Advertisement

ಸ್ಥಳೀಯರಿಂದ ಪ್ರತಿಭಟನೆಗೆ ನಿರ್ಧಾರ

10:52 PM Sep 26, 2021 | Team Udayavani |

ಕುಂದಾಪುರ: ವಿನಾಯಕ ಥಿಯೇಟರ್‌ ಬಳಿಯಿಂದ ಕೋಡಿ ಪ್ರದೇಶಕ್ಕೆ ತೆರಳುವ ರಸ್ತೆಯಲ್ಲಿ ಎರಡು ಸೇತುವೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗ ಮಳೆಗಾಲದ ನೆಪದಲ್ಲಿ ಕಾಮಗಾರಿ ಸ್ಥಗಿತವಾಗಿದ್ದು ಇನ್ನೂಪುನರಾರಂಭಿಸದ ಕಾರಣ ಸ್ಥಳೀಯರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

Advertisement

ಒಂದು ಸೇತುವೆ ಬಹುತೇಕ ಪೂರ್ಣವಾಗಿದ್ದರೂ ಓಡಾಟಕ್ಕೆ ಇನ್ನೂ ಬಿಟ್ಟುಕೊಟ್ಟಿಲ್ಲ. ಇನ್ನೊಂದು ಕಾಮಗಾರಿ ಆರಂಭದ ಹಂತದಲ್ಲಿದೆ.ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದಿಂದ ಕೋಡಿಯ ಎರಡು ಸೇತುವೆಗಾಗಿ 2 ಕೋ.ರೂ. ವೆಚ್ಚದಲ್ಲಿ ಮಂಜೂರಾಗಿತ್ತು. ಕಾಮಗಾರಿ ಆರಂಭವಾಗಿ ಮಾರ್ಚ್‌, ಎಪ್ರಿಲ್‌ ವೇಳೆಗೆ ಪೂರ್ಣ ಆಗಬೇಕಿತ್ತು. ಲಾಕ್‌ಡೌನ್‌ ಆರಂಭವಾದ ಕಾರಣ ಕಾಮಗಾರಿ ನನೆಗುದಿಗೆ ಬಿತ್ತು.ಜತೆಗೆ ಕಾಮಗಾರಿಯಲ್ಲಿ ಒಂದಷ್ಟು ಮಾರ್ಪಾಡು ಮಾಡಲ್ಪಟ್ಟಿತ್ತು. ಸ್ಥಳೀಯ ಮನೆಗಳು ಬಿರುಕು ಬಿಡತೊಡಗಿದಾಗ ಮೂಲ ನಕ್ಷೆಯಲ್ಲಿ ಒಂದಷ್ಟು ಮಾರ್ಪಾಟು ಮಾಡಲಾಯಿತು.

ತಾತ್ಕಾಲಿಕ ಒಡ್ಡು ತೆರವು
ಈ ಮಧ್ಯೆ ಕಾಮಗಾರಿ ಆರಂಭಿಸಿ ಬಾಕಿಯಾದ ಬಳಿಕ ಮಳೆಗಾಲ ಆರಂಭ ವಾಯಿತು. ಆಗ ತಾತ್ಕಾಲಿಕವಾಗಿ ಮಾಡಿದ್ದ ಒಡ್ಡನ್ನು ತೆರವು ಮಾಡಬೇಕಾಗಿ ಬಂತು. ಇಲ್ಲದಿದ್ದರೆ ಬೀಜಾಡಿ, ಕೋಟೇಶ್ವರ ಮೊದಲಾದೆಡೆಯ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗುವ ಆತಂಕ ಇತ್ತು. ಇದರ ಬಳಿಕ ತಾತ್ಕಾಲಿಕವಾಗಿ ಕೋಡಿ ರಸ್ತೆಯೇ ಓಡಾಟಕ್ಕೆ ನಿರ್ಬಂಧಕ್ಕೊಳಗಾಯಿತು. ಅದಕ್ಕೂ ಮುನ್ನ ಘನವಾಹನಗಳು ಕೋಟೇಶ್ವರ, ಹಳೆ ಅಳಿವೆ ಮೂಲಕ ಓಡಾಟ ಆರಂಭಸಿದ್ದವು. ಫೆಬ್ರವರಿಯಿಂದ ಈಗಿನವರೆಗೂ ಅಲ್ಲಿಯೇ ಓಡಾಡುತ್ತಿವೆ.

ಇದನ್ನೂ ಓದಿ:6 ತಿಂಗಳ ಜೀವಿತಾವಧಿಯಿದ್ದರೂ, 7 ವರ್ಷ ಪೂರೈಸಿದ ಮಾಮ್‌!

ಈಗ ಶಾಲಾ ಕಾಲೇಜುಗಳು ಪ್ರಾರಂಭ
ವಾಗಿವೆ. ಕೋಡಿ ಸಮುದ್ರತೀರ, ಲೈಟ್‌ಹೌಸ್‌, ಸೀವಾಕ್‌ ಮೊದಲಾದೆಡೆಗೆ ಪ್ರವಾಸಿಗರು ಬರುತ್ತಿದ್ದಾರೆ. ಇವರಿಗೆಲ್ಲ ವಿನಾಯಕ ಬಳಿಯಿಂದ ಕೋಡಿಗೆ ಹೋಗಲು ಅಸಾಧ್ಯವಾಗಿರುವುದು ಸಮಸ್ಯೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗಂತೂ ತೀರಾ ಸಮಸ್ಯೆಯಾಗಿದೆ. ರಿಕ್ಷಾ ದವರೂ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಸುತ್ತು ಬಳಸಿ ಹೋಗ ಬೇಕಾದ ಕಾರಣ ಬಾಡಿಗೆ ದರವನ್ನು ಪ್ರಯಾಣಿಕರ ಮೇಲೆಯೇ ಹೇರಬೇಕಿದೆ. ಇಲಾಖೆಯಂತೂ ಕೂಡಲೇ ಕಾಮಗಾರಿ ಆರಂಭ ಎನ್ನುತ್ತಿದೆ. ಆದರೆ ಇದರ‌ ಲಕ್ಷಣ ಕಾಣುತ್ತಿಲ್ಲ. ಇದರಿಂದ ಜನತೆ ಇನ್ನು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

Advertisement

ಶೀಘ್ರ ಆರಂಭ
ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಫೆಬ್ರವರಿಯಲ್ಲಿ ಕೆಲಸದ ಆದೇಶವಾಗಿದ್ದು ಅದರ ಪ್ರಕಾರ ಅವರು ನವಂಬರ್‌ ಒಳಗೆ ಬಿಟ್ಟುಕೊಡಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾಮಗಾರಿ ತತ್‌ಕ್ಷಣ ಆರಂಭಿಸಲಾಗುವುದು.
-ಹರ್ಷವರ್ಧನ್‌,
ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next