ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದು ಶುಕ್ರವಾರಕ್ಕೆ (ನ. 22) 50 ವರ್ಷಗಳು ತುಂಬಿವೆ. ಹೀಗಾಗಿ, ಸುವರ್ಣ ಸಂಭ್ರಮದಲ್ಲಿರುವ ಚಿನ್ನಸ್ವಾಮಿ ಮೈದಾನದ ಸ್ಟಾಂಡ್‌ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರಾದ ಎರ್ರಪಳ್ಳಿ ಪ್ರಸನ್ನ, ಜಿ.ಆರ್.ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಸೈಯದ್ ಕಿರ್ಮಾನಿ, ಬೃಜೇಶ್ ಪಟೇಲ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರ ಹೆಸರನ್ನು ಇಡಲು ಯೋಚಿಸಲಾಗಿದೆ ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹೇಳಿದೆ.
ರಾಜ್ಯದ ದಿಗ್ಗಜ ಕ್ರಿಕೆಟಿಗರ ಹೆಸರನ್ನಿಡಲು ಕೆಎಸ್‌ಸಿಎ ನಿರ್ಧರಿಸಿದ್ದು ಈ ಮೂಲಕ ಭಾರತೀಯ ಕ್ರಿಕೆಟ್‌ಗೆ ಹೊಸ ರೂಪು ನೀಡುವಲ್ಲಿ ಅಪೂರ್ವ ಕೊಡುಗೆ ನೀಡಿರುವ ಕರ್ನಾಟಕದ ದಂತಕತೆಗಳಿಗೆ ಗೌರವ ಸಲ್ಲಿಸಲು ಮುಂದಾಗಿದೆ. ಮೈದಾನದ ಸ್ಯಾಂಡ್‌ಗಳಿಗೆ ಹೆಸರಿಡುವ ಈ ಕ್ರಮ, ದಿಗ್ಗಜರಿಗೆ ಗೌರವ ಸಲ್ಲಿಸುವುದಲ್ಲದೆ ಅವರ ಸಾಧನೆ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಎಂದು ಸಂಸ್ಥೆ ನಂಬಿದೆ ಎಂದು ಕೆಎಸ್‌ಸಿಎ ತನ್ನ ಅಧಿಕೃತ ಜಾಲತಾಣದಲ್ಲಿ ತಿಳಿಸಿದೆ.
ಚಿನ್ನಸ್ವಾಮಿ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ನಾಲ್ವರು ಕನ್ನಡಿಗರು
1974ರ ನ.22ರಿಂದ 27ರ ವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಭಾರತ-ವೆಸ್ಟ್ ಇಂಡೀಸ್ ನಡುವಿನ ಪಂದ್ಯವಿದು. ಇದರಲ್ಲಿ ಕರ್ನಾಟಕದ ಎರ್ರಪಳ್ಳಿ ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಜಿ.ಆರ್.ವಿಶ್ವನಾಥ್ ಮತ್ತು ಬೃಜೇಶ್ ಪಟೇಲ್ ಆಡಿದ್ದರು. ಸರಣಿಯ ಈ ಆರಂಭಿಕ ಪಂದ್ಯವನ್ನು ವಿಂಡೀಸ್ 267 ರನ್‌ನಿಂದ ಗೆದ್ದಿತಲ್ಲದೆ, 5 ಪಂದ್ಯಗಳ ಸರಣಿಯನ್ನೂ 3-2ರಿಂದ ಜಯಿಸಿತ್ತು.