Advertisement

ಸಂಸ್ಕೃತಿ, ಸಂಪ್ರದಾಯ; ಹೆಣ್ಣು ಮಕ್ಕಳ ಹಬ್ಬ ಗೌರಿ ಹುಣ್ಣಿಮೆ…

11:58 AM Aug 29, 2022 | Team Udayavani |

ಹಬ್ಬ ಹರಿದಿನಗಳು ಜನರ ಸಡಗರವನ್ನು ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ ಅವು ಸಂಸ್ಕೃತಿ, ಸಂಪ್ರದಾಯ, ಅಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಹೊತ್ತು ಸಾಗುವ ನೌಕೆಗಳು.

Advertisement

ಗೌರಿ ಹುಣ್ಣಿಮೆ ಬಂತೆಂದರೆ ವಿಶೇಷವಾಗಿ ಮಹಿಳೆಯರಿಗೆ ಸಡಗರದ ವಾತಾವರಣ. ಸಕ್ಕರೆಯಿಂದ ವಿವಿಧ ಬಗೆಯ ಮೂರ್ತಿಗಳ ಮಧ್ಯೆ ದೀಪ, ಜಾನಪದ ಹಾಡುಗಳ ವಿಶಿಷ್ಟ ಸಮ್ಮಿಳಿತ ಇಲ್ಲಿ ಕಂಡುಬರುತ್ತದೆ.

ಪುರಾತನ ಕಾಲದಿಂದಲೂ ಸೀಗೆ ಹುಣ್ಣಿಮೆಯ ಅನಂತರ ಗೌರಮ್ಮನನ್ನು ಮನೆಯಲ್ಲಿ ಕೂಡಿಸುವ ಸಂಪ್ರದಾಯ ರೂಡಿಯಲ್ಲಿದೆ. ಗೌರಿ ಹುಣ್ಣಿಮೆ ಹಬ್ಬದಂದು ಮಣ್ಣಿನಿಂದ ಮತ್ತು ಮರದ ಕಟ್ಟಿಗೆಯಿಂದ ತಯಾರಿಸಿದ ಗೌರಮ್ಮನನ್ನು ಕೂರಿಸುತ್ತಾರೆ. ಈ ಗೌರಮ್ಮನಿಗೆ ಹದಿನೈದು ದಿನಗಳ ಕಾಲ ಪ್ರತೀ ಸಂಜೆಯ ಹೊತ್ತಿನಲ್ಲಿ ಚಂಡು ಹೂ ಮತ್ತು ಇನ್ನಿತರ ವಿಧವಿಧದ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ಗೌರಿಯನ್ನು ನೆನೆದು ಅವಳ ಸಂಕಷ್ಟದ ಕುರಿತಾದ ಜಾನಪದ ಹಾಡುಗಳನ್ನು ಹಿರಿಯ ವಯಸ್ಸಿನ ಮಹಿಳೆಯರು ಹಾಡುತ್ತಾರೆ. ಅನಂತರ ಮಂಗಳಾರತಿ ಮಾಡಿ ಪ್ರಸಾದವನ್ನು ಹಂಚಲಾಗುತ್ತದೆ.

ಗೋಧಿ ಮತ್ತು ಮೈದಾ ಹಿಟ್ಟಿನಲ್ಲಿ ತಯಾರಿಸಿದ ಕಣಕದ ಆರತಿಯನ್ನು ವಿಶೇಷವಾಗಿ ದೇವಿಗೆ ಬೆಳಗಲಾಗುತ್ತದೆ. ಹದಿನೈದು ದಿನಗಳ ಕಾಲ ಗೌರಿಯನ್ನು ಭಕ್ತಿಯಿಂದ ಪೂಜೆ ಮಾಡಿದ ಬಳಿಕ ವಿಶೇಷವಾಗಿ ಅಲಂಕಾರವನ್ನು ಮಾಡಲಾಗುತ್ತದೆ. ಊರಿನ ಹಿರಿಯ ಮಹಿಳೆಯರನ್ನು ಗೌರಮ್ಮನ ಹಾಡುಗಳನ್ನು ಹಾಡಲು ವಿಶೇಷವಾಗಿ ಕರೆತರಲಾಗುತ್ತದೆ. ಎರಡು ಮೂರು ಗಂಟೆಗಳ ಕಾಲ ಗೌರಿಯ ಕುರಿತಾಗಿ ಹಾಡುಗಳನ್ನು ಹೇಳಿ ಗೌರಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಪ್ರತೀ ಮನೆಯ ಹೆಣ್ಣು ಮಕ್ಕಳ ಹೆಸರನ್ನು ಹೇಳುವ ಮೂಲಕ ಹಾಡನ್ನು ಹಾಡಿ ಬಣ್ಣಿಸಲಾಗುತ್ತದೆ.

ಬನ್ನಿ ಮರದ ಕೆಳಗೆ ಗೌರಿಯ ವಿಸರ್ಜನೆ
ಹೆಣ್ಣು ಮಕ್ಕಳು ಹಾಡು ಹೇಳುತ್ತಾ, ಕೋಲಾಟವಾಡುತ್ತಾ ಗೌರಿಯ ವಿಸರ್ಜನೆಗೆ ತೆರಳುತ್ತಾರೆ. ಗದ್ದೆಯ ಬದಿಯಲ್ಲಿರುವ ಬನ್ನಿ ಮರದ ಕೆಳಗೆ ಗೌರಿಯನ್ನಿಟ್ಟು ಮತೊಂದು ಬಾರಿ ಪೂಜೆ ಮಾಡಿ ಹಿಂದಿರುಗುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಬನ್ನಿ ಮರಕ್ಕೆ ದೇವರ ಸ್ಥಾನವಿದೆ.

Advertisement

ಕೃಷಿಕರ ಹಬ್ಬ
ಗೌರಿ ಪ್ರತೀಯೊಂದು ಮನೆಯಲ್ಲಿಯೂ ನೆಲೆಸಿ ಸುಃಖ, ಶಾಂತಿ, ನೆಮ್ಮದಿ ನೀಡಲಿ, ಮತ್ತು ಕಾಲ ಕಾಲಕ್ಕೆ ಮಳೆ, ಬೆಳೆ ಬಂದು ಒಳ್ಳೆಯ ಫ‌ಸಲು ನೀಡಲಿ, ಮನೆಯ ತುಂಬೆಲ್ಲಾ ದವಸ, ಧಾನ್ಯ ತುಂಬಲಿ, ರೈತರಿಗೆ ಸಂತಸ ನೀಡಲಿ ಎಂದು ಆರಾಧಿಸಲಾಗುತ್ತದೆ. ಕೆಲವೆಡೆ ಈ ಹಬ್ಬ ಕೃಷಿಕರ ಹಬ್ಬ ಎಂದೇ ಪ್ರತೀತಿಯನ್ನು ಪಡೆದಿದೆ.

ಓಣಿ ಓಣಿ (ಏರಿಯಾ)ಗಳಿಗೆ ತಿರುಗಾಡಿಕೊಂಡು ಸಕ್ಕರೆ ಗೊಂಬೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮನೆ ಮನೆಗೆ ಹೋಗಿ ಆರತಿ ಬೆಳಗುವ ವಾಡಿಕೆಯೂ ರೂಢಿಯಲ್ಲಿರುವುದು ಈ ಗೌರಿ ಹುಣ್ಣಿಮೆಯ ವಿಶೇಷವಾಗಿದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ಕೂಡ ಕುಟುಂಬಗಳು ಶ್ರದ್ಧೆ, ಭಯ, ಭಕ್ತಿಯಿಂದ ಗೌರಿ ಹುಣ್ಣಿಮೆಯ ಶಿಷ್ಟಾಚಾರಗಳನ್ನು ಪಾಲನೆ ಮಾಡುತ್ತಾ ಬರುತ್ತಿವೆ. ಆಧುನಿಕ ಕಾಲದಲ್ಲೂ ತನ್ನ ಮೂಲ ಸ್ವರೂಪವನ್ನು ಬದಲಿಸದೆ ಮೊದಲಿನಂತೆಯೇ ಗ್ರಾಮೀಣ ಸೊಗಡಿನ ಜಾನಪದ ಶೈಲಿಯಲ್ಲಿ ಗೌರಿ ಹುಣ್ಣಿಮೆ ತನ್ನ ಮೂಲ ಆಚರಣೆ, ಸಡಗರವನ್ನು ಉಳಿಸಿಕೊಂಡು ಬಂದಿದೆ.

 ಅನ್ನಪೂರ್ಣಾ ಕಲಬುರಗಿ ವಿ.ವಿ. 

Advertisement

Udayavani is now on Telegram. Click here to join our channel and stay updated with the latest news.

Next