Advertisement

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

12:12 PM May 17, 2024 | Team Udayavani |

ಬೆಂಗಳೂರು: ಮನೆಯ ಸ್ನಾನದ ಕೋಣೆಯಲ್ಲಿ ಕೈ ಮತ್ತು ಕತ್ತು ಕೊಯ್ದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸುಬ್ರಹ್ಮಣ್ಯಪುರದ‌ ಬೃಂದಾವನ ಲೇಔಟ್‌ ನಿವಾಸಿ ಪ್ರಭುದ್ಯಾ (20) ಮೃತ ವಿದ್ಯಾರ್ಥಿನಿ. ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಅನುಮಾ ನಾಸ್ಪದ ಸಾವು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮತ್ತೂಂದೆಡೆ ಮೃತ ವಿದ್ಯಾರ್ಥಿನಿ ತಾಯಿ ಸೌಮ್ಯಾ, ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ಕೌಟುಂಬಿಕ ವಿಚಾರವಾಗಿ ಪತಿಯಿಂದ ಪ್ರತ್ಯೇಕವಾಗಿರುವ ಸೌಮ್ಯ, ಪುತ್ರಿ ಹಾಗೂ ಪುತ್ರನ ಜತೆ ಬೃಂದಾವನ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಸೌಮ್ಯಾ, ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಭುದ್ಯಾ ನಗರದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಬುಧವಾರ ಮಧ್ಯಾಹ್ನ ಕಾಲೇಜಿನಿಂದ ಹೊರಟ ಪ್ರಭುದ್ಯಾ, ಸೇಹಿತರ ಜತೆ ಪಾನಿಪುರ ಸೇವಿಸಿ ಮನೆಗೆ ಹೋಗುತ್ತೇನೆ ಎಂದು ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಧ್ಯಾಹ್ನ 3.30ಕ್ಕೆ ಮನೆಗೆ ಬಂದಾಗಲೂ ತಾಯಿಗೆ ಮಾಹಿತಿ ನೀಡಿದ್ದಾರೆ.

ಆ ನಂತರ ಸಂಜೆ 7 ಗಂಟೆ ಅವಧಿಯೊಳಗೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. ಜಿಮ್‌ಗೆ ಹೋಗಿದ್ದ ಸಹೋದರ ಸಂಜೆ 7 ಗಂಟೆ ಸುಮಾರಿಗೆ ಮನೆಗೆ ಬಂದಾಗ ಮನೆಯ ಮುಖ್ಯದ್ವಾರ ಲಾಕ್‌ ಆಗಿತ್ತು. ಹೀಗಾಗಿ ಹಿಂಬದಿ ಬಾಗಿಲ ಮೂಲಕ ಒಳ ಹೋಗಿ ಸ್ನಾನದ ಕೋಣೆಗೆ ಹೋದಾಗ ಪ್ರಭುದ್ಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ತಾಯಿ ಸೌಮ್ಯಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ಮನೆಗೆ ಬಂದ ಸೌಮ್ಯಾ, ಸ್ಥಳೀಯರ ಸಹಾಯ ಪಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಪ್ರಭುದ್ಯಾ ಮೃತಪಟ್ಟಿರುವುದಾಗಿ ದೃಢಪಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಯಲು: ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಭುದ್ಯಾ ಕತ್ತು ಮತ್ತು ಕೈ ಕೊಯ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

Advertisement

ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲನೆ: ಪ್ರಭುದ್ಯಾ ಳದ್ದು ಅನುಮಾನಾಸ್ಪದ ಸಾವು ಎಂದು ಶಂಕೆ ವ್ಯಕ್ತಪಡಿ ಸಿರುವ ಪೊಲೀಸರು, ಘಟನಾ ಸ್ಥಳ ಸುತ್ತ-ಮುತ್ತಲ ಕಟ್ಟಡಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪ್ರಭುದ್ಯಾಳ ಮನೆ ಸಮೀಪದ ಶಂಕಾಸ್ಪದವಾಗಿ ಓಡಾಡುತ್ತಿದ್ದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪುತ್ರಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ: ತಾಯಿ: ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ತಾಯಿ ಸೌಮ್ಯಾ, ಪುತ್ರಿಯದ್ದು ಆತ್ಮಹತ್ಯೆಯಲ್ಲ. ಆಕೆ ಆ ರೀತಿಯ ಹುಡುಗಿ ಅಲ್ಲ. ಮಧ್ಯಾಹ್ನ ನನಗೆ ಕರೆ ಮಾಡಿ ಮಾತನಾಡಿದ್ದಳು. ನಾನು ಸಂಜೆ ಮನೆಗೆ ಬಂದಾಗ ಮುಖ್ಯದ್ವಾರ ಲಾಕ್‌ ಆಗಿತ್ತು. ಹಿಂದಿನ ಬಾಗಿಲು ತೆರೆದಿತ್ತು. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ದೆ. ನನ್ನ ಮಗಳನ್ನು ರಾಕ್ಷಸರು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಮನೆಗೆ ಬಂದ ಸಂದರ್ಭದಲ್ಲಿ ಕಿಟಕಿಯಲ್ಲಿ ನೋಡಿದಾಗ ಮಗಳ ಮೊಬೈಲ್‌ ಸೋಫಾ ಮೇಲಿತ್ತು. ಮಗಳನ್ನು ಆಸ್ಪತ್ರೆ ಕರೆದೊಯ್ದು ವಾಪಸ್‌ ಬಂದು ನೋಡಿದಾಗ ಮೊಬೈಲ್‌ ಇರಲಿಲ್ಲ. ಮೊಬೈಲ್‌ ಕಳ್ಳತನವಾಗಿದೆ. ನಾನು ಸಾಮಾಜಿಕ ಕಾರ್ಯಕರ್ತೆ, ಸಾಕಷ್ಟು ಮಕ್ಕಳನ್ನು ರಕ್ಷಿಸಿದ್ದೇನೆ. ರಾಜಕಾರಣಿಗಳನ್ನು ಪ್ರಶ್ನಿಸಿದ್ದೇನೆ. ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

2 ಡೆತ್‌ನೋಟ್‌ ಪತ್ತೆ: ಕೈ ಬರಹ ಹೋಲಿಕೆ ಇಲ್ಲ: ಇನ್ನು ಘಟನಾ ಸ್ಥಳದಲ್ಲೇ 2 ಡೆತ್‌ನೋಟ್‌ಗಳು ಪತ್ತೆಯಾಗಿದೆ. ಎರಡರಲ್ಲೂ “ಸ್ವಾರಿ ಅಮ್ಮ’ ಎಂದಷ್ಟೇ ಬರೆದಿದೆ. ಆದರೆ, ಪ್ರಭುದ್ಯಾಳ ಕೈ ಬರಹಕ್ಕೂ, ಪತ್ತೆಯಾದ ಡೆತ್‌ನೋಟ್‌ಗಳ ಬರಹಕ್ಕೂ ಪ್ರಾಥಮಿಕ ತನಿಖೆಯಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಮೃತಳ ಮೊಬೈಲ್‌ ನಾಪತೆ !¤:  ಘಟನಾ ಸ್ಥಳ ಪರಿಶೀಲನೆ ವೇಳೆ ಮೃತ ವಿದ್ಯಾರ್ಥಿನಿ ಮೊಬೈಲ್‌ ನಾಪತ್ತೆಯಾಗಿದ್ದು, ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಆಕೆಯ ಮೊಬೈಲ್‌ ನಂಬರ್‌ ಪಡೆದು, ಸಿಡಿಆರ್‌ ಸಂಗ್ರಹಿಸಿದ್ದಾರೆ. ಬುಧವಾರ ಮಧ್ಯಾಹ್ನ ಪ್ರಭುದ್ಯಾ, ಕೆಲ ಸ್ನೇಹಿತರ ಜತೆ ಮಾತನಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಆಕೆಯ ಸ್ನೇಹಿತರಿಂದ ಕೆಲ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೈ ಮತ್ತು ಕತ್ತು ಕೊಯ್ದ ಸ್ಥಿತಿಯಲ್ಲಿ ಪ್ರಭುದ್ಯಾಳ ಮೃತದೇಹ ಪತ್ತೆ ಯಾಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಸದ್ಯಕ್ಕೆ ಗೊತ್ತಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ. ಲೋಕೇಶ್‌ ಬಿ. ಜಗಲಸಾರ, ದಕ್ಷಿಣ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next