Advertisement

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

09:39 AM Jan 02, 2025 | Team Udayavani |

ಸಾರ್ವಜನಿಕವಾಗಿ ಓಡಾಡೋ ಹಾಗಿಲ್ಲ, ಮಾತಾಡೋ ಹಾಗಿಲ್ಲ, ಸಂಗೀತ ಕೇಳ್ಳೋ ಹಾಗಿಲ್ಲ, ಹಾಡುವಂತೆಯೂ ಇಲ್ಲ. ತಾಲಿಬಾನ್‌ ಆಡಳಿತ ಮಹಿಳೆಯ ಸ್ವಾತಂತ್ರ್ಯ ಹರಣಕ್ಕೆ ಪಣತೊಟ್ಟ ಬಳಿಕ ಅಫ್ಘಾನಿ ಮಹಿಳೆಯರ ಮೇಲೆ ಹೇರಿರುವ ನಿರ್ಬಂಧಗಳು ಒಂದೆರಡಲ್ಲ. ಹೀಗೆ ಮಹಿಳೆಯನ್ನು ಸಾರ್ವಜನಿಕವಾಗಿ, ಸಾಮಾಜಿಕವಾಗಿ ತಾಲಿಬಾನ್‌ ಎಲ್ಲೆಡೆ ಬ್ಯಾನ್‌ ಮಾಡಿರುವುದಲ್ಲದೇ ಇದೀಗ ಮನೆಗಳ ಕಿಟಿಕಿಯನ್ನೂ ನಿಷೇಧಿಸಿದೆ. ಏನಿದು ತಾಲಿಬಾನ್‌ನ ಮಹಿಳಾ ನಿರ್ಬಂಧ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Advertisement

2021ರಲ್ಲಿ ಅಫ್ಘಾನಿಸ್ಥಾನವನ್ನು ಕೈವಶ ಮಾಡಿಕೊಂಡ ತಾಲಿಬಾನ್‌ ತನ್ನ ಮೂಲ ಭೂತವಾದಿ ಆಡಳಿತವನ್ನು ಜಾರಿಗೆ ತಂದಿದೆ. ದಿನದಿಂದ ದಿನಕ್ಕೆ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಬುರ್ಖಾ ಕಡ್ಡಾಯ, ಒಬ್ಬಂಟಿಯಾಗಿ ಓಡಾಡಲು ನಿಷೇಧ, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಿಕೆ ನಿಷೇಧ ಇತ್ಯಾದಿ ನಿಯಮಗಳನ್ನು ಜಾರಿಗೆ ತಂದ ತಾಲಿಬಾನ್‌, ಈಗ ಹೊಸದೊಂದು ವಿಚಿತ್ರ ಕಾನೂನು ತಂದು ಸುದ್ದಿಯಲ್ಲಿದೆ. ಈ ಹಿಂದೆ ಮಹಿಳೆಯರು ಇರುವ ಮನೆಯ ಕಿಟಕಿಗಳಿಗೆ ಗಾಢ ಬಣ್ಣ ಬಳಿದು ಹೊರಗಿನವರಿಗೆ ಅವರ ಇರುವಿಕೆ ಕಾಣದಂತೆ ಮಾಡಲಾಗಿತ್ತು. ಈಗ ಮಹಿಳೆಯಿರುವ ಮನೆಗಳಲ್ಲಿ ಕಿಟಿಕಿಯೇ ಇರಬಾರದೆಂಬ ನಿಯಮವನ್ನು ತಾಲಿಬಾನ್‌ ಜಾರಿಗೆ ತಂದಿದೆ. ಮನೆಯೊಳಗೆ ಕಾರ್ಯನಿರ್ವಹಿಸುವ ಮಹಿಳೆಯನ್ನು ಹೊರಗಿನಿಂದ ಅನ್ಯಪುರುಷರು ನೋಡುವುದನ್ನು ತಡೆಯಲು ಈ ನಿಯಮ ತಂದಿರುವುದಾಗಿ ತಾಲಿಬಾನ್‌ ಹೇಳಿದೆ.

ತಾಲಿಬಾನ್‌ ಮೊದಲ ಆಡಳಿತ(1996)ದಲ್ಲೂ ಇದೇ ರೀತಿಯ ನಿಯಮಗಳು ಜಾರಿಯಲ್ಲಿದ್ದವು. ಅದೇ ಪ್ರವೃತ್ತಿಯನ್ನೂ ಈಗಲೂ ಮುಂದುವರಿಸಿದೆ. ನಿಯಮಗಳನ್ನು ಉಲ್ಲಂ ಸಿದ ಮಹಿಳೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುವುದು. ಒಟ್ಟಿನಲ್ಲಿ ಮಹಿಳೆ ಪ್ರತೀ ಹೆಜ್ಜೆಯಲ್ಲೂ ಪುರುಷನನ್ನು ಅವಲಂಬಿಸುವಂತೆ ಆಕೆಯ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ.

ಮಹಿಳೆಯ ಹೆಸರಿಗೇ ನಿಷೇಧ!
ಸಾರ್ವಜನಿಕವಾಗಿ ಮಹಿಳೆ ಎಂಬ ಪದವನ್ನೂ ಬಳಸಲು ತಾಲಿಬಾನ್‌ಗೆ ಇಷ್ಟವಿಲ್ಲ. ಅಷ್ಟರ ಮಟ್ಟಿಗೆ ಸ್ತ್ರೀದ್ವೇಷ ಹೊಂದಿರುವ ಈ ಉಗ್ರ ಗುಂಪು, ಮಹಿಳೆಯರಿಗೆ ಕಾಯ್ದಿರಿಸಲಾದ ಪ್ರದೇಶಗಳಿಗೆ ಮಹಿಳೆಯ ಹೆಸರಿರಲಿ, ಮಹಿಳೆ ಎಂಬ ಪದವನ್ನೂ ಬಳಸಿಲ್ಲ. ಈ ಕಾರಣದಿಂದ ಹೆಣ್ಣುಮಕ್ಕಳಿಗಾಗಿಯೇ ಇರುವ ಪಾರ್ಕ್‌ ಒಂದರ ಹೆಸರನ್ನು “ವುಮೆನ್ಸ್‌ ಗಾರ್ಡನ್‌’ನಿಂದ “ಸ್ಪ್ರಿಂಗ್‌ ಗಾರ್ಡನ್‌” ಎಂದು ತಾಲಿಬಾನ್‌ ಬದಲಾಯಿಸಿದೆ.

ಕಣ್ತಪ್ಪಿಸಿ ಶಿಕ್ಷಣ ಪಡೆಯುವ ಮಹಿಳೆ
ಅಫ್ಘಾನಿಸ್ಥಾನದಲ್ಲಿ ಮಹಿಳೆಯು ಶಿಕ್ಷಣ ಪಡೆಯು ವುದೂ ಅಪರಾಧವೇ. ಅಲ್ಲಿ ಮಹಿಳೆಯರಿಗಾಗಿ ಇದ್ದ ಶಿಕ್ಷಣ ಸಂಸ್ಥೆಗಳನ್ನು ತಾಲಿಬಾನ್‌ ತನ್ನ ಆಡಳಿತಾವಧಿಯಲ್ಲಿ ಧಾರ್ಮಿಕ ಕೇಂದ್ರಗಳಾಗಿ ಮಾರ್ಪಾಡು ಮಾಡಿದೆ. ಇದೇ ವೇಳೆ ಮಹಿಳೆಯು ತನ್ನ ಶಿಕ್ಷಣಕ್ಕಾಗಿ ಭೂಗತವಾಗಿ, ನೆಲಮಾಳಿಗೆಗಳಲ್ಲಿ ಶಿಕ್ಷಣ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ರೀತಿ ಶಿಕ್ಷಣ ಪಡೆಯುವ ಸಂದರ್ಭ ಸಿಕ್ಕಿಬಿದ್ದ ಮಹಿಳೆಯರನ್ನು ಗಲ್ಲಿಗೇರಿಸಲಾಗಿದೆ.

Advertisement

ಮಹಿಳೆಯನ್ನು ಹತ್ತಿಕ್ಕುವ ನಿಯಮಗಳು

ಆಫ್ಘಾನ್‌ ಸ್ತ್ರೀಯರು ಸಂಗೀತ ಕೇಳುವಂತಿಲ್ಲ
ಅಫ್ಘಾನಿಸ್ಥಾನದ ಮಹಿಳೆಯರು ಸಂಗೀತ ಆಲಿಸುವುದನ್ನು ಬ್ಯಾನ್‌ ಮಾಡಲಾಗಿದೆ. ಮಹಿಳೆಯ ಧ್ವನಿ ಪುರುಷನಿಗೆ ಉತ್ತೇ ಜಕವಾಗಬಹುದೆಂಬ ಕಾರಣಕ್ಕೆ ಆಕೆ ಸಾರ್ವಜನಿಕವಾಗಿ ಹಾಡುವುದು, ಜೋರಾಗಿ ಓದುವುದನ್ನೂ ನಿಷೇಧಿಸಲಾ ಗಿದೆ. ಸಂಗೀತ ಕೇಳುವುದು ಭೋಗಜೀವನವನ್ನು ಉತ್ತೇಜಿ ಸುತ್ತದೆ. ಇಲ್ಲಿ ಮಹಿಳೆಗೆ ಭೋಗಜೀವನ ನಿಷಿದ್ಧ.

ಮೇಕಪ್‌ ಮಾಡುವಂತಿಲ್ಲ !
ಮಹಿಳೆಯು ಯಾವುದೇ ಮೇಕಪ್‌ ಬಳಸುವುದನ್ನು ನಿಷೇ ಧಿಸಲಾಗಿದೆ. ಈ ಕಾರಣಕ್ಕೆ ಕೆಲವರ್ಷಗಳ ಹಿಂದೆ ಅಫ್ಘಾನಿ ಸ್ಥಾನದಲ್ಲಿ ಬ್ಯೂಟಿ ಪಾರ್ಲರ್‌ಗಳನ್ನೇ ನಿಷೇಧಿಸಲಾಯಿತು. ಇಸ್ಲಾಂನಲ್ಲಿ ಮೇಕಪ್‌ ಹರಾಮ್‌ ಎಂದು ತಾಲಿಬಾನ್‌ ಹೇಳಿದೆ. ಆದರೆ ಅಸಲಿಗೆ ಅಫ್ಘಾನ್‌ ಆರ್ಥಿಕತೆ ಕುಸಿದಿದ್ದು, ಪುರುಷನಿಗೆ ಈ ಮೇಕಪ್‌ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ.

ಮಹಿಳೆಯ ಫೋಟೋ ತೆಗೆಯಬಾರದು
ಮಹಿಳೆಯ ಫೋಟೋ ತೆಗೆಯುವುದು, ವೀಡಿಯೋ ಚಿತ್ರೀಕರಿಸುವುದು ಅಥವಾ ಮಹಿಳೆಯು ಅದಕ್ಕೆ ಸಮ್ಮತಿ ಸುವುದು ಎಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ಆಕೆಯ ಮನೆಯಲ್ಲೂ ಆಕೆಯ ಫೋಟೋವನ್ನು ಇರಿಸುವಂತಿಲ್ಲ. ಪತ್ರಿಕೆ ಅಥವಾ ಪುಸ್ತಕಗಳಲ್ಲೂ ಮಹಿಳೆಯ ಫೋಟೋ ಮುದ್ರಣಗೊಳ್ಳುವಂತಿಲ್ಲ.

ಮನೆಯ ಬಾಲ್ಕನಿಯಲ್ಲಿ ನಿಲ್ಲುವಂತಿಲ್ಲ
ಮಹಿಳೆಯು ತನ್ನ ಮನೆಯಲ್ಲೂ ತನಗೆ ಬೇಕಾದಂತೆ ಓಡಾ ಡುವಂತಿಲ್ಲ. ಮನೆಯ ಒಳಗೂ ಮಹಿಳೆಗೆ ಕೆಲವು ಸ್ಥಳಗಳನ್ನು ನಿರ್ಬಂಧಿಸಲಾಗಿದೆ. ಆಕೆ ತನ್ನ ಮನೆಯ ಬಾಲ್ಕನಿಯಲ್ಲಿ ನಿಲ್ಲುವಂತಿಲ್ಲ, ಇದರಿಂದ ಹೊರ ಪ್ರಪಂಚಕ್ಕೆ ಅವಳ ಇರುವಿಕೆ ಗೋಚರಿಸುತ್ತದೆ.

ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ
ಕ್ರೀಡೆಯಲ್ಲಿ ಭಾಗವಹಿಸುವುದು ಅಥವಾ ಯಾವುದೇ ಕ್ರೀಡಾ ಕೇಂದ್ರ, ಕ್ರೀಡಾ ಕ್ಲಬ್‌ಗಳಿಗೆ ಮಹಿಳೆ ಹೋಗುವುದು, ಕ್ರೀಡೆ ನೋಡುವುದನ್ನೂ ತಾಲಿಬಾನ್‌ ನಿಷೇಧಿಸಿದೆ.

ಮೈಗಂಟುವ ಬಟ್ಟೆ ಬಳಸಬಾರದು
ಅಫ್ಘಾನ್‌ ಮಹಿಳೆಯರು ಬುರ್ಖಾ ಒಳಗೆ ಸಹ ಮೈಗಂಟು ವಂತಹ ಬಟ್ಟೆಯನ್ನು ಧರಿಸುವಂತಿಲ್ಲ. ತೆಳುವಾದ ಬಟ್ಟೆ ಯನ್ನೂ ಧರಿಸುವಂತಿಲ್ಲ. ಅಲ್ಲದೆ ಅತೀ ಸಡಿಲ ಅಥವಾ ಅಗಲವಾದ ಪ್ಯಾಂಟ್‌ಗಳನ್ನೂ ಧರಿಸಲು ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿರುವಾಗ ತಲೆಗೂದಲಿನಿಂದ ಕಾಲೆºರಳೂ ಮುಚ್ಚುವಂತೆ ಬುರ್ಖಾ ಧರಿಸಬೇಕೆಂಬ ನಿಯಮವಂತೂ ಇದ್ದೇ ಇದೆ.

ಪುರುಷರ ಬಸ್‌ನಲ್ಲಿ ಪ್ರಯಾಣ ಸಲ್ಲ
ಅಫ್ಘಾನಿಸ್ಥಾನದಲ್ಲಿ ಪುರುಷ ಹಾಗೂ ಮಹಿಳೆ ಒಂದೇ ಬಸ್‌ನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಅಲ್ಲಿ ಇಬ್ಬರಿಗೂ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಲಾಗಿದೆ. ಪುರುಷರಿರುವ ಬಸ್‌ನಲ್ಲಿ ಮಹಿಳೆಯು ಪ್ರಯಾಣಿಸು ವಂತಿಲ್ಲ. ಅಲ್ಲದೇ ಮಹಿಳೆಯರಿಗೆ ಪ್ರತ್ಯೇಕವಾಗಿರುವ ಬಸ್‌ನಲ್ಲೂ ಮೆಹ್ರಮ್‌ (ಪತಿಯ ಮನೆಯ ಸಂಬಂಧಿಕರು) ಜತೆಗೇ ತೆರಳಬೇಕು ಎಂಬ ವಿಚಿತ್ರ ನಿಯಮ ಇದೆ.

ಗಾಢ ಬಣ್ಣದ ಬಟ್ಟೆಗಳ ಧರಿಸುವಂತಿಲ್ಲ
ಬುರ್ಖಾ ಧರಿಸಿದ ಹೊರತಾಗಿಯೂ, ಬುರ್ಖಾ ಒಳಗೆ ಸಹ ಗಾಢ ಬಣ್ಣದ ಬಟ್ಟೆಗಳನ್ನು ಮಹಿಳೆ ಧರಿಸುವಂತಿಲ್ಲ. ಈ ಗಾಢ ಬಣ್ಣವು ಅನ್ಯ ಪುರುಷನಿಗೆ ಲೈಂಗಿಕವಾಗಿ ಉತ್ತೇಜನ ನೀಡುತ್ತದೆ. ಅದನ್ನು ತಡೆಯಲು ಅವರು ಗಾಢ ಬಣ್ಣದ ಬಟ್ಟೆ ಧರಿಸಬಾರದು ಎಂಬುದು ತಾಲಿಬಾನ್‌ನ ವಾದ.

ಅನ್ಯ ಪುರುಷರೊಂದಿಗೆ ಮಾತು ನಿಷಿದ್ಧ
ಮೆಹ್ರಮ್‌ (ಪತಿಯ ಮನೆಗೆ ಸೇರಿದ ಯಾವುದೇ ಸಂಬಂಧಿ) ಹೊರತುಪಡಿಸಿ ಬೇರೆ ಯಾವುದೇ ಪುರುಷ ನೊಂದಿಗೆ ಮಾತ ನಾಡುವುದು, ಕೈ ಕುಲುಕುವುದನ್ನು ತಾಲಿಬಾನ್‌ ನಿಷೇಧಿಸಿದೆ.

ಹೆಣ್ಣಿನ ಹೆಜ್ಜೆ ಸಪ್ಪಳವೂ ಕೇಳಬಾರದು
ಹೈ ಹೀಲ್ಸ್‌ ಸೇರಿ ಶಬ್ದ ಬರುವಂತಹ ಯಾವುದೇ ಚಪ್ಪಲಿ ಯನ್ನು ಧರಿಸಲು ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಪುರುಷನಿಗೆ ಹೆಣ್ಣಿನ ಹೆಜ್ಜೆಸಪ್ಪಳ ಕೇಳಿದರೆ ಅದು ಲೈಂಗಿಕ  ವಾಗಿ ಉತ್ತೇಜನ ನೀಡುತ್ತದೆ ಎಂಬ ನಂಬಿಕೆಯಿಂದ ಈ ನಿಯಮ ತರಲಾಗಿದೆ ಎಂದು ತಾಲಿಬಾನ್‌ ಸಮರ್ಥಿಸಿಕೊಳ್ಳುತ್ತದೆ.

ಟಿವಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ
ಟಿವಿ, ರೇಡಿಯೋ ಸೇರಿ ಯಾವುದೇ ಮಾಧ್ಯಮಗಳಲ್ಲಿ ಮಹಿಳೆಯು ಕಾಣಿಸಿಕೊಳ್ಳುವುದು, ಭಾಗಿಯಾಗುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ನದಿ ಅಥವಾ ಕೆರೆಯ ಬಳಿ ಮಹಿಳೆಯು ಒಂಟಿಯಾಗಿ ಹೋಗಿ ಬಟ್ಟೆ ತೊಳೆಯುವುದನ್ನು ನಿಷೇಧಿಸ ಲಾಗಿದೆ. ಮೆಹ್ರಮ…(ಪತಿಯ ಮನೆಗೆ ಸೇರಿದ ಯಾವುದೇ ಸಂಬಂಧಿ) ಹೊರತುಪಡಿಸಿ ಮಹಿಳೆ ಒಂಟಿಯಾಗಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಂತಿಲ್ಲ.

ಸೈಕಲ್‌, ಬೈಕ್‌ ಕೂಡ ಬ್ಯಾನ್‌
ಮಹಿಳೆಯು ಸೈಕಲ್‌ ಚಲಾಯಿಸುವುದನ್ನು ತಾಲಿಬಾನ್‌ ನಿಷೇಧಿಸಿದೆ. ಇದಲ್ಲದೆ ಬೈಕ್‌ನಲ್ಲಿ ಆಕೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಆಕೆಯ ಕುಟುಂಬದ ವ್ಯಕ್ತಿಯೊಂದಿಗೂ ಪ್ರಯಾಣ ಮಾಡದೇ ಇರಲು ತಾಲಿಬಾನ್‌ ಸೂಚಿಸಿದೆ.

ಜೋರಾಗಿ ನಗುವಂತಿಲ್ಲ
ಸಾರ್ವಜನಿಕವಾಗಿಯೂ ಅಥವಾ ಮನೆಯಲ್ಲೂ ಜೋರಾಗಿ, ಗಹಗಹಿಸಿ, ಜೋರಾದ ಧ್ವನಿಯಲ್ಲಿ ನಗುವುದು ಅಥವಾ ಮಾತನಾಡುವುದು ಹರಾಮ್‌ ಎಂದು ಇಸ್ಲಾಮ್‌ ಹೇಳುತ್ತದೆ ಎಂಬುದು ತಾಲಿಬಾನ್‌ ನಂಬಿಕೆ.

ಅನೈತಿಕ ಸಂಬಂಧ ಇದ್ದರೆ ಕಲ್ಲೇಟು!
ಮಹಿಳೆ ಅನೈತಿಕ ಸಂಬಂಧ ಹೊಂದಿರುವುದು ಕಂಡು­ಬಂದರೆ ಆಕೆಗೆ ಸಾರ್ವಜನಿಕವಾಗಿ ಕಲ್ಲು ತೂರಲಾಗುವುದು. ಅಲ್ಲದೆ ಆಕೆಯ ಸಣ್ಣ ತಪ್ಪು ಕಂಡುಬಂದರೂ ಪತಿ ಆಕೆಗೆ ತ್ರಿವಳಿ ತಲಾಖ್‌ ನೀಡಬಹುದು. ಆದರೆ ಪತಿ ಯಾವುದೇ ಅಪರಾಧ ಮಾಡಿದ್ದರೂ ವಿಚ್ಛೇದನ ಪಡೆಯುವ ಹಕ್ಕು ಆಕೆಗಿಲ್ಲ.

– ತೇಜಸ್ವಿನಿ ಸಿ. ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next