ನವದೆಹಲಿ: ರಕ್ಷಣಾ ಸಚಿವಾಲಯ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹೈದರಾಬಾದ್‌ನಲ್ಲಿ ಇರುವ ಸಂಸ್ಥೆಯ ಘಟಕದ ಜತೆಗೆ 3,102 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರಿನಲ್ಲಿರುವ ಬಿಇಎಲ್ ಕಚೇರಿ ಜತೆಗೆ ಭಾರತೀಯ ವಾಯುಪಡೆ (ಐಎಎಫ್)ಗೆ ಅಗತ್ಯವಾಗಿರುವ ಅತ್ಯಾಧುನಿಕ ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಯನ್ನು ಪೂರೈಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಮೊತ್ತ 1,993 ಕೋಟಿ ರೂ. ಎಂದು ಬೆಂಗಳೂರಿನಲ್ಲಿ ಬುಧವಾರ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಯನ್ನು ಐಎಎಫ್ಗೆ ಸಿದ್ಧಪಡಿಸಿ ನೀಡುವುದರಿಂದ ಯುದ್ಧ ವಿಮಾನಗಳ ಬಲ ಮತ್ತಷ್ಟು ಹೆಚ್ಚಲಿದೆ. ಇದರ ಜತೆಗೆ ಹಾರಾಟ ಸಂದರ್ಭದಲ್ಲಿ ಉಂಟಾಗಬಹುದಾದ ಬೆಂಕಿ ಆಕಸ್ಮಿಕಗಳ ನಿಯಂತ್ರಣಕ್ಕೆ ಇದು ನೆರವಾಗಲಿದೆ. ಈಗಾಗಲೇ ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಯನ್ನು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ:ಎನ್. ಮಹೇಶ್‌ಗೆ ಬಿಜೆಪಿ ಟಿಕೆಟ್? ಗುಟ್ಟು ಬಿಟ್ಟು ಕೊಟ್ಟ ಮಾಜಿ ಸಿಎಂ ಬಿಎಸ್ ವೈ
ಇನ್ನು ಹೈದರಾಬಾದ್‌ನಲ್ಲಿರುವ ಬಿಇಎಲ್ ಘಟಕದ ಜತೆಗೆ 1,109 ಕೋಟಿ ರೂ. ಮೌಲ್ಯದ ಇನ್‌ಸ್ಟ್ರೆಮೆಂಟೆಡ್ ಇಲೆಕ್ಟ್ರಾನಿಕ್ ವಾರ್‌ಫೇರ್ ರೇಂಜ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಈ ವ್ಯವಸ್ಥೆಯ ಮೂಲಕ ಯುದ್ಧ ವಿಮಾನಗಳಲ್ಲಿ ದಾಳಿಗೆ ಬಳಸುವ ವ್ಯವಸ್ಥೆಯ ಪರೀಕ್ಷೆಗಾಗಿ ಬಳಕೆ ಮಾಡಲಾಗುತ್ತದೆ.