ಕಳೆದ ಒಂದೂವರೆ ವರ್ಷದಿಂದ ಭಾರತದೊಂದಿಗೆ ಸುಖಾಸುಮ್ಮನೆ ಸಂಘರ್ಷ ನಡೆಸುತ್ತಲೇ ಬಂದಿರುವ ಕೆನಡಾಕ್ಕೆ ಕೊನೆಗೂ ಜ್ಞಾನೋದಯವಾದಂತೆ ತೋರುತ್ತಿದೆ. ಕಳೆದೊಂದು ವಾರದಿಂದೀಚೆಗೆ ಕೆನಡಾ ಸರಕಾರ ಮತ್ತು ಅಲ್ಲಿನ ಹಿರಿಯ ನಾಯಕರು ಭಾರತೀಯ ನಾಯಕರ ಪರವಾಗಿ ಹೇಳಿಕೆಗಳನ್ನು ನೀಡಲಾರಂಭಿಸಿದ್ದು, ಕೆನಡಾ ಸರಕಾರ ಮೆತ್ತಗಾಗಿರುವುದಕ್ಕೆ ಸಾಕ್ಷಿಯಾಗಿದೆ. ಇದು ಕೆನಡಾದ ದಾಷ್ಟ್ರéಕ್ಕೆ ಭಾರತ ಸರಕಾರ ರಾಜತಾಂತ್ರಿಕ ನೆಲೆಯಲ್ಲಿ ತೋರಿದ ಪ್ರತಿರೋಧಕ್ಕೆ ಲಭಿಸಿದ ಗೆಲುವೇ ಸರಿ.
ಜಾಗತಿಕ ಮಟ್ಟದಲ್ಲಿ ಭಾರತದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಲೇ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಅವರ ಅಪ್ರಬುದ್ಧ ರಾಜತಾಂತ್ರಿಕತೆ ಕೇವಲ ಭಾರತ ಮಾತ್ರವಲ್ಲದೆ ವಿಶ್ವ ರಾಷ್ಟ್ರಗಳಿಂದಲೂ ನಗೆಪಾಟಲಿಗೀಡಾಗಿತ್ತು. ಅಲ್ಲದೆ ಸ್ವತಃ ಕೆನಡಾ ಪ್ರಜೆಗಳು ಕೂಡ ಟ್ರಾಡೊ ವಿರುದ್ಧ ಸಿಡಿದೇಳಲಾರಂಭಿಸಿದ್ದರು. ಇದರ ಹೊರತಾಗಿಯೂ ವೈಯಕ್ತಿಕ ಪ್ರತಿಷ್ಠೆ, ರಾಜಕೀಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಆಧಾರರಹಿತ ಮತ್ತು ತೀರಾ ಬಾಲಿಶತನದ ಆರೋಪಗಳನ್ನು ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದ್ದ ಜಸ್ಟಿನ್ ಟ್ರಾಡೊ ನೇತೃತ್ವದ ಕೆನಡಾ ಸರಕಾರಕ್ಕೆ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ನೀಡಿದ್ದ ಚಿಕಿತ್ಸೆ ಅಕ್ಷರಶಃ ಪರಿಣಾಮ ಬೀರಿದಂತೆ ಈಗ ಭಾಸವಾಗುತ್ತಿದೆ.
ಪ್ರತ್ಯೇಕತಾವಾದಿ, ಖಲಿಸ್ಥಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಪಾತ್ರವಿದೆ ಎಂದು ಈ ಹಿಂದೆ ಆರೋಪ ಮಾಡಿದ್ದ ಸಂದರ್ಭದಲ್ಲಿ ತನ್ನಲ್ಲಿ ಯಾವುದೇ ಬಲವಾದ ಸಾಕ್ಷ್ಯಗಳು ಇರಲಿಲ್ಲ. ಕೇವಲ ಗುಪ್ತಚರ ಮಾಹಿತಿಯನ್ನಾಧರಿಸಿ ಈ ಹೇಳಿಕೆ ನೀಡಿದ್ದೆ ಎನ್ನುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ತಮ್ಮ ಧಾಟಿಯನ್ನು ಬದಲಾಯಿಸಿರುವುದರ ಸುಳಿವು ನೀಡಿದ್ದರು. ಈಗ ಟ್ರಾಡೊ ಅವರ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರ ನಥಾಲಿ ಜಿ. ಡ್ರೊಯಿನ್ ಅವರು ಕೆನಡಾದಲ್ಲಿ ನಡೆದಿರುವ ಗಂಭೀರ ಅಪರಾಧ ಚಟುವಟಿಕೆಗಳಿಗೂ ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೂ ಸಂಬಂಧವಿಲ್ಲ ಎನ್ನುವ ಮೂಲಕ ಈ ಕುರಿತಾಗಿನ ಮಾಧ್ಯಮಗಳ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕುವ ಮೂಲಕ ಭಾರತವನ್ನು ಸಮಾಧಾನಿಸುವ ಕೆಲಸವನ್ನು ಮಾಡಿದ್ದಾರೆ. ಇದರ ಜತೆಗೆ ಕೆನಡಾದಿಂದ ತೆರಳುವ ಭಾರತೀಯರು ಮತ್ತು ಅವರ ಲಗೇಜ್ ಮೇಲಿನ ಹೆಚ್ಚುವರಿ ತಪಾಸಣೆಯ ಆದೇಶವನ್ನೂ ಹಿಂಪಡೆದುಕೊಂಡಿದೆ.
ಸಿಕ್ಖ್ ಪ್ರತ್ಯೇಕವಾದಿ ಗುಂಪಾದ ಖಲಿಸ್ಥಾನಿಗಳಿಗೆ ನೇರ ಬೆಂಬಲ ನೀಡುವ ಜತೆಯಲ್ಲಿ ಪ್ರಮುಖ ಖಲಿಸ್ಥಾನಿ ನಾಯಕರು ಮತ್ತು ಉಗ್ರರಿಗೆ ಆಶ್ರಯ ನೀಡುವ ಮೂಲಕ ಭಾರತದ ವಿರುದ್ಧ ಕೆನಡಾ ಸರಕಾರ ಕತ್ತಿ ಮಸೆಯುತ್ತಲೇ ಬಂದಿದೆ. ಕೆನಡಾ ಸರಕಾರದ ಈ ವರ್ತನೆಯಿಂದಾಗಿ ಅಲ್ಲಿನ ಭಾರತೀಯರು ಅದರಲ್ಲೂ ಮುಖ್ಯವಾಗಿ ಹಿಂದೂಗಳು ಅಭದ್ರತೆಯ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಭಾರತ ಸರಕಾರ ಈಗಾಗಲೇ ರಾಜತಾಂತ್ರಿಕ ಮಾರ್ಗದ ಮೂಲಕ ಕೆನಡಾ ಸರಕಾರದ ಗಮನ ಸೆಳೆದಿದೆ. ಈ ಬೆಳವಣಿಗೆಗಳ ನಡುವೆಯೇ ಕೆನಡಾ ಸರಕಾರ ತನ್ನ ವರಸೆಯನ್ನು ಬದಲಿಸಿರುವುದು ಅಲ್ಲಿನ ಭಾರತೀಯರಲ್ಲಿ ಒಂದಿಷ್ಟು ಆಶಾವಾದ ಮೂಡಿದೆ.
ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಮತ್ತವರ ಸರಕಾರದ ಹೇಳಿಕೆ ಮತ್ತು ನಡೆಯ ನಡುವೆ ತಾಳಮೇಳ ಇಲ್ಲದಿರುವುದು ಸಾಬೀತಾಗಿರುವುದರಿಂದ ಭಾರತ ಒಂದಿಷ್ಟು ಎಚ್ಚರಿಕೆಯ ನಡೆಯನ್ನು ಇರಿಸಬೇಕು. ಕೆನಡಾದಲ್ಲಿನ ಭಾರತೀಯರ ರಕ್ಷಣೆಗೆ ಸೂಕ್ತ ಕ್ರಮ ಮತ್ತು ಖಲಿಸ್ಥಾನಿಗಳ ವಿರುದ್ಧ ಕಾರ್ಯಾಚರಣೆಯ ವಿನಾ ಕೇವಲ ಮುಖಸ್ತುತಿಯ ಮಾತುಗಳಿಗೆ ಮರುಳಾಗದೆ ಈ ದಿಸೆಯಲ್ಲಿ ಕೆನಡಾ ಸರಕಾರದ ಮೇಲಣ ಒತ್ತಡವನ್ನು ಇನ್ನಷ್ಟು ತೀವ್ರಗೊಳಿಸಬೇಕು.