ನಿಡ್ಪಳ್ಳಿ: ಇಲ್ಲಿಯ ಕೂಟೇಲು ಎಂಬಲ್ಲಿಂದ ನಿಡ್ಪಳ್ಳಿ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಾಂತದುರ್ಗಾ ದೇವಾಲಯ ಸಂಪರ್ಕಿಸುವ ಕಾಲುದಾರಿಯನ್ನು ವಿಸ್ತರಿಸಿ, ರಸ್ತೆಯನ್ನಾಗಿಸಿ ಪರಿವರ್ತಿಸಲು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಹಿಂದೆ ಬೇಸಗೆ ಕಾಲದಲ್ಲಿಯಾದರೂ ಕೂಟೇಲಿನಿಂದ ತೋಡಿನ ಮುಖಾಂತರ ವಾಹನಗಳು ಸಂಚರಿಸಲು ಅವಕಾಶ ಇತ್ತು. ಬರೆ, ಚಿಕ್ಕೋಡಿ, ನಿಡ್ಪಳ್ಳಿ ಶಾಲೆ, ಅಂಗನವಾಡಿ, ಗೋಳಿತ್ತಡಿಗಾಗಿ ನಾಕುಡೇಲು, ಡೊಂಬಟೆಬರಿ ಈ ಪ್ರದೇಶದ ಜನರಿಗೆ ಇದು ಬಹಳ ಹತ್ತಿರವಾದ ದಾರಿಯಾಗಿತ್ತು. ಕೂಟೇಲಿನಲ್ಲಿ ಕಿಂಡಿ ಅಣೆಕಟ್ಟು ಆದ ಬಳಿಕ ಪ್ರದೇಶಕ್ಕೆ ಕುಕ್ಕುಪುಣಿಯಾಗಿ ಸುಮಾರು ಒಂದು ಕಿ.ಮೀ. ಸುತ್ತಾಗಿ ಬರಬೇಕಾಗಿದೆ.
ಹಿಂದೆ ಮಲ್ಲಿಕಾ ಪ್ರಸಾದ್ ಅವರು ಪುತ್ತೂರು ಶಾಸಕರಾಗಿದ್ದ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅನುದಾನ ಮಂಜೂರುಗೊಳಿಸಿ ಕೂಟೇಲು ಎಂಬಲ್ಲಿ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ ಅಣೆಕಟ್ಟು ಮೂಲಕ ಮೂಲಕ ಸಂಚರಿಸಲು ವಾಹನ ಸವಾರರಿಗೆ ಅಡಚಣೆಯಾಗಿದೆ.
ಅಣೆಕಟ್ಟಿನ ಮೇಲೆ ನಾಲ್ಕು ಚಕ್ರದ ವಾಹನ ಚಲಿಸುವಷ್ಟು ಅಗಲ ಇಟ್ಟು ಮುಂದೆ ತೋಡಿನ ಬದಿ ಕಲ್ಲು ಕಟ್ಟಿ ಅಗಲಗೊಳಿಸಲು ಯೋಜನೆ ರೂಪಿಸಲಾಗಿತ್ತು. ಈ ಮೂಲಕ ದಾರಿಯನ್ನು ಅಗಲಗೊಳಿಸಿ ರಸ್ತೆಯಾಗಿ ಪರಿವರ್ತಿಸಲಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಆದರೆ ಅಣೆಕಟ್ಟಿನ ಮೇಲೆ ಸಾಕಷ್ಟು ಸ್ಥಳಾವಕಾಶ ಇದ್ದು, ತೋಡಿನ ಬದಿ ಕಾಲು ದಾರಿ ಮಾತ್ರ ಕಿರಿದಾಗಿದೆ. ನೀಡಿದ ಭರವಸೆಯನ್ನು ಈಡೇರಿಸಲು ವಿಫಲರಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಿರುವ ಕಾಲುದಾರಿ ಸ್ಥಳೀಯ ದೇವಸ್ಥಾನ, ದೈವಸ್ಥಾನ, ಶಾಲೆಗೆ ಬರುವ ಮಕ್ಕಳಿಗೂ, ಅಧಿಕಾರಿಗಳಿಗೂ, ಸಾರ್ವಜನಿಕರಿಗೂ ಬಹಳ ಹತ್ತಿರವಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ನೀರು ಹರಿಯುತ್ತಿರುವಾಗ ಮಕ್ಕಳು ನಡೆದಾಡಲು ಹೆದರುತ್ತಾರೆ. ಈ ಕಾಲುದಾರಿಯನ್ನು ಅಗಲಗೊಳಿಸಲು ಜಾಗದ ಕೊರತೆಯಾಗಿಲ್ಲ. ಆದರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆಯಿದೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತತ್ ಕ್ಷಣ ಯೋಜನೆ ರೂಪಿಸಲಿ
ಕಾಲುದಾರಿಯನ್ನೇ ಅಗಲಗೊಳಿಸಿ ನಾಲ್ಕು ಚಕ್ರದ ವಾಹನ ಬರುವ ಹಾಗಾದರೆ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆ ಇಡಲಾಗಿದ್ದು ತತ್ ಕ್ಷಣ ಇದರ ಬಗ್ಗೆ ಆಸಕ್ತಿ ವಹಿಸಿ ಯೋಜನೆ ರೂಪಿಸಲಿ.
– ರಘುರಾಮ ಆಳ್ವ, ಸ್ಥಳೀಯರು