ಮೈಸೂರು: ಸರ್ಕಾರ ರಚನೆಯಲ್ಲಿ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಪಿಐಎಂ ಕಾರ್ಯಕರ್ತರು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ ಸಿಪಿಐಎಂ ಕಾರ್ಯಕರ್ತರು, ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದು, ಆ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ. ಬಿಜೆಪಿ ಹಾಗೂ ರಾಜ್ಯಪಾಲರ ನಡೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ.
ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಬಿಜೆಪಿಗೆ ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದು ಖಂಡನೀಯ ಎಂದು ವಿವಿಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಮತದಾರರು ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ನೀಡದ ಕಾರಣ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 104 ಸ್ಥಾನ ಪಡೆದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚಿಸಲು ಅಗತ್ಯವಿರುವ ಸ್ಥಾನಗಳು ಲಭ್ಯವಿಲ್ಲ. ಈ ನಡುವೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕಾಂಗ್ರೆಸ್ 78 ಸ್ಥಾನಗಳನ್ನು ಹೊಂದಿದ್ದರು.
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ 38 ಸ್ಥಾನ ಪಡೆದಿರುವ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದೆ. ಆದರೆ ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹೆಚ್ಚು ಸ್ಥಾನಗಳಿಸಿರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟಿರುವುದು ನ್ಯಾಯ ಸಮ್ಮತವಲ್ಲ ಎಂದು ಆರೋಪಿಸಿದರು.
ಪ್ರತಿ¸ಟನೆಯಲ್ಲಿ ಬಾರತ ಕಮ್ಯುನಿಸ್ಟ್ ಪಕ್ಷದ ಮೈಸೂರು ಶಾಖೆಯ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಸಮಾಜವಾದಿ ಪ.ಮಲ್ಲೇಶ್, ಸಿಪಿಐಎಂ ಮುಖಂಡರಾದ ಬಸವರಾಜು, ಎಲ್.ಜಗನ್ನಾಥ್, ಸಿಪಿಐಎಂಎಲ್ ಜಯರಾಮಯ್ಯ, ಡಾ.ಲಕ್ಷ್ಮೀನಾರಾಯಣ್ ಇನ್ನಿತರರು ಪಾಲ್ಗೊಂಡಿದ್ದರು.