Advertisement

Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ

09:33 PM Nov 26, 2024 | Team Udayavani |

ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ನೀಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. ಇದು ಮಕ್ಕಳಿಗೆ ಶಿಕ್ಷಕರು ಶಿಕ್ಷೆ ನೀಡುವ ವಿಷಯದ ಕುರಿತಾಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮೂರ್‍ನಾಲ್ಕು ದಶಕಗಳ ಹಿಂದೆಗೆ ಹೋಲಿಸಿದರೆ ಶಿಕ್ಷಕರು ವಿದ್ಯಾರ್ಥಿಗಳನ್ನು ದೈಹಿಕವಾಗಿ ಥಳಿಸುವುದಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಯದ್ವಾತದ್ವಾ ಶಿಕ್ಷಿಸಿದ ಘಟನೆಗಳು ವರದಿ­ಯಾಗಿ ಇಡೀ ಶಿಕ್ಷಕ ವರ್ಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡುತ್ತಿರು­ವುದೂ ಸುಳ್ಳಲ್ಲ. ಹೀಗಾಗಿಯೇ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸುವಂತಿಲ್ಲ ಎಂಬ ಕಟ್ಟಪ್ಪಣೆಯನ್ನು ಶಿಕ್ಷಣ ಇಲಾಖೆ ಪದೇಪದೆ ಹೊರಡಿಸುತ್ತಿರುತ್ತದೆ. ಜತೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಹೆತ್ತವರು ಕೂಡ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಶಿಕ್ಷಿಸುವುದನ್ನು ಗಂಭೀರ ಪ್ರಮಾದವೆಂಬಂತೆ ಬಿಂಬಿಸಲಾರಂಭಿಸಿದ್ದಾರೆ. ಮಕ್ಕಳ -ಹೆತ್ತವರ ಈ ಮನೋಭಾವವನ್ನು ಸಮಾಜ ಕೂಡ ಸಮರ್ಥಿಸುತ್ತಲೇ ಬಂದಿದೆ.

Advertisement

ಹಾಗಾದರೆ ಶಾಲೆಗಳಲ್ಲಿ ದುರ್ವರ್ತನೆ ತೋರುವ ಮಕ್ಕಳನ್ನು ದಂಡಿಸುವ ಅಧಿಕಾರವೂ ಶಿಕ್ಷಕರಿಗಿಲ್ಲವೇ, ಹೀಗಾದರೆ ಆ ಮಕ್ಕಳ ಭವಿಷ್ಯ ರೂಪಣೆ ಹೇಗೆ ಸಾಧ್ಯ, ಒಂದು ವೇಳೆ ವಿದ್ಯಾರ್ಥಿಗಳು ಇಂತಹ ಪುಂಡಾಟಿಕೆಯನ್ನು ಮುಂದು­ವರಿಸಿದರೆ ಅದರ ಕಳಂಕ ಮತ್ತೆ ಶಿಕ್ಷಕರಿಗಂಟಲಾರದೇ ಎಂಬೆಲ್ಲ ಪ್ರಶ್ನೆಗಳು ಕಾಡುವುದು ಸಹಜ. ಇವುಗಳನ್ನೇ ಮುಂದಿಟ್ಟು ಈಗ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಇತ್ತೀಚೆಗೆ ವಿದ್ಯಾರ್ಥಿ­ಯೊಬ್ಬ ಶಾಲಾ ಶಿಕ್ಷಣ ಸಚಿವರನ್ನು ಸಂವಾದ ಕಾರ್ಯಕ್ರಮವೊಂದರಲ್ಲಿ ಮುಜುಗ­ರ­ಕ್ಕೀಡು ಮಾಡಿದ ಘಟನೆಯನ್ನು ಪತ್ರದಲ್ಲಿ ಉಲ್ಲೇಖೀಸಿದ್ದೇ ಅಲ್ಲದೆ, ಇಂತಹ ಪ್ರಕರಣಗಳು ಪ್ರತಿನಿತ್ಯ ಎಂಬಂತೆ ಶಾಲೆಗಳಲ್ಲಿ ನಡೆಯುತ್ತಿರುತ್ತವೆ. ಈ ಎಲ್ಲ ಅವಮಾನ, ಅಪಹಾಸ್ಯಗಳನ್ನು ಶಿಕ್ಷಕರು ಎದುರಿಸಬೇಕಾದ ಅಸಹಾಯಕತೆಯಲ್ಲಿ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಳ್ಳಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಯು ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳು ಮತ್ತು ಮಾಡಿಕೊಂಡಿರುವ ಮನವಿ ನಿಜಕ್ಕೂ ಚಿಂತನೀಯ ಮತ್ತು ಇತ್ತ ಶಿಕ್ಷಣ ಇಲಾಖೆ ತುರ್ತು ಲಕ್ಷ್ಯ ಹರಿಸಬೇಕಿದೆ. ಕೌಟುಂಬಿಕ ವ್ಯವಸ್ಥೆಯಲ್ಲಿನ ಬದಲಾವಣೆ, ಶಿಕ್ಷಣ ವ್ಯವಸ್ಥೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸುಧಾರಣೆ ಇವೆಲ್ಲವೂ ವಿದ್ಯಾರ್ಥಿಗಳ ಸಹಿತ ಒಟ್ಟಾರೆ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದು ಶಿಕ್ಷಕರ ಪಾಲಿಗೆ ಬಲುದೊಡ್ಡ ಸವಾಲೇ ಸರಿ. ವಿದ್ಯಾರ್ಥಿಗಳ ಪುಂಡಾಟ ಮಿತಿ ಮೀರಿದ ಸಂದರ್ಭದಲ್ಲಿ ಶಿಕ್ಷಿಸುವ ಅವಕಾಶವನ್ನು ನೀಡಬೇಕು ಎಂಬ ಶಿಕ್ಷಕರ ಬೇಡಿಕೆ ನ್ಯಾಯಯುತವಾದುದೆ.

ಶಿಕ್ಷಣವೆಂದರೆ ಕೇವಲ ಶಿಕ್ಷೆಯಲ್ಲ. ದಂಡಿಸುವುದರಿಂದ ಮಾತ್ರವೇ ಮಕ್ಕಳ ದುಬುìದ್ಧಿಯನ್ನು ತೀಡಲು ಸಾಧ್ಯ ಎನ್ನುವುದು ಆತುರದ ನಿರ್ಧಾರವಾದೀತು. ಆದರೆ ಶಿಕ್ಷೆಯೂ ಕೂಡ ಶಿಕ್ಷಣದ ಒಂದು ಭಾಗ ಎಂಬುದನ್ನು ಮಕ್ಕಳ ಹೆತ್ತವರು, ಸಮಾಜ ಮರೆಯಬಾರದು. ಆದರೆ ಶಿಕ್ಷೆ ಏನಿದ್ದರೂ ಕೊನೆಯ ಅಸ್ತ್ರವಾಗಬೇಕೇ ಹೊರತು ಅದೇ ಮೊದಲ ಹೆಜ್ಜೆಯಾಗಬಾರದು. ಸಕಾರಣಗಳಿಲ್ಲದೆ ಸಣ್ಣಪುಟ್ಟ ತಪ್ಪುಗಳಿಗೂ ವಿದ್ಯಾರ್ಥಿಗಳನ್ನು ಥಳಿಸುವುದು, ದೈಹಿಕವಾಗಿ ಹಿಂಸಿಸುವ ಕೃತ್ಯಕ್ಕೆ ಶಿಕ್ಷಕರು ಮುಂದಾದಲ್ಲಿ ಅದು ವ್ಯತಿರಿಕ್ತ ಪರಿಣಾಮ ಬೀರುವುದು ನಿಸ್ಸಂಶಯ. ಇವೆಲ್ಲದಕ್ಕೂ ಸ್ಪಷ್ಟ ಮಾರ್ಗಸೂಚಿಯೊಂದರ ಅಗತ್ಯವಿದೆ. ಇದರ ಪಾಲನೆಯ ಹೊಣೆಗಾರಿಕೆಯನ್ನು ಆಯಾ ಶಾಲಾ ರಕ್ಷಕ-ಶಿಕ್ಷಕ ಸಂಘಕ್ಕೆ ವಹಿಸಬೇಕು. ಮಾರ್ಗಸೂಚಿಯನ್ನು ಉಲ್ಲಂಘಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯಾಯ ಶಾಲಾಡಳಿತ ಮಂಡಳಿಗೆ ನೀಡಬೇಕು. ಇದರಿಂದ ಇತ್ತಂಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next