Advertisement

ಈ ವರ್ಷವೂ ಪಠ್ಯಕ್ರಮ ಕಡಿತ : ಕಲಿಕಾ ಅಂತರ ಇನ್ನಷ್ಟು ಹೆಚ್ಚು ಸಾಧ್ಯತೆ

07:46 PM Jul 13, 2021 | Team Udayavani |

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.

Advertisement

2020-21ನೇ ಸಾಲಿನಲ್ಲಿ ಕೊರೊನಾದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್‌, ಆಫ್ಲೈನ್‌ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಮತ್ತು ಸದ್ಯ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಶೇ.70ರಷ್ಟು ಪಠ್ಯದಂತೆಯೇ ಇರಲಿದೆ. ಹಾಗೆಯೇ 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪಠ್ಯವನ್ನು ನಿರ್ದಿಷ್ಟ ಶೈಕ್ಷಣಿಕ ತರಗತಿಗೆ ಅನುಗುಣವಾಗಿ ಕಡಿತ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಪ್ರಸಕ್ತ ಸಾಲಿಗೂ 2021-22ನೇ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈಗಾಗಲೇ ದೂರದರ್ಶನದ ಚಂದನ ವಾಹಿನಿ ಮೂಲಕ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪಾಠವನ್ನು ಪ್ರಸಾರ ಮಾಡಲಾಗುತ್ತಿದೆ. ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಮಾಧ್ಯಮದಲ್ಲಿ ತರಗತಿಗಳು ಪ್ರಸಾರವಾಗುತ್ತಿದ್ದು, ಸೋಮವಾರದಿಂದ ಬುಧವಾರದವರೆಗೆ 10ರಿಂದ 8ನೇ ತರಗತಿ, ಗುರುವಾರದಿಂದ ಭಾನುವಾರದವರೆಗೆ 1ರಿಂದ 7ನೇ ತರಗತಿ ಪಾಠ ಬೋಧನೆಯಾಗುತ್ತಿದೆ. ಇದರ ಜತೆಗೆ ಸೇತುಬಂಧ ಕಾರ್ಯಕ್ರಮವೂ ಸ್ಥಳೀಯವಾಗಿ ನಡೆಸಲಾಗುತ್ತಿದೆ. ಆದರೆ, ಭೌತಿಕ ತರಗತಿಗಳು ನಡೆಯದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲೂ ಶೇ.30ರಷ್ಟು ಪಠ್ಯ ಕಡಿತ ಮಾಡಬೇಕಾದ ಅನಿವಾರ್ಯತೆ ಬರಬಹುದು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 2489 ಸೋಂಕಿತರು ಗುಣಮುಖ; 1913 ಹೊಸ ಪ್ರಕರಣ ಪತ್ತೆ

ಪರ್ಯಾಯ ಪಠ್ಯಕ್ರಮ ರಚನೆ:
ಭೌತಿಕ ತರಗತಿ ಆರಂಭವಾಗದೇ ಇದ್ದರೂ, ವಿದ್ಯಾಗಮ ಆರಂಭವಾಗಬಹುದು. ಹೀಗಾಗಿ ವಿದ್ಯಾರ್ಥಿಗಳ ಕಲಿಕೆ ನಿರಂತರತೆಗಾಗಿ ಪರ್ಯಾಯ ಬೋಧನಾ ವಿಧಾನಕ್ಕಾಗಿ ಪರ್ಯಾಯ ಶಿಕ್ಷಣ ಯೋಜನೆಯನ್ನು ಪುನಃ ಆರಂಭಿಸಲು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ಸಿದ್ಧತೆ ಮಾಡಿಕೊಳ್ಳುತ್ತಿದೆ. 2020-21ರಲ್ಲೂ ಪ್ರತಿ ತಿಂಗಳು ಪರ್ಯಾಯ ಶಿಕ್ಷಣ ಬೋಧನೆಯ ಪಠ್ಯ ಹಾಗೂ ಚಟುವಟಿಗಳ ಮಾಹಿತಿಯನ್ನು ಆನ್‌ಲೈನ್‌ ವ್ಯವಸ್ಥೆಯ ಮೂಲಕ ಶಾಲೆಗಳಿಗೆ ತಲುಪಿಸುತ್ತಿದ್ದೇವು.

Advertisement

ಅದರಂತೆ ಶಿಕ್ಷಕರು ಪಾಠಬೋಧನೆ ಮಾಡುತ್ತಿದ್ದರು. ಇದು ರಾಜ್ಯಾದ್ಯಂತ ಏಕರೂಪವಾಗಿ ನಡೆದಿದೆ. ಪ್ರಸಕ್ತ ಸಾಲಿನಲ್ಲೂ ಭೌತಿಕ ತರಗತಿ ವಿಳಂಬವಾದರೂ, ವಿದ್ಯಾಗಮ ಆರಂಭಿಸುವ ಸಾಧ್ಯತೆಯಿದೆ. ಹೀಗಾಗಿ ಪರ್ಯಾಯ ಶಿಕ್ಷಣ ಯೋಜನೆಗೆ ಬೇಕಾದ ಪಠ್ಯ ಹಾಗೂ ಚಟುವಟಿಕೆಗಳ ಪಟ್ಟಿಯನ್ನು ತಯಾರಿಸುವ ಕಾರ್ಯವನ್ನು ಆರಂಭಿಸಲಿದ್ದೇವೆ. ಮುಂದಿನ 10 ತಿಂಗಳ ಪ್ರತಿ ವಾರ ಯಾವ ಯಾವ ಪಾಠ ಮತ್ತು ಚಟುವಟಿಕೆ ಮಾಡಬೇಕು ಎಂಬುದನ್ನು ಸಿದ್ಧಪಡಿಸಿ, ಶಾಲೆಗೆ ನೀಡಲಿದ್ದೇವೆ. ಇದಕ್ಕೆ ಸರ್ಕಾರದ ಅನುಮತಿಯೂ ಬೇಕಾಗುತ್ತದೆ. ಸಮಗ್ರ ಪಾಠವನ್ನು ಸರಳ ರೀತಿಯಲ್ಲಿ ಬೋಧಿಸಲು ಪರ್ಯಾಯ ಶಿಕ್ಷಣ ಯೋಜನೆ ಸಹಕಾರಿಯಾಗಲಿದೆ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್‌.ಮಾರುತಿ ವಿವರ ನೀಡಿದರು.

ಕಲಿಕ ಅಂತರ ಹೆಚ್ಚಳ ಸಾಧ್ಯತೆ ?
ಕಳೆದ ವರ್ಷ ಶೇ.30ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಅದನ್ನು ಈಗ ಸೇತುಬಂಧದ ಮೂಲಕ ಸರಿದೂಗಿಸುವ ಕಾರ್ಯ ನಡೆಯುತ್ತಿದೆಯಾದರೂ, ಪರಿಣಾಮಕಾರಿಯಾಗಿ ಆಗುತ್ತಿಲ್ಲ. ದೂರದರ್ಶನದಲ್ಲಿ ನಿತ್ಯದ ಪಾಠಗಳು ಬರುತ್ತಿವೆ. ಸೇತುಬಂಧ ಕಾರ್ಯಕ್ರಮ ಬೋಧನೆಗೆ ಸರಿಯಾದ ವೇದಿಕೆಯೇ ಇಲ್ಲ. ಡಿಎಸ್‌ಆರ್‌ಟಿ ಯೂಟ್ಯೂಬ್‌ ಚಾನಲ್‌ ಮೂಲಕ ಸೇತುಬಂಧ ಪಾಠಗಳನ್ನು ಬಿಡಲಾಗಿದೆ. ಆದರೆ, ವಿದ್ಯಾರ್ಥಿಗಳು ಯೂಟ್ಯೂಬ್‌ ಮೂಲಕ ಕಲಿಕೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.

ಶಿಕ್ಷಕರಿಗೂ ಕೂಡ ದೂರದರ್ಶನ ತರಗತಿ ಹಾಗೂ ಸೇತುಬಂಧ ಎರಡರಲ್ಲೂ ನಿಗಾ ವಹಿಸಲು ಸಾಧ್ಯಾಗುತ್ತಿಲ್ಲಿ. ಅಲ್ಲದೆ, ಈ ವರ್ಷವೂ ಪಠ್ಯ ಕಡಿತವಾಗಲಿರುವುದರಿಂದ ಕಲಿಕೆಯ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಭೌತಿಕ ತರಗತಿಯಲ್ಲಿ ಸೇತುಬಂಧ ನಡೆದಾಗ ಮತ್ತು ಕಲಿಕಾ ಅಂತರ ಸರಿದೂಗಿಸಲು ಸಾಧ್ಯವಿದೆ. ಆನ್‌ಲೈನ್‌ ಅಥವಾ ಆಫ್ಲೈನ್‌ ವಿಡಿಯೋ ತರಗತಿ ಮೂಲಕ ಸೇತುಬಂಧ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ. ಇದರಿಂದ ಕಲಿಕಾ ಅಂತರ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next