Advertisement
ಬೆಳಪು ಗ್ರಾಮದ ಪಣಿಯೂರಿನಲ್ಲಿ 1952ರಲ್ಲಿ ರೂರಲ್ ಆಸ್ಪತ್ರೆ ನಿರ್ಮಾಣವಾಗಿತ್ತು. ಗ್ರಾಮದ ಹಿರಿಯರಾದ ಎಲ್. ನರಸಿಂಗ ರಾವ್ ಅವರು ಸ್ಥಳದಾನ ಮಾಡಿ, ಆಸ್ಪತ್ರೆಯ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಅಂದಿನ ದ. ಕ. ಜಿಲ್ಲಾ ಬೋರ್ಡ್ ಅಧ್ಯಕ್ಷ ಬಿ. ಮಂಜಯ್ಯ ಹೆಗ್ಗಡೆ ಅವರ ಉದ್ಘಾಟಿಸಿದ್ದರು. ಅಂದಿನಿಂದ ಬೆಳಪು, ಎಲ್ಲೂರು, ಉಚ್ಚಿಲ, ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ 20 ಸಾವಿರಕ್ಕೂ ಅಧಿಕ ಗ್ರಾಮಸ್ಥರಿಗೆ ಇದು ಜೀವನಾಡಿಯಾಗಿತ್ತು.ವಸತಿ ಗೃಹವಿತ್ತು, ಹೆರಿಗೆಗೆ ಅವಕಾಶಗಳಿತ್ತು
ಬೆಳಪು ರೂರಲ್ ಆಸ್ಪತ್ರೆಯು ಮುಂದೆ ಪಣಿಯೂರು ಸರಕಾರಿ ಆಸ್ಪತ್ರೆಯಾಗಿ ಬದಲಾಗಿ ಮುಂದೆ ಆಯುಷ್ ಇಲಾಖೆಯ ಸುಪರ್ದಿಗೆ ಸೇರ್ಪಡೆಗೊಂಡು ಪಣಿಯೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯವಾಗಿ ಮಾರ್ಪಟ್ಟಿತು. 2001ರಲ್ಲಿ ಅಂದಿನ ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿ.ಪಂ. ಅನುದಾನದ ಮೂಲಕ ಬೆಳಪು ಆಯುರ್ವೇದಿಕ್ ಆಸ್ಪತ್ರೆಯ ನವೀಕರಣ ಕಾರ್ಯವೂ ನಡೆದಿತ್ತು. ಅಂದಿನ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ನಡೆದಿವೆಯಾದರೂ, ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಇದು ಸಾಕಾಗಿರಲಿಲ್ಲ.
Related Articles
ಇಲ್ಲಿ ಬೇಕಾದಷ್ಟು ಜಾಗವಿದೆ. ಆದರೆ ಕಟ್ಟಡ ಮರು ನಿರ್ಮಾಣಕ್ಕೆ ಹಣಕಾಸಿನ ಅಗತ್ಯವಿದೆ. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಇಲಾಖೆ ಮುತುವರ್ಜಿ ವಹಿಸಿದ್ದಾರೆ. ಶಾಸಕರು ಮತ್ತು ಸಂಸದರ ನಿಧಿ ಹಾಗೂ ಸ್ಥಳೀಯ ಕೈಗಾರಿಕೆಗಳ ಸಿಎಸ್ಆರ್ ಅನುದಾನದ ಜತೆಗೆ ಸ್ಥಳೀಯವಾಗಿ ಬೆಳೆದು, ದೇಶ-ವಿದೇಶಗಳಲ್ಲಿ ನೆಲೆಸಿರುವ ಉದ್ಯಮಪತಿಗಳ ನೆರವು ಕೂಡಾ ದೊರಕಿದಲ್ಲಿ ಈ ಆಸ್ಪತ್ರೆ ಮರು ನಿರ್ಮಾಣ ಆಗಬಹುದು.
Advertisement
ಈಗ ಆಸ್ಪತ್ರೆ ಸ್ಥಿತಿಗತಿ ಹೇಗಿದೆ?ಬೆಳಪು ಆಯುರ್ವೇದಿಕ್ ಆಸ್ಪತ್ರೆಗೆ 32 ಸೆಂಟ್ಸ್ ಜಾಗವಿದೆ. ಕಟ್ಟಡ ಶಿಥಿಲಗೊಂಡಿದೆ. ವಸತಿಗೃಹದ ಕಟ್ಟಡವಂತೂ ಪಳೆಯುಳಿಕೆಯ ಹಾಗಿದೆ. ಪಣಿಯೂರು ಆಸ್ಪತ್ರೆಯಲ್ಲಿ ಪ್ರಸ್ತುತ ವೈದ್ಯರು, ಗುತ್ತಿಗೆ ಸಿಬಂದಿ ಸೇವೆಯಲ್ಲಿದ್ದಾರೆ. ಜನರಲ್ ಚಿಕಿತ್ಸೆ, ಮದ್ದು, ಮಾಹಿತಿ, ಯೋಗ, ಡಯಟ್ ಕುರಿತಾದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತೀ ದಿನ 30-40 ಮಂದಿ ರೋಗಿಗಳು ಬರುತ್ತಾರೆ. ಬಿಪಿ, ದೈನಂದಿನ ಆರೋಗ್ಯ ತಪಾಸಣೆ, ಡಯಟ್ ಮಾಹಿತಿ, ಚರ್ಮ ರೋಗ ಸಂಬಂಧಿತ ಆರೋಗ್ಯ ತಪಾಸಣೆ, ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಡಲಾಗುತ್ತದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ವೈದ್ಯಾಧಿಕಾರಿ ಡಾ| ಮಾನಸಾ ಪಿ. ಪ್ರಸ್ತಾವನೆ ಸಲ್ಲಿಕೆ
ಚಿಕಿತ್ಸಾಲಯವನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಜಿಲ್ಲಾ ವಲಯದ ಅನುದಾನದಡಿ ಹೊಸ ಕಟ್ಟಡಕ್ಕೆ 30 ಲಕ್ಷ ಅನುದಾನ ಮಂಜೂರುಗೊಂಡು, ಅನುಮೋದನೆ ಹಂತದಲ್ಲಿದೆ. 2 ಅಂತಸ್ತಿನ ಕಟ್ಟಡದ ಆಸ್ಪತ್ರೆ ನಿರ್ಮಿಸಿ, ಅಗತ್ಯ ಪೀಠೊಪಕರಣ, ಸೋಲಾರ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಆಯುರ್ವೇದ ಉದ್ಯಾನವನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉನ್ನತೀಕರಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಶಾಸಕರು, ಸಂಸದರ ನಿಧಿ ಹಾಗೂ ಅದಾನಿ – ಯುಪಿಸಿಎಲ್ ಮತ್ತು ಎಂ.ಆರ್.ಪಿ.ಎಲ್ ಯೋಜನೆಗಳ ಸಿ.ಎಸ್.ಆರ್ ಅನುದಾನಕ್ಕಾಗಿಯೂ ಮನವಿ ಸಲ್ಲಿಸಲಾಗಿದೆ.
-ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಪಂ ಹೊಸ ಕಟ್ಟಡದ ನಿರೀಕ್ಷೆ
ಈಗಿನ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ರಚನೆಗೆ ನೀಲ ನಕಾಶೆ ಸಿದ್ಧಪಡಿಸಲಾಗಿದೆ. ಡಿಸ್ಪೆನ್ಸರಿ ಕೇಂದ್ರಗಳಿಗೆ ಪ್ರತೀ ವರ್ಷ 15 ಲಕ್ಷ ರೂ. ಮೀಸಲಿಡಲಾಗುತ್ತದೆ. ಬೆಳಪು ಡಿಸ್ಪೆನ್ಸರಿ ಕೇಂದ್ರಕ್ಕೆ ಪ್ರಸಕ್ತ ವರ್ಷದಲ್ಲಿ 20 ಲಕ್ಷ ರೂ., ಮುಂದಿನ ವರ್ಷದ 10 ಲಕ್ಷ ರೂ. ಸೇರಿಸಿ 30 ಲಕ್ಷ ರೂ. ಅನುದಾನದ ಕಟ್ಟಡಕ್ಕೆ ನಕ್ಷೆ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ| ಸತೀಶ್ ಆಚಾರ್ಯ, ಜಿಲ್ಲಾ ಆಯುಷ್ ಅಧಿಕಾರಿ ಪೂರ್ಣ ಸಹಕಾರ
ಗ್ರಾಮ ಪಂಚಾಯತ್ನಿಂದ ಪ್ರಸ್ತಾವನೆ ಬಂದಿದೆ. ಇಲಾಖೆ ಕೂಡಾ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಕಾಪು ತಾಲೂಕಿನ ಮೂರು ಸರಕಾರಿ ಆಯುರ್ವೇದ ಆಸ್ಪತ್ರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇಲಾಖೆ, ಶಾಸಕರ ನಿಧಿ, ಸರಕಾರದ ಅನುದಾನದ ಜತೆಗೆ ಖಾಸಗಿ ಸಹಭಾಗಿತ್ವಕ್ಕೂ ಪ್ರಯತ್ನಿಸಲಾಗುವುದು.
-ಸುರೇಶ್ ಶೆಟ್ಟಿ ಗುರ್ಮೆ, ಶಾಸಕರು, ಕಾಪು ಅಭಿವೃದ್ಧಿಗೊಂಡರೆ ಪ್ರಯೋಜನವೇನು?
– ಮೇಲ್ದರ್ಜೆಗೇರಿಸಲ್ಪಟ್ಟು ಸೂಕ್ತ ಸಿಬಂದಿಯ ಸೌಲಭ್ಯ ದೊರಕಿದರೆ ಒಳ ರೋಗಿಗಳ ವಿಭಾಗವನ್ನೂ ಆರಂಭಿಸಬಹುದು.
– ಆಯುಷ್ ವೆಲ್ನೆಸ್ ಸೆಂಟರ್ ಪ್ರಾರಂಭ ಗೊಂಡರೆ ಯೋಗ ಶಿಬಿರ, ವಿವಿಧ ವೈದ್ಯರ ಸೇವೆ, ಪಂಚಕರ್ಮ ಚಿಕಿತ್ಸೆ ಸಹಿತವಾಗಿ ಆಯು ರ್ವೇದ ಪದ್ಧತಿಯ ವಿವಿಧ ಚಿಕಿತ್ಸೆ ನೀಡಬಹುದು.
– ಸಿಬಂದಿ, ಯೋಗ ತರಬೇತುದಾರರನ್ನೂ ನೇಮಿಸಿಕೊಳ್ಳಬಹುದಾಗಿದೆ. -ರಾಕೇಶ್ ಕುಂಜೂರು