್ನ ಕರುಳನ್ನು ಕರಗಿಸಿಕೊಳ್ಳುವ, ನಾನು ಏನೂ ಹೇಳದಿದ್ದರೂ ಅರ್ಥೈಸಿಕೊಳ್ಳುವ, ನನಗಾಗಿ ಸದಾ ಇರುವ ಒಂದು ಜೀವ ನನ್ನ ಅವ್ವ. ನಾನು ಈ ಜಗತ್ತಿಗೆ ಬರುವ ಮುಂಚೆಯೇ ನಾನು ಹೇಗಿರಬೇಕೆಂದು ಕನಸು ಕಂಡು, ನಾನಿನ್ನೇನು ಈ ಜಗತ್ತಿಗೆ ಕಾಲಿಡುವೆ ಅಂತ ತಿಳಿದಾಗ ಸಂಭ್ರಮಿಸಿ ನನ್ನ ಆರೈಕೆಯ ಪರಿಯ ಯೋಜನೆಯನ್ನು ಹಾಕಿ, ನಾನು ಬಂದ ತತ್‌ಕ್ಷಣ ತನ್ನನ್ನೇ ಮರೆತು ನನ್ನನ್ನೇ ಜೀವನವನ್ನಾಗಿಸಿಕೊಳ್ಳುವ ಕರುಣಾಮಯಿ.
ಅಮ್ಮ ಎಂದರೆ ಏನೂ ಹರುಷವೋ ಎಂಬಂತೆ ನನ್ನ ಬಾಲ್ಯದಲ್ಲಿ ಅವಳನ್ನು ಬಿಟ್ಟು ನಾನು ಯಾವುದೇ ವಿಷಯದ ಬಗ್ಗೆ ಯೋಚನೆ ಮಾಡಿದ್ದೇ ಇಲ್ಲ. ಪ್ರತೀ ಗಳಿಗೆಗೂ ಅಮ್ಮ ಪ್ರತಿಯೊಂದು ವಿಷಯದ ಬಗ್ಗೆ ಗಮನಹರಿಸಿ ನನ್ನ ಕಾಳಜಿ ವಹಿಸುವಾಗ ನಾನೇಕೆ ತಲೆ ಕೆಡಿಸಿಕೊಳ್ಳಬೇಕು, ಎಲ್ಲವನ್ನೂ ಅಮ್ಮನ ಉಡಿಯಲ್ಲಿ ಹಾಕಿ ನಾನು ಮಾತ್ರ ತೋಳಿನಲ್ಲಿ ಹಾಯಾಗಿ ಕುಳಿತುಕೊಳ್ಳುವೆ.
ಅಮ್ಮನ ತೋಳು ಯಾವುದೇ ಬಿಸಿನೆಸ್ ಕ್ಲಾಸ್ ಸೀಟಿಗೂ ಹೋಲಿಕೆಯಿಲ್ಲ, ಸುಖವೆಂದರೆ ಅಮ್ಮನ ತೋಳಿನಲ್ಲಿ ಮಲಗುವುದು. ಅಪ್ಪ ಒಳ್ಳೆಯ ಬ್ರ್ಯಾಂಡ್‌ನ ಗಾಡಿಯನ್ನು ತಂದರೂ ನನಗೆ ಅಮ್ಮನ ತೋಳೇ ಬೇಕು. ಮಲಗಿದಾಗ ಅಮ್ಮ ಇನ್ನೇನು ನಾನು ಎದ್ದುಬಿಡುತ್ತೇನೆ, ನಿದ್ದೆ ಹಾಳಾಗುತ್ತದೆ ಎಂದು ತೋಳು ಎಷ್ಟು ನೋವಾದರೂ ನನಗೆ ಮಾತ್ರ ಯಾವುದೇ ಅಡಚಣೆ ಇಲ್ಲದಂತೆ ನೋಡಿಕೊಳ್ಳುತ್ತಾಳೆ. ಇನ್ನು ಊಟದ ವಿಷಯದಲ್ಲಿ ತನಗೆ ಎಷ್ಟೇ ಕಷ್ಟವಿದ್ದರೂ ನನಗೆ ಊಟ ಮಾಡಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ.
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ನನ್ನ ಮಗು ಜೀವನದಲ್ಲಿ ಮುಂದೆ ಹೋಗಬೇಕು, ಒಂದು ದೊಡ್ಡ ಹು¨ªೆಯಲ್ಲಿರಬೇಕು, ಅದಕ್ಕಾಗಿ ಈಗಿನಿಂದಲೇ ಮಗುವಿನ ಆವಶ್ಯಕತೆಯನ್ನು ತಿಳಿದುಕೊಂಡು ಒಂದೊಂದೇ ವಿಷಯವನ್ನು ಕಲಿಸುತ್ತ ಜೀವನದ ಪಾಠಗಳನ್ನೂ ಹೇಳಿಕೊಡುತ್ತ ಪ್ರೋತ್ಸಾಹಿಸುತ್ತಾಳೆ. ಯಾವುದೇ ಒಂದು ಚಟುವಟಿಕೆ ಇರಲಿ ತನ್ನ ಮಗು ಮುಂದೆ ಬರಬೇಕೆಂದು ಆಶಿಸುತ್ತಾಳೆ. ಭಾಷಣವನ್ನು ಬರೆದು ಕೊಟ್ಟು ಓದಿಸಿ ವೇದಿಕೆಯ ಮೇಲೆ ಧೈರ್ಯದಿಂದ ನಿಂತು ಹೇಳುವ ಸಾಮರ್ಥ್ಯವನ್ನು ತುಂಬುತ್ತಾಳೆ. ಯಾವುದೇ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಇದ್ದರೆ ಅದನ್ನು ಬರೆಸಿ, ಅಭ್ಯಸಿಸಿ ಬಹುಮಾನ ಪಡೆಯುವಂತೆ ಮಾಡುತ್ತಾಳೆ. ಅದೇ ರೀತಿ ನೃತ್ಯ ಹಾಡುಗಳಿದ್ದರಂತೂ ನನಗೆ ಬಣ್ಣ ಬಣ್ಣದ ಬಟ್ಟೆ ಹಾಕಿ ಮುಖಕ್ಕೆಲ್ಲ ಬಣ್ಣ ಹಚ್ಚಿ ಝಗಮಗಿಸುವ ಹಾಗೆ ಮಾಡಿ ನಾನು ಕಂಗೊಳಿಸುವಂತೆ ಮಾಡುತ್ತಾಳೆ. ಇಷ್ಟೆಲ್ಲ ನನ್ನ ಬಗ್ಗೆ ಯೋಚಿಸುವ ಅಮ್ಮ ತನ್ನ ದಿನಚರಿಯ 90 ಪ್ರತಿಶತ ಸಮಯವನ್ನು ನನಗಾಗಿ ಮುಡಿಪಾಗಿಡುವ ತ್ಯಾಗಮಯಿ.
ಇನ್ನು ಕಾಲೇಜಿಗೆ ಹೊರಟ ಮೇಲಂತೂ ಅವಳಿಗೆ ನನ್ನ ಮೇಲೆ ಎಲ್ಲಿಲ್ಲದ ಕಾಳಜಿ. ತನ್ನ ಎಲ್ಲ ಬಟ್ಟೆಗಳನ್ನ ಏನಾದರೂ ಉಪಾಯ ಮಾಡಿ ನನಗೆ ಬರುವಂತೆ ಹೋಲಿಸಿ ನಾನೂ ಎಲ್ಲರಂತೆ ಅಚ್ಚುಕಟ್ಟಾಗಿ ಸುಂದರವಾಗಿ ಕಾಣುವಂತೆ ಮಾಡುತ್ತಾಳೆ. ತನ್ನ ಸೀರೆಗಳನ್ನೆಲ್ಲ ನನಗೆ ಧಾರೆ ಎರೆಯುತ್ತಾಳೆ.
ಇನ್ನೇನು ಮಾಡುವೆ ಮಾಡಬೇಕೆಂದಾಗ ತನಗೆ ಬಂದ ಸ್ಥಿತಿಯು ನನ್ನ ಮಗುವಿಗೆ ಬರಬಾರದೆಂದು ಬಹಳ ಯೋಚಿಸಿ ಒಳ್ಳೆಯ ಹುಡುಗ ಹಾಗೂ ಮನೆತನವನ್ನು ನೋಡುತ್ತಾಳೆ. ಮದುವೆಯಾದ ಅನಂತರ ಮಗುವಿಗೆ ಯಾವುದೇ ರೀತಿಯ ಕಷ್ಟವಾಗಬಾರದೆಂದು ತಾನೂ ತಗ್ಗಿ ಬಗ್ಗಿ ನಡೆದು, ಮಗಳಿಗೂ ಅದನ್ನೇ ಮಾಡು ಎನ್ನುತ್ತಾಳೆ. ಮೊಮ್ಮಕ್ಕಳು ಬಂದ ಅನಂತರ ಮತ್ತೆ ಅ ಆ ಇ ಈ ಎಂಬಂತೆ ಮೊಮ್ಮಕ್ಕಳಿಗೂ ಅದೇ ರೀತಿ ಕಾಳಜಿ ಮಾಡುತ್ತಾಳೆ. ಒಟ್ಟಾರೆಯಾಗಿ ನಾನು 50 ವರ್ಷದ ಮುದುಕನೋ, ಮುದುಕಿಯೋ ಆದರೂ ಕೂಡ ನಾನಿನ್ನು ಅವಳಿಗೆ ಪುಟ್ಟ ಮಗು ಎಂದೇ ಭಾವಿಸಿ ಮೊದಲು ಹೇಗಿದ್ದಳ್ಳೋ ಹಾಗೆಯೇ ಕಾಳಜಿ ಮಾಡುತ್ತಾಳೆ.
ಆದರೆ ನಾನು ಎಂದಾದರೂ ಅವಳ ಬಗ್ಗೆ ಯೋಚಿಸಿದ್ದೇನೆಯೇ? ಅವಳು ಇರುವ ವಯಸ್ಸಿಗೆ ಅವಳಿಗೆ ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ ಸುಸ್ತಾಗುವುದಿಲ್ಲವೇ? ಅವಳಿಗೂ ಜೀವನದಲ್ಲಿ ಚೆನ್ನಾಗಿರಬೇಕು, ದೇಶ-ವಿದೇಶಗಳನ್ನು ಸುತ್ತಬೇಕು, ಸುಖವಾಗಿ ತಿಂದು ಉಂಡು ಆರಾಮಾಗಿರಬೇಕು ಎನ್ನಿಸುವುದಿಲ್ಲವೇ? ಎಲ್ಲವೂ ಅನ್ನಿಸುತ್ತದೆ ಆದರೆ ಕೇಳುವರ್ಯಾರೂ ಇಲ್ಲ. ಹಾಗಾಗಿ ಬನ್ನಿ ಆದರೆ ನಾನು ಎಂದಾದರೂ ಅವಳ ಬಗ್ಗೆ ಯೋಚಿಸಿದ್ದೇನೆಯೇ? ಅವಳು ಇರುವ ವಯಸ್ಸಿಗೆ ಅವಳಿಗೆ ದೈಹಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ ಸುಸ್ತಾಗುವುದಿಲ್ಲವೇ? ಅವಳಿಗೂ ಜೀವನದಲ್ಲಿ ಚೆನ್ನಾಗಿರಬೇಕು, ದೇಶ-ವಿದೇಶಗಳನ್ನು ಸುತ್ತಬೇಕು, ಸುಖವಾಗಿ ತಿಂದು ಉಂಡು ಆರಾಮಾಗಿರಬೇಕು ಎನ್ನಿಸುವುದಿಲ್ಲವೇ? ಎಲ್ಲವೂ ಅನ್ನಿಸುತ್ತದೆ ಆದರೆ ಕೇಳುವರ್ಯಾರೂ ಇಲ್ಲ. ಹಾಗಾಗಿ ಬನ್ನಿ ಈ ಅಮ್ಮನ ದಿನಾಚರಣೆ ಬರುವ ವರೆಗೆ ಕಾಯುವುದು ಬೇಡ ಇಂದೇ ಅವಳ ಜತೆಗೆ ಕುಳಿತು ಮಾತನಾಡೋಣ.
ಅವಳ ಆಸೆ-ಆಕಾಂಕ್ಷೆಗಳನ್ನು, ಕಷ್ಟ-ಸುಖವನ್ನೂ ತಿಳಿದುಕೊಳ್ಳೋಣ. ಅಮ್ಮ ತನ್ನ ತೋಳಿನಲ್ಲಿ, ಬಗುಲಲ್ಲಿ, ಕಂಕುಳಲ್ಲಿ ಇಟ್ಟುಕೊಂಡು ನನ್ನನ್ನ ಬೆಳೆಸಿದಳು, ಇನ್ನು ಅವಳನ್ನು ನೋಡಿಕೊಂಡು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಇಂದು ನಾನು, ನಾನಾಗಿರುವುದು, ಶಕ್ತಿಯನ್ನು ಪಡೆದುಕೊಂಡಿರುವುದು ಎಲ್ಲಿ ಎಂದರೆ ಅಮ್ಮ ನಿನ್ನ ತೋಳಿನಲ್ಲಿ……
*ಜಯಾ ಛಬ್ಬಿ, ಮಸ್ಕತ್